ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಸರ್ಕಾರಿ (ಕನ್ಯಾ) ಹಿರಿಯ ಪ್ರಾಥಮಿಕ ಶಾಲೆಯು ಸರಿಯಾದ ವ್ಯವಸ್ಥೆಯಿಲ್ಲದೆ ಶೋಚನೀಯ ಪರಿಸ್ಥಿತಿಯಲ್ಲಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಹಾಗೂ ಆಡಳಿತಗಾರರು ಗಮನಹರಿಸಬೇಕು ಎಂದು ವೆಲ್ಫೇರ್ ಪಾರ್ಟಿ ಆಗ್ರಹಿಸಿದೆ.
ಕಳೆದ ಹದಿನೈದು ವರ್ಷಗಳಿಂದ ಸರ್ಕಾರಿ ಶಾಲೆಯ ಹಾಗೂ ಆವರಣದ ಸುವ್ಯವಸ್ಥೆಯ ಬಗ್ಗೆ ಇಲಾಖೆ ಗಮನ ಹರಿಸದೆ ತೀರಾ ನಿರ್ಲಕ್ಷ್ಯ ಧೋರಣೆ ತಳೆದಿದೆ. ಮಳೆಗಾಲ ಬಂದರೆ ಸಾಕು ಶಾಲಾ ಕೊಠಡಿಗಳಲ್ಲಿ ನೀರು ಸೋರಿಕೆಯಾಗುತ್ತದೆ. ಶಾಲೆಯ ಆವರಣ ಕೂಡ ಜಲಾವೃತಗೊಳ್ಳುತ್ತಿದೆ. ಇದರಿಂದ ವಿದ್ಯಾರ್ಥಿಗಳ ಜೀವಕ್ಕೂ ಅಪಾಯವಾಗುವ ಸಾಧ್ಯತೆಯಿದೆ” ಎಂದು ವೆಲ್ಫೇರ್ ಪಾರ್ಟಿ ರಾಜ್ಯ ಕಾರ್ಯದರ್ಶಿ ಮುಬೀನ್ ಅಹ್ಮದ್ ಕಳವಳ ವ್ಯಕ್ತಪಡಿಸಿದೆ.
“ಬಹಳ ಹಳೆಯದಾದ ಶಾಲೆಯು ಹಲವಾರು ಸಮಸ್ಯೆಗಳಿಂದ ಕೂಡಿದೆ. ಅಡುಗೆ ಕೋಣೆಯು ಕುಸಿಯುವ ಹಂತದಲ್ಲಿದೆ. ಮಕ್ಕಳು ಶಿಕ್ಷಕರು ಜೀವಭಯದಿಂದ ಓಡಾಡಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಸಂಭಾವ್ಯ ಅನಾಹುತದಿಂದ ತಪ್ಪಿಸಲು ಅಧಿಕಾರಿಗಳು ಶಾಲೆಗೆ ತುರ್ತಾಗಿ ಭೇಟಿ ನೀಡಿ, ಸಮಸ್ಯೆಗಳನ್ನು ಪರಿಹರಿಸಬೇಕು” ಎಂದು ಆಗ್ರಹಿಸಿದ್ದಾರೆ.