ರಾಜ್ಯದಲ್ಲಿ ಸ್ಥಳೀಯ ಸರ್ಕಾರಗಳ ಚುನಾವಣೆಗಳನ್ನು ವಿಳಂಬ ಮಾಡುತ್ತಿರುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದ್ದು, ಕೂಡಲೇ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಿ ಜನಾಧಿಕಾರವನ್ನು ಪುನಃಸ್ಥಾಪಿಸಬೇಕು ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ಕಲಬುರಗಿ ಜಿಲ್ಲಾ ಘಟಕ ಆಗ್ರಹಿಸಿತು.
ಗುರುವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಧರ ಪಾಟೀಲ್, ‘ಮಹಾತ್ಮ ಗಾಂಧೀಜಿ ಪ್ರತಿಪಾದಿಸಿದ್ದ ಗ್ರಾಮಸ್ವರಾಜ್ಯದ ಪರಿಕಲ್ಪನೆ ಹಾಗೂ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳ ಆಶಯಗಳನ್ನು ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ’ ಎಂದು ಆರೋಪಿಸಿದರು.
‘ಸ್ಥಳೀಯ ಆಡಳಿತದಲ್ಲಿ ಜನರ ನೇರ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಪಂಚಾಯತ್ ರಾಜ್ ವ್ಯವಸ್ಥೆ ರೂಪುಗೊಂಡಿದ್ದು, 1957ರ ಬಲವಂತರಾಯ ಮೆಹತಾ ಸಮಿತಿಯ ಶಿಫಾರಸಿನ ಮೇರೆಗೆ ದೇಶದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಗೆ ಬುನಾದಿ ಹಾಕಲಾಯಿತು. ಬಳಿಕ 1993ರಲ್ಲಿ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳ ಮೂಲಕ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸಂವಿಧಾನಾತ್ಮಕ ಸ್ಥಾನಮಾನ ನೀಡಲಾಯಿತು’ ಎಂದು ಅವರು ವಿವರಿಸಿದರು.
‘ಸಂವಿಧಾನದ ಪ್ರಕಾರ ಪ್ರತಿ ಐದು ವರ್ಷಕ್ಕೊಮ್ಮೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದು ಕಡ್ಡಾಯ. ಆದರೆ ಕರ್ನಾಟಕದಲ್ಲಿ ಕಳೆದ ಆರು ವರ್ಷಗಳಿಂದ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ ಚುನಾವಣೆ ನಡೆದಿಲ್ಲ. ಅವಧಿ ಮುಗಿಸಿರುವ ಅನೇಕ ಗ್ರಾಮ ಪಂಚಾಯಿತಿಗಳಿಗೂ ಇನ್ನೂ ಚುನಾವಣೆ ಘೋಷಿಸಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
‘ಚುನಾವಣೆಗಳನ್ನು ಮುಂದೂಡುವ ಮೂಲಕ ಮಹಿಳೆಯರು, ಪರಿಶಿಷ್ಟ ಜಾತಿ-ಪಂಗಡಗಳು ಹಾಗೂ ಹಿಂದುಳಿದ ವರ್ಗಗಳಿಗೆ ದೊರೆತಿರುವ ರಾಜಕೀಯ ಪ್ರಾತಿನಿಧ್ಯ ಮತ್ತು ಸಾಮಾಜಿಕ ನ್ಯಾಯದ ಅವಕಾಶಗಳನ್ನು ಕಸಿದುಕೊಳ್ಳಲಾಗುತ್ತಿದೆ. ಇದು ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಗಳಿಗೆ ವಿರುದ್ಧವಾದ ನಡೆ’ ಎಂದು ಟೀಕಿಸಿದರು.
‘ಚುನಾವಣೆಗಳಿಲ್ಲದ ಕಾರಣ ಸ್ಥಳೀಯ ಸಂಸ್ಥೆಗಳಿಗೆ ಕೇಂದ್ರ ಹಣಕಾಸು ಆಯೋಗದ ಅನುದಾನ ಸಮರ್ಪಕವಾಗಿ ದೊರೆಯುತ್ತಿಲ್ಲ. ಪರಿಣಾಮ ಕುಡಿಯುವ ನೀರು, ನೈರ್ಮಲ್ಯ, ಬೀದಿ ದೀಪ, ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳ ನಿರ್ವಹಣೆಯಲ್ಲಿ ಗ್ರಾಮ ಪಂಚಾಯಿತಿಗಳು ಹಣಕಾಸಿನ ಸಂಕಷ್ಟ ಎದುರಿಸುತ್ತಿವೆ’ ಎಂದು ಹೇಳಿದರು.
‘ಪ್ರಸ್ತುತ ಗ್ರಾಮ ಪಂಚಾಯಿತಿಗಳ ಆಡಳಿತವನ್ನು ಅಧಿಕಾರಿಗಳ ಮೂಲಕ ನಡೆಸಲಾಗುತ್ತಿದ್ದು, ಒಬ್ಬ ಅಧಿಕಾರಿಗೆ ಹಲವು ಪಂಚಾಯಿತಿಗಳ ಜವಾಬ್ದಾರಿ ವಹಿಸಲಾಗಿದೆ. ಇದರಿಂದ ಜನರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ದೊರೆಯದೆ ಸ್ಥಳೀಯ ಆಡಳಿತ ವ್ಯವಸ್ಥೆ ಕುಸಿಯುತ್ತಿದೆ’ ಎಂದು ದೂರಿದರು.
ಇದನ್ನು ಓದಿದ್ದೀರಾ? ಯಾದಗಿರಿ | ರೈತ ತರಬೇತಿ ಕೇಂದ್ರ ಉದ್ಘಾಟಿಸಿದ ನಿರ್ಮಲಾ ಸೀತಾರಾಮನ್
‘ರಾಜ್ಯ ಸರ್ಕಾರವು ರಾಜ್ಯ ಚುನಾವಣಾ ಆಯೋಗಕ್ಕೆ ಸಂಪೂರ್ಣ ಸಹಕಾರ ನೀಡಿ ಕೂಡಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಬೇಕು. ಜನರಿಂದ ಆಯ್ಕೆಯಾದ ಪ್ರತಿನಿಧಿಗಳ ಆಡಳಿತವನ್ನು ಪುನಃ ಸ್ಥಾಪಿಸುವ ಮೂಲಕ ಗ್ರಾಮಸ್ವರಾಜ್ಯದ ಆಶಯವನ್ನು ಉಳಿಸಬೇಕು’ ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಅನೀಲ್ ರಾಠೋಡ್, ಒಕ್ಕೂಟದ ಪದಾಧಿಕಾರಿಗಳು ಹಾಗೂ ವಿವಿಧ ಗ್ರಾಮ ಪಂಚಾಯಿತಿಗಳ ಮಾಜಿ ಸದಸ್ಯರು ಉಪಸ್ಥಿತರಿದ್ದರು.





