ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ವ್ಯಕ್ತಿಯೋರ್ವನಿಗೆ ಗುಂಡು ಹಾರಿಸಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ಮೃತರನ್ನು ಭಾಯ್ ಭಾಯ್ ಗ್ರೂಪ್ ಅಧ್ಯಕ್ಷ ಮುಹಮ್ಮದ್ ಇರ್ಫಾನ್ (40) ಎಂದು ಗುರುತಿಸಲಾಗಿದೆ.
ಮುಹಮ್ಮದ್ ಇರ್ಫಾನ್ ಅವರು ಬಲರಾಮ ಚೌಕ್‌ನಿಂದ ಸ್ಕೂಟಿ ಮೇಲೆ ವಾಡಿ ಪಟ್ಟಣಕ್ಕೆ ತೆರಳುತ್ತಿದ್ದ ವೇಳೆ, ಎದುರಿನಿಂದ ಬಂದ ಶಿಫ್ಟ್ ಕಾರಿನಲ್ಲಿದ್ದ ದುಷ್ಕರ್ಮಿಗಳು ಅವರ ಸ್ಕೂಟಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಡಿಕ್ಕಿ ಹೊಡೆದ ಪರಿಣಾಮ ಇರ್ಫಾನ್ ನೆಲಕ್ಕುರುಳುತ್ತಿದ್ದಂತೆಯೇ ದುಷ್ಕರ್ಮಿಗಳು ಗುಂಡು ಹಾರಿಸಿ, ಬಳಿಕ ಮಚ್ಚು ಮತ್ತು ಚಾಕುವಿನಿಂದ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐ ಎ.ಎಸ್. ಪಾಟೀಲ್, ಪಿಎಸ್‌ಐ ಕೆ. ತಿರುಮಲೇಶ ಹಾಗೂ ಚಿತ್ತಾಪುರ ಪಿಎಸ್‌ಐ ಮಂಜುನಾಥ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಕರ್ತವ್ಯದಲ್ಲಿದ್ದ ಮಹಿಳೆಗೆ ಬಸ್ ಡಿಕ್ಕಿ: ಜೇವರ್ಗಿ ಬಸ್ ನಿಲ್ದಾಣದಲ್ಲಿ ದುರಂತ
ಪಟ್ಟಣದ ಮಧ್ಯಭಾಗದಲ್ಲೇ ನಡೆದ ಈ ಬರ್ಬರ ಹತ್ಯೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.





