ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳು ಶೇ.10ಕ್ಕಿಂತ ಕಡಿಮೆ ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆಗಳ ಪಟ್ಟಿಯಲ್ಲಿದ್ದು, ಇಲ್ಲಿ ಹಸಿರು ಹೊದಿಕೆ ಹೆಚ್ಚಿಸಲು ಬರುವ ಜೂನ್ 1 ರಿಂದ 1 ಲಕ್ಷ ಸಸಿ ನೆಡುವ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದರು.
ಕಲಬುರಗಿಯ ಐವಾನ್-ಎ-ಶಾಹಿ ಅತಿಥಿ ಗೃಹದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಕಲಬುರಗಿ-ಶೇ5, ಬಳ್ಳಾರಿ-ಶೇ 7, ಯಾದಗಿರಿ ಮತ್ತು ರಾಯಚೂರು ತಲಾ ಶೇ3ರಷ್ಟು ಮಾತ್ರ ಅರಣ್ಯ ಪ್ರದೇಶ ಇದೆ. ಹೀಗಾಗಿ ಜೂನ್ 1 ರಿಂದ ಈ ನಾಲ್ಕು ಜಿಲ್ಲೆಗಳಲ್ಲಿ, ವಿಶೇಷವಾಗಿ ರಸ್ತೆ ಬದಿಯಲ್ಲಿ 1 ಲಕ್ಷ ಸಸಿ ನೆಡೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಮುಂದಿನ 10-15 ವರ್ಷದಲ್ಲಿ 10-20 ರಷ್ಟು ಅರಣ್ಯ ಪ್ರಮಾಣ ಹೆಚ್ಚಿಸಲು ಯೋಜನೆ ರೂಪಿಸಲಾಗುತ್ತಿದೆʼ ಎಂದರು.
ʼಚಿತ್ತಾಪುರ ಕ್ಷೇತ್ರದ ಮಾಡಬೂಳದಲ್ಲಿ 60 ಕೋಟಿ ರೂ. ವೆಚ್ಚದಲ್ಲಿ ಸುಮಾರು 40 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗುತ್ತಿರುವ ಪ್ರಾಣಿ ಸಂಗ್ರಹಾಲಯ ಕಾರ್ಯ ಭರದಿಂದ ಸಾಗಿದ್ದು, ಇಂದು ಕಾಮಗಾರಿ ವೀಕ್ಷಿಸಿದ್ದೇನೆ. ಡಿಸೆಂಬರ್ ಅಂತ್ಯದೊಳಗೆ ಇದನ್ನು ಲೋಕಾರ್ಪಣೆ ಮಾಡಲಾಗುವುದು. ಪ್ರಾಣಿ ಸಂಗ್ರಹಾಲಯ ಸ್ಥಾಪನೆಯಾದ ನಂತರ ಹುಲಿ, ಸಿಂಹ, ಚಿರತೆ ಸೇರಿದಂತೆ ಅನೇಕ ಪ್ರಾಣಿಗಳ ವೀಕ್ಷಣೆಯ ಅವಕಾಶ ದೊರೆಯಲಿದೆ. ಇಲ್ಲಿನ ಸಿಬ್ಬಂದಿಗಳಿಗೆ ಮೈಸೂರು, ಬನ್ನೇರುಘಟ್ಟದಲ್ಲಿ ತರಬೇತಿ ನೀಡಲಾಗುವುದುʼ ಎಂದು ತಿಳಿಸಿದರು.
ಇದನ್ನೂ ಓದಿ : ಬೀದರ್ | ಎಸ್‌ಎಸ್‌ಎಲ್‌ಸಿ ಪರೀಕ್ಷೆ : ಮಾತ್ರಭಾಷೆ ಕನ್ನಡದಲ್ಲೇ 4,321 ವಿದ್ಯಾರ್ಥಿಗಳು ಫೇಲ್!
ಪತ್ರಿಕಾಗೋಷ್ಠಿಯಲ್ಲಿ ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್, ಶಾಸಕ ತಿಪ್ಪಣ್ಣ ಕಮಕನೂರ, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಶರಣು ಮೋದಿ, ಮುಖಂಡ ನೀಲಕಂಠ ಮೂಲಗೆ ಇದ್ದರು.