ಕೊಡಗು ಜಿಲ್ಲೆ, ಪೊನ್ನಂಪೇಟೆ ತಾಲ್ಲೂಕು ಕರಡಿಕಲ್ಲು ಅತ್ತೂರು ಕೊಲ್ಲಿ ಅರಣ್ಯ ಭೂಮಿ ಅಕ್ರಮ ಪ್ರವೇಶ, ಅತಿಕ್ರಮಣಕ್ಕೆ ಪ್ರಚೋದನೆ ನೀಡಿದರೆಂದು ನಾಗರಹೊಳೆ ವನ್ಯಜೀವಿ ಉಪ ವಿಭಾಗದ ಅಧಿಕಾರಿಗಳು ಅಪರಾಧ ಪ್ರಕರಣ ದಾಖಲಿಸಿ, ನೀಡಿದ್ದ ವಿಚಾರಣಾ ನೊಟೀಸ್ ಸಂಭಂದ ನಟ ಚೇತನ್ ಅಹಿಂಸಾ ಹಾಗೂ ಹೋರಾಟಗಾರರು ಹಾಜರಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯಿದೆ ಹಾಗೆ ಸಂವಿಧಾನತ್ಮಕ ನಡೆಯಲ್ಲಿದ್ದು ಯಾವುದೇ ಕಾನೂನು ಕಟ್ಟಲೆ ಮೀರಿರುವುದಿಲ್ಲ ಎಂದರು.
ಈದಿನ. ಕಾಮ್ ಜೊತೆ ಮಾತನಾಡಿದ ನಟ ಚೇತನ್ ಅಹಿಂಸಾ ಅವರು ” ಆದಿವಾಸಿ, ಬುಡಕಟ್ಟು ಸಮುದಾಯದ ಜನರ ಹೋರಾಟ ನಿರಂತರವಾಗಿದ್ದು. ಅದರ ಭಾಗವಾಗಿ ಬೆಂಬಲಿಸಿ ಅತ್ತೂರು ಕೊಲ್ಲಿ ಹಾಡಿ ಸ್ಥಳಕ್ಕೆ ಭೇಟಿ ನೀಡಿದ್ದೆ. ಆದರೇ, ಯಾವುದೇ ಪ್ರಚೋದನೆ ಒಡ್ಡಿಲ್ಲ, ಅಕ್ರಮವಾಗಿ ಪ್ರವೇಶಿಸುವ ಪ್ರಶ್ನೆಯೇ ಇಲ್ಲ. ಯಾಕಂದರೆ ಎಲ್ಲರ ಸಮ್ಮುಖದಲ್ಲಿ ತೆರಳಿರುವೆ. ಜೊತೆಗೆ ತೆರಳಿರುವ ಸ್ಥಳದಲ್ಲಿ ಅಂದು ಯಾವುದೇ ಅರಣ್ಯ ಇಲಾಖೆ ನಾಮಫಲಕ ಇರಲಿಲ್ಲ. “
” ನಾನು ನಟನಾಗಿದ್ದರು ಸಾಮಾಜಿಕ ಹೋರಾಟಗಾರನಾಗಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ. ರಾಜ್ಯದ ಯಾವುದೇ ಮೂಲೆ ಆಗಿರಲಿ, ಕೊಡಗಿನ ಆದಿವಾಸಿ ಸಮುದಾಯದ ಹೋರಾಟಗಳಾಗಲಿ ಬೆಂಬಲಿಸಿ ಭಾಗವಹಿಸಿ ಹೋರಾಟದ ಭಾಗವಾಗುವೆ. ಅದರಂತೆ, ಸಂವಿಧಾನದ ಆಶಯದಂತೆ ಇದುವರೆಗೆ ಯಾವುದನ್ನೂ ಪಡೆಯಲಾರದೆ ತಮ್ಮ ಅಸ್ಮಿತೆಗಾಗಿ, ತಮ್ಮ ಬದುಕಿಗಾಗಿ, ತಮ್ಮ ಜಾಗಕ್ಕಾಗಿ ಹೋರಾಟ ಮಾಡುತ್ತಿರುವ ಆದಿವಾಸಿ ಸಮುದಾಯದ ಕುಟುಂಬಗಳ ಹೋರಾಟಕ್ಕೆ ಬೆಂಬಲಿಸುವುದು ಅಪರಾಧವಲ್ಲ.”

” ಈ ಸಮಾಜದಲ್ಲಿ ಹೋರಾಟ ನಡೆಸಲು, ಭಾಗಿಯಾಗಲು, ಬೆಂಬಲಿಸಲು ಎಲ್ಲರಿಗೂ ಅವಕಾಶವಿದೆ. ಹೀಗಿರುವಾಗ, ಇಲ್ಲ ಸಲ್ಲದ ಆರೋಪ ಹೊರಿಸಿ ಹೋರಾಟ ಹತ್ತಿಕ್ಕಲು ಪ್ರಕರಣ ದಾಖಲಿಸುವುದು, ನೊಟೀಸ್ ನೀಡುವುದು ಆಗುತ್ತಿದೆ. ಕಳೆದ ಶುಕ್ರವಾರ ವಿಚಾರಣೆಗೆ ಹಾಜರಾಗಿ ಮಾಹಿತಿ ನೀಡಿರುವೆ. ಅಹಿಂಸಾ ಮಾರ್ಗಿಯಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯಿದ್ದು, ಸಂವಿಧಾನದ ಮೇಲೆ ಗೌರವವಿದೆ. ಅದರ ಆಶಯದಂತೆ ನಡೆಯುತ್ತೇನೆ. ಹಾಗೆಯೇ, ಇಂದಾಗಲಿ, ಮುಂದಾಗಲಿ ಶೋಷಿತರ, ಆದಿವಾಸಿಗಳ ಪರ ಹೋರಾಟ ನಡೆಸುತ್ತಿರುತ್ತೇನೆ ” ಎಂದರು.

ರಾಷ್ಟ್ರೀಯ ಆದಿವಾಸಿ ಒಕ್ಕೂಟದ ವಿಜಯಸಿಂಗ್ ರೋನಾಲ್ಡ್ ಡೇವಿಡ್ ಅವರು ಮಾತನಾಡಿ ” ನಾನು ಸರಿ ಸುಮಾರು ನಲವತ್ತು ವರ್ಷಗಳಿಂದ ಆದಿವಾಸಿಗಳ ಪರವಾಗಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಹೋರಾಟ ಮಾಡುತ್ತಾ ಇರುವೆ. ಈಗಲೂ ಸಹ ಅತ್ತೂರು ಕೊಲ್ಲಿ ಹೋರಾಟಕ್ಕೆ ಬೆಂಬಲ ನೀಡಿ ಹೋರಾಟದಲ್ಲಿ ಭಾಗಿಯಾಗಿರುವೆ. ನಾನು ಪ್ರಚೋದನೆ ನೀಡುವುದಕ್ಕೆ ಬಂದವನಲ್ಲ. ಅವರ ಸ್ವಯಂ ನಿರ್ದಾರ. ಸರ್ಕಾರಗಳು, ಇಲಾಖೆ ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳದೆ ಕಾಡಿನಿಂದ ಹೊರ ದಬ್ಬಿದ್ದಾರೆ. ಇಂದಿಗೂ ಸರಿಯಾಗಿ ಯಾವುದೇ ಸವಲತ್ತು ಲಭಿಸಲಿಲ್ಲ. ಭೂಮಿಯಾಗಲಿ, ನಿವೇಶನ, ಮನೆ ಯಾವುದನ್ನು ಹೊಂದಿರದ ಆದಿವಾಸಿಗಳ ಹೋರಾಟಕ್ಕೆ ಬೆಂಬಲಿಸಿದ್ದೇವೆ, ಇನ್ಯಾವುದೇ ಅತಿಕ್ರಮಣ ಮಾಡಿಲ್ಲ ” ಎಂದು ಸ್ಪಷ್ಟನೆ ನೀಡಿದರು.

ಅತ್ತೂರು ಕೊಲ್ಲಿ ಹಾಡಿಯ ಅರಣ್ಯ ಹಕ್ಕುಗಳ ಸಮಿತಿ ಅಧ್ಯಕ್ಷ ಶಿವು ಈದಿನ. ಕಾಮ್ ಜೊತೆ ಮಾತನಾಡಿ ” ನಾವು ನಮ್ಮ ಜಾಗಕ್ಕೆ ಮರಳಿ ಬಂದಿದ್ದೇವೆ. ಇಲ್ಲಿ ನಮ್ಮ ಪೂರ್ವಜರು ಇದ್ದಾರೆ, ನಮ್ಮ ದೈವಗಳಿವೆ ಇದು ನಮ್ಮ ಸಾಂಪ್ರದಾಯಿಕ ಗಡಿ ಹಾಗೂ ನಮ್ಮ ಮೂಲ ಸ್ಥಾನ. ಇದು ಕಾಡಲ್ಲ ಈಗಲೂ ಪರಿಶೀಲಿಸಿ ಹಾಡಿ (ಗ್ರಾಮ) ಎಂತಲೇ ಇದೇ. ಜನ ವಸತಿ ಇರುವ ಜಾಗ. ಇಲ್ಲಿಯ ಹೋರಾಟದ ಸಮಯದಲ್ಲಿ ಬೆಂಬಲವಾಗಿ ನಟ ಚೇತನ್ ಅಹಿಂಸಾ, ವಿಜಯ ಸಿಂಗ್ ರೋನಾಲ್ಡ್ ಡೇವಿಡ್, ರಾಜಾರಾಮನ್, ಪತ್ರಕರ್ತರಾದ ನಿಕಿತಾ ಜೈನ್, ಸಾರ್ತಜಾ ಅಲಿ ಬರ್ಕಾತ್ ಅವರು ಸ್ಥಳಕ್ಕೆ ಬಂದು ಹೋರಾಟದಲ್ಲಿ ಭಾಗಿಯಾದರು, ವರದಿ ಮಾಡಿದರು.”
ಈ ಸುದ್ದಿ ಓದಿದ್ದೀರಾ? ಕೊಡಗು | ನಟ ಚೇತನ್, ಪತ್ರಕರ್ತರು ಸೇರಿದಂತೆ ಹೋರಾಟಗಾರರಿಗೆ ಅರಣ್ಯ ಇಲಾಖೆ ನೊಟೀಸ್; ನಾಳೆ ವಿಚಾರಣೆಗೆ ಹಾಜರು
ಆದರೇ, ಅರಣ್ಯ ಇಲಾಖೆ ಇದನ್ನ ಮನಗಾಣದೆ ಉದ್ದೇಶಪೂರ್ವಕವಾಗಿ ಹೋರಾಟಗಾರರ ಮೇಲೆ ವಿನಾಕಾರಣ ಪ್ರಕರಣ ದಾಖಲಿಸಿ, ವಿಚಾರಣೆಗೆ ಬರುವಂತೆ ನೊಟೀಸ್ ನೀಡಿದೆ. ಹೋರಾಟಕ್ಕೆ ಬರುವುದು, ಬೆಂಬಲಿಸುವುದು ಯಾವ ರೀತಿಯ ತಪ್ಪಾಗುತ್ತದೆ. ನಾವಿರುವಲ್ಲಿಗೆ ಎಲ್ಲರ ಸಮ್ಮುಖದಲ್ಲಿ ಬಂದಿರಿರುವಾಗ ಅತಿಕ್ರಮಣ ಪ್ರವೇಶವಾಗಲೂ ಸಾಧ್ಯವೇ ಇಲ್ಲ. ಹೀಗಿರುವಾಗ ಪ್ರಚೋದನೆ ನೀಡಲು ಹೇಗೆ ಸಾಧ್ಯ? ಎಂದು ಪ್ರಶ್ನೆ ಮಾಡಿದರು. ನಮ್ಮ ಹಕ್ಕಿಗಾಗಿ ನಮ್ಮ ಹೋರಾಟ ನಿರಂತರ. ಕಾಡು ನಮ್ಮದು, ನಾವು ಹುಟ್ಟಿ ಬೆಳೆದ ಜಾಗವಿದು. ನಮ್ಮ ಹಾಡಿಯನ್ನು ನಾವುಗಳು ಹೋರಾಟದ ಮೂಲಕ ಪಡೆದೇ ತೀರುತ್ತೇವೆ “
ಎಂದರು.