ಕಲಬುರಗಿ ಜಿಲ್ಲಾದ್ಯಂತ ಅತಿವೃಷ್ಟಿಯಿಂದ ರೈತರು ಬೆಳೆದಿದ್ದ ತೊಗರಿ, ಹೆಸರು, ಉದ್ದು, ಸೋಯಾಬಿನ್, ಹತ್ತಿ ಸೇರಿದಂತೆ ಇತರೆ ಬೆಳೆಗಳು ಹಾನಿಯಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಶೀಘ್ರದಲ್ಲಿ ರೈತರ ನೆರವಿಗೆ ಧಾವಿಸಿ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಅಹೋರಾತ್ರಿ ಧರಣಿ ನಡೆಸಿದರು.
ಸೋಮವಾರ ಕಲಬುರಗಿ ನಗರದ ಜಗತ್ ವೃತ್ತದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿಯಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದ ಮುಖಂಡರು, ಬೆಳೆ ನಷ್ಟದ ಸಮೀಕ್ಷೆ ನಡೆಸಿ ತ್ವರಿತವಾಗಿ ಬೆಳೆ ವಿಮೆ ನೀಡಬೇಕು. ಬಾಕಿ ಉಳಿದ ಬೆಳೆ ವಿಮೆ ಪಾವತಿಸಲು ಕ್ರಮಕೈಗೊಳ್ಳಬೇಕು. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.
‘ಕಲಬುರಗಿ ಜಿಲ್ಲೆ ತೊಗರಿ ನಾಡು ಎಂದೇ ಖ್ಯಾತಿ ಪಡೆದಿದ್ದು, ಇಲ್ಲಿನ ಆರ್ಥಿಕತೆ ನಿರ್ಧಾರವಾಗುವುದೇ ತೊಗರಿ ಬೆಳೆದಿಂದಲೇ ಎಂಬುದು ವಾಸ್ತವ. ಆದರೆ, ಅತಿವೃಷ್ಟಿ-ಅನಾವೃಷ್ಟಿಯಿಂದ ರೈತರ ಬೆಳೆ ಸಂಪೂರ್ಣ ನೆಲಕಚ್ಚಿದ್ದು, ನಿರೀಕ್ಷೆಯಂತೆ ಬೆಳೆ ಬಾರದೆ ರೈತರು ಕಂಗಾಲಾಗಿದ್ದಾರೆʼ ಎಂದರು.
ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಪ್ಪ ಮಮಶೆಟ್ಟಿ ಮಾತನಾಡಿ, ʼಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜಲಾಶಯ, ನದಿಗಳು ಬಹುತೇಕ ಭರ್ತಿಯಾಗಿ ಪ್ರವಾಹ ಎದುರಾಗಿದೆ. ಇದರಿಂದ ನದಿ, ಜಲಾಶಯ ಸುತ್ತಲಿನ ಪ್ರದೇಶದಲ್ಲಿನ ಬೆಳೆ ಸಂಪೂರ್ಣ ಮುಳುಗಡೆಯಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ರೈತರು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾನೆʼ ಎಂದು ಕಳವಳ ವ್ಯಕ್ತಪಡಿಸಿದರು.
ಕಲಬುರಗಿಯನ್ನು ಅತಿವೃಷ್ಟಿ ಜಿಲ್ಲೆ ಎಂದು ಘೋಷಿಸಿ, ವಿಶೇಷ ಪ್ಯಾಕೇಜ್ ಘೋಷಿಸಬೆಕು. ಬಾಕಿ ಉಳಿದ 315 ಕೋಟಿ ಬೆಳೆ ವಿಮೆ ಹಣ ಬಿಡುಗಡೆ ಶೀಘ್ರದಲ್ಲಿ ರೈತರ ಖಾತೆಗೆ ಜಮೆ ಮಾಡಬೇಕು. ಕನಿಷ್ಠ ಬೆಂಬಲ ಬೆಲೆ ಜಾರಿಗೊಳಿಸಿ ಎಂ.ಎಸ್. ಸ್ವಾಮಿನಾಥನ್ ಆಯೋಗ ಜಾರಿಗೊಳಿಸುವುದು ಸೇರಿದಂತೆ ಇತರೆ ಬೇಡಿಕೆಗಳ ಪತ್ರ ಸರ್ಕಾರಕ್ಕೆ ಸಲ್ಲಿಸಿದರು.
ಇದನ್ನೂ ಓದಿ : ಯಾದಗಿರಿ | ಹೋರಾಟಗಾರರ ಮೇಲಿನ ಸುಳ್ಳು ಅಟ್ರಾಸಿಟಿ ಪ್ರಕರಣ ರದ್ದತಿಗೆ ಆಗ್ರಹಿಸಿ ಪ್ರತಿಭಟನೆ
ಪ್ರತಿಭಟನೆಯಲ್ಲಿ ಅಧ್ಯಕ್ಷ ಅಲ್ತಾಫ ಇನಾಮದಾರ್ ಕರ್ನಾಟಕ ಪ್ರಾಂತ ರೈತ ಸಂಘ ಪದಾಧಿಕಾರಿಗಳು, ಮಹಿಳೆಯರು, ರೈತರು, ಉಪಸ್ಥಿತರಿದ್ದರು.