ಕೊಡಗು ಜಿಲ್ಲೆ, ಪೊನ್ನಂಪೇಟೆ ತಾಲ್ಲೂಕು ನಾಣಚ್ಚಿ ನಾಗರಹೊಳೆಯಲ್ಲಿ ‘ ಅಂತರಾಷ್ಟ್ರೀಯ ಆದಿವಾಸಿ ದಿನದ ‘ ಅಂಗವಾಗಿ ನಾಗರಹೊಳೆ ಆದಿವಾಸಿ ಜಮ್ಮಪಾಳೆ ಹಕ್ಕು ಸ್ಥಾಪನಾ ಸಮಿತಿ ಮತ್ತು ಬುಡಕಟ್ಟು ಕೃಷಿಕರ ಸಂಘ ಆದಿವಾಸಿ ಜನರ ಜಮ್ಮಗಳನ್ನು ಅತಿಕ್ರಮಿಸಿ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಿರುವುದರ ವಿರುದ್ಧ ಪ್ರತಿಭಟನೆ ನಡೆಸಿ ಗೌರವ, ಘನತೆಯೊಂದಿಗೆ ನಡೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.
ಬಾಳೆಕಾವು ಹಾಡಿಯಿಂದ ” ನಂಗ ಕಾಡು, ನಂಗ ಜಮ್ಮಾ. ನಂಗಾವೇ ಆಳಾಕು, ಆನೆ ಹುಲಿನೇ ಕಂಡವರು, ಅರಣ್ಯ ನೀತಿಗೂ ಆಂಜಾದಿಲೇ, ಕಾಡು ಪ್ರಾಣಿ ನಾವು ಸಮಾನರು ” ಎಂದು ಘೋಷಣೆ ಕೂಗುತ್ತಾ ನಾಣಚ್ಚಿ ಸಫಾರಿ ಪ್ರವೇಶ ದ್ವಾರದ ಬಳಿ ಜಮಾಯಿಸಿದ ಜನರು ಆದಿವಾಸಿ ಜನರು ಸಾಂಪ್ರದಾಯಿಕ ಗಡಿಗಳನ್ನು ಕದ್ದು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಿರುವುದರ ವಿರುದ್ಧ ಪ್ರತಿಭಟಿಸಿದರು. ಬಳಿಕ ‘ ನಾಗರಹೊಳೆ ಕಾಡು ಬುಡಕಟ್ಟು ಮನೆತನಗಳ ಜಮ್ಮದ ತಾಣ. ನೀವು ಈಗ ಆದಿವಾಸಿಗಳ ಸಾಂಪ್ರದಾಯಿಕ ಗಡಿಯೊಳಗೆ ಪ್ರವೇಶಿಸಿಸುತಿದ್ದೀರಿ. ನಾಗರಹೊಳೆ ಜಮ್ಮದ ಕಾಡು ಆದಿವಾಸಿಗಳ ಸ್ವಯಂ ಆಡಳಿತ ಪ್ರದೇಶ. ಈ ಪ್ರದೇಶ ಆದಿವಾಸಿ ಬುಡಕಟ್ಟು ಜನರ ಆವಾಸಸ್ಥಾನ. ಇಲ್ಲಿ ಜನರು, ಪ್ರಾಣಿಗಳು,ಕಾಡು ಸಮಾನರು.ಇಲ್ಲಿ ಆದಿವಾಸಿ ಬುಡಕಟ್ಟು ಜನರ ಸಾಂಪ್ರದಾಯಿಕ ಕಾನೂನು ಮತ್ತು ಗ್ರಾಮ ಸಭೆಯ ವಿಶೇಷ ನಿಬಂಧನೆಗಳು ಅನ್ವಯವಾಗುತ್ತದೆ. ಈ ಪ್ರದೇಶದಲ್ಲಿ ಗೌರವ ಮತ್ತು ಘನತೆಯೊಂದಿಗೆ ನಡೆದುಕೊಳ್ಳಿ ” ಎನ್ನುವ ನಾಮಫಲಕ ನೆಟ್ಟು ತಮ್ಮ ಆಕ್ರೋಶ ಹೊರ ಹಾಕಿದರು.

ನಟ ಹಾಗೂ ಸಾಮಾಜಿಕ ಹೋರಾಟಗಾರರಾದ ಚೇತನ್ ಅಹಿಂಸಾ ಮಾತನಾಡಿ ” ನಾಗರಹೊಳೆ ಅರಣ್ಯದಲ್ಲಿ ಬುಡಕಟ್ಟು ಆದಿವಾಸಿ ಜನಾಂಗ ಎಂದು ವರ್ಗೀಕರಿಸಲಾದ ಜೇನು ಕುರುಬ, ಬೆಟ್ಟಕುರುಬ, ಎರವ, ಪಣಿಯ ಸಮುದಾಯದ ಜನರು ತಲತಲಾಂತರಗಳಿಂದ ಕಾಡಿನ ಅವಿಭಾಜ್ಯ ಅಂಗವಾಗಿ ತಮ್ಮದೇಯಾದ ವಿಶಿಷ್ಟ ಸಂಪ್ರದಾಯ ಸಂಸ್ಕೃತಿ ಪರಂಪರೆಯನ್ನು ಅನುಸರಿಸಿಕೊಂಡು ಕಾಡಿನೊಂದಿಗೆ ಕೂಡಿ ಬಾಳುವ ಜೀವನವನ್ನು ಅಳವಡಿಸಿಕೊಂಡಿರುವ ಸಮುದಾಯಗಳು. ತಮ್ಮ ಸಂವಿಧಾನ ಬದ್ಧ ಹಕ್ಕಾದ ಅರಣ್ಯ ಹಕ್ಕು ಕಾಯಿದೆ (ಎಫ್ ಆರ್ ಎ), 2006 ಅಡಿಯಲ್ಲಿ ಚಾರಿತ್ರಿಕವಾಗಿ ಅನ್ಯಾಯವನ್ನು ಉಂಟು ಮಾಡಿರುವುದನ್ನು ಸರಿಪಡಿಸಲು ತಂದ ಕಾನೂನಿನ ಭಾಗವಾದ ಸಮುದಾಯ ಅರಣ್ಯ ಹಕ್ಕು, ಸಮುದಾಯ ಅರಣ್ಯ ಸಂಪನ್ಮೂಲದ ಹಕ್ಕು, ಆವಾಸಸ್ಥಾನದ ಹಕ್ಕು ಅರಣ್ಯ ಸಂರಕ್ಷಣೆ ಪುನಸ್ಚೇತನ ನಿರ್ವಹಣೆಯ ಹಕ್ಕುಗಳ ಮಾನ್ಯತೆಯಲ್ಲಿ ನಡೆಯುತ್ತಿರುವ ವ್ಯವಸ್ಥಿತ ಉಲ್ಲಂಘನೆಗಳನ್ನು ಎತ್ತಿಹಿಡಿಯುತ್ತಿವೆ. ಸಾಮಾಜಿಕ ಅಸಮಾನತೆಯಿಂದಾಗಿ ಆದಿವಾಸಿಗಳಿಗೆ ಅನ್ಯಾಯವಾಗಿದೆ “ಎಂದು ಅಭಿಪ್ರಾಯಪಟ್ಟರು.

ಹಿರಿಯ ಮುಖಂಡರಾದ ಜೆ. ಕೆ. ತಿಮ್ಮ ಮಾತನಾಡಿ ” ಬುಡಕಟ್ಟು ವ್ಯವಹಾರಗಳ ಮಂತ್ರಾಲಯ (ಎಂಒಟಿಎ), ಭಾರತ ಸರ್ಕಾರದಿಂದ ಹಲವಾರು ನಿರ್ದೇಶನಗಳು ಬಂದರೂ ಸಹ, ಕರ್ನಾಟಕ ಸರ್ಕಾರ ಮತ್ತು ಕೊಡಗು ಹಾಗೂ ಮೈಸೂರು ಜಿಲ್ಲೆಯ ಆಡಳಿತ ಇಲಾಖೆ ಈ ನಿರ್ದೇಶನಗಳನ್ನು ಜಾರಿಗೆ ತರಲು ಯಾವುದೇ ಪರಿಣಾಮಕಾರಿ ಹೆಜ್ಜೆ ಇಟ್ಟಿಲ್ಲ. ಈ ನಿರ್ದೇಶನಗಳನ್ನು ಕಾರ್ಯರೂಪಕ್ಕೆ ತರದೆ ಇರುವುದು ಕಾನೂನು ಮತ್ತು ಸಂವಿಧಾನದಿಂದ ಆದಿವಾಸಿ ಜನಾಂಗಗಳಿಗೆ ಭದ್ರಪಡಿಸಲಾದ ಹಕ್ಕುಗಳ ಉಲ್ಲಂಘನೆಯಾಗಿದೆ. ಇದಲ್ಲದೆ, ನಾಗರಹೊಳೆ ಟೈಗರ್ ರಿಸರ್ವ್ ಅಧಿಕಾರಿಗಳು ನಿರ್ಬಂಧವಿಲ್ಲದ ಪ್ರಾಧಿಕಾರದಂತೆ ಅರಣ್ಯ ಹಕ್ಕುಗಳ ಕ್ಲೇಮುಗಳನ್ನು ಸ್ವಇಚ್ಛೆಯಿಂದ ತಿರಸ್ಕರಿಸುತ್ತಿದ್ದಾರೆ. ಬಲವಂತದ ವಜಾಗೊಳಿಸುವಿಕೆ ನಡೆಸುತ್ತಿದ್ದಾರೆ ಮತ್ತು ನಮ್ಮ ಹಕ್ಕುಗಳನ್ನು ಶಾಂತಿಯುತವಾಗಿ ಒತ್ತಾಯಿಸುತ್ತಿರುವ ಆದಿವಾಸಿ ನಾಯಕರ ಹಾಗೂ ಕುಟುಂಬಗಳ ಮೇಲೆ ಕ್ರಿಮಿನಲ್ ಕೇಸು ದಾಖಲಿಸುತ್ತಿದ್ದಾರೆ ” ಎಂದು ಹೇಳಿದರು.
ಅರಣ್ಯ ಹಕ್ಕುಗಳ ಕಾಯಿದೆ ಸಲಹೆಗಾರ ರಾಜಾರಾಮನ್ ಮಾತನಾಡಿ ” ಅರಣ್ಯವಾಸಿ ಸಮುದಾಯಗಳ ಹಕ್ಕುಗಳನ್ನು ಇಲಾಖೆಗಳ ಅಧಿಕಾರಿಗಳು ಇಚ್ಛೆಯಂತೆ ತಿರಸ್ಕರಿಸುತ್ತಿದ್ದಾರೆ ಮತ್ತು ಪ್ರಾಣಿಗಗಳಿಗಾಗಿ ನಿರ್ಬಂಧಿತ ಪ್ರದೇಶಗಳನ್ನು ರಚಿಸುವ ಹೆಸರಿನಲ್ಲಿ ಸ್ಥಳಾಂತರಗೊಳಿಸಲು ಒತ್ತಡ ಹೇರುವಾಗ, ಇದೇ ನಾಗರಹೊಳೆ ಟೈಗರ್ ರಿಸರ್ವ್ ಅಧಿಕಾರಿಗಳು ಪ್ರತಿದಿನ ನೂರಾರು ಪ್ರವಾಸಿಗರನ್ನು ತಂದು ಈ ನಿರ್ಬಂಧಿತ ಪ್ರದೇಶಗಳಲ್ಲಿ ನಾಗರಹೊಳೆ ಟೈಗರ್ ಸಫಾರಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ನಾಗರಹೊಳೆಯೊಳಗಿನ ಪ್ರವಾಸ ಮಾರ್ಗಗಳು ಆದಿವಾಸಿಗಳ ಪೂರ್ವಜರ ಭೂಮಿಗಳೊಳಗೆ ಮತ್ತು ಸಮುದಾಯ ಸಾಂಪ್ರದಾಯಿಕ ಅರಣ್ಯಗಳೊಳಗೆ ನುಸುಳುತ್ತಿವೆ. ಈ ಸ್ಪಷ್ಟವಾದ ವಿರೋಧಾಭಾಸವು ಅರಣ್ಯ ಮತ್ತು ಹುಲಿ ಸಂರಕ್ಷಣೆಯ ಹೆಸರಿನಲ್ಲಿ ವ್ಯಾಪಾರೀಕರಣಗೊಳಿಸಲಾಗುತ್ತಿದೆ ಎಂಬುದನ್ನು ತೋರಿಸುತ್ತದೆ. ಹಾಗೆಯೇ, ಈ ಕಾಡುಗಳನ್ನು ಪೋಷಿಸಿ ಸಂರಕ್ಷಿಸಿದ ಸಮುದಾಯಗಳಿಗೆ ನಿಜವಾದ ಅರಣ್ಯ ಹಕ್ಕುಗಳ ಮಾನ್ಯತೆಯನ್ನು ನಿರಾಕರಿಸಲಾಗುತ್ತಿದೆ ” ಎಂದು ಬೇಸರ ವ್ಯಕ್ತಪಡಿಸಿದರು.

ಅರಣ್ಯ ಹಕ್ಕುಗಳ ಸಮಿತಿ ಅಧ್ಯಕ್ಷ ಶಿವು ಮಾತನಾಡಿ ” ಮತ್ತೊಂದು ತೀವ್ರತೆ ಹೊಂದಿರುವ ಅಂಶವೆಂದರೆ ನಾಗರಹೊಳೆಯಲ್ಲಿ ಸಂರಕ್ಷಣೆಯ ಸೈನೀಕರಣ. ಅರಣ್ಯ ಇಲಾಖೆಯೂ ಪ್ರಚಲಿತ ಕ್ಯಾಮರಗಳನ್ನು ಅಳವಡಿಸುತ್ತಿದೆ, ಟೈಗರ್ ಟಾಸ್ಕ್ ಫೋರ್ಸ್ ಮತ್ತು ಎಲಿಫೆಂಟ್ ಟಾಸ್ಕ್ ಫೋರ್ಸ್ ಎಂಬ ಪ್ಯಾರಾಮಿಲಿಟರಿ ಶೈಲಿಯ ಭದ್ರತಾ ಪಡೆಗಳನ್ನು ನಿಯೋಜಿಸುತ್ತಿದೆ. ಈ ಎಲ್ಲಾ ಕ್ರಮಗಳು ಪ್ರಭಾವಿತ ಸಮುದಾಯಗಳ ಮುನ್ನಡೆ. ಸ್ಥಳೀಯ ಆದಿವಾಸಿ ಜನರ ಒಪ್ಪಿಗೆಯಿಲ್ಲದೇ ಮತ್ತು ಯಾವುದೇ ಸಾಮಾಜಿಕ ಪರಿಣಾಮಗಳ ಮೌಲ್ಯಮಾಪನವಿಲ್ಲದೇ ಜಾರಿಯಲ್ಲಿವೆ. ಈ ಸೈನ್ಯಕೃತ ಕ್ರಮಗಳು ಅರಣ್ಯ ಅಥವಾ ವನ್ಯಜೀವಿಗಳನ್ನು ರಕ್ಷಿಸಲು ಅಲ್ಲ. ಬದಲಾಗಿ ಅರಣ್ಯವಾಸಿ ಸಮುದಾಯಗಳ ಜೀವನಾಧಾರದ ಅಗತ್ಯಗಳಾದ ಜೇನು, ಅಣಬೆ, ಸೊಪ್ಪುಗಳು, ಮೊದಲಾದ ಅಗತ್ಯ ಉತ್ಪನ್ನಗಳನ್ನು ಸಂಗ್ರಹಿಸುವ ಸಮಯದಲ್ಲಿ ಅದನ್ನು ತಡೆಗಟ್ಟಲೆಂದೆ ಬಿಗಿಯಾಗಿ ನಿಗಾ ವಹಿಸುತ್ತಿದ್ದಾರೆ. ಅದಲ್ಲದೆ, ಕಾಡು ತಿರುಗುವ ಆದಿವಾಸಿ ಜನರ ಚಲನವಲನವನ್ನು ಕಣ್ಣಾವಿಸಲು ಹಾಗೂ ಅವರ ಧ್ವನಿಗಳನ್ನು ತಡೆಯಲು ಬಳಸಲಾಗುತ್ತಿದೆ ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಷ್ಟ್ರೀಯ ಆದಿವಾಸಿ ಒಕ್ಕೂಟದ ವಿಜಯಸಿಂಗ್ ರೋನಾಲ್ಡ್ ಡೇವಿಡ್ ಮಾತನಾಡಿ ” ಅರಣ್ಯ ಇಲಾಖೆಯು ಈಗ ಪ್ರಮುಖ ಸಮಸ್ಯೆ ಎಂದು ಬಿಂಬಿಸುತ್ತಿರುವ ಮಾನವ – ವನ್ಯಜೀವಿ ಸಂಘರ್ಷದ ವಿಷಯವನ್ನೂ ತಪ್ಪಾಗಿ ಪ್ರಸ್ತುತಪಡಿಸುತ್ತಿದ್ದಾರೆ. ಇದು ಆದಿವಾಸಿಗಳು ಕಾಡಿನಲ್ಲಿ ಜೀವನ ಕಟ್ಟಿಕೊಂಡಿರುವುದರಿಂದ ಎಂದು ಹೇಳಲಾಗುತ್ತಿದೆ. ಆದರೆ, ಅದು ನಿಜವಲ್ಲ. ಈ ಸಂಘರ್ಷ ಉಂಟಾಗುತ್ತಿರುವ ನಿಜವಾದ ಕಾರಣವೆಂದರೆ, ನಾಗರಹೊಳೆ ಸುತ್ತಮುತ್ತ, ವಿಶೇಷವಾಗಿ ಕೊಡಗು ಜಿಲ್ಲೆಯಲ್ಲಿ ನೈಸರ್ಗಿಕ ಅರಣ್ಯಗಳ ಬೃಹತ್ ಪ್ರಮಾಣದಲ್ಲಿ ನಾಶ ಮತ್ತು ಅದರ ಜಾಗದಲ್ಲಿ ವಾಣಿಜ್ಯ ಕಾಫಿ ತೋಟಗಳ ಸ್ಥಾಪನೆಯಾಗಿದೆ. ಈ ತೋಟಗಳು ವನ್ಯಜೀವಿಗಳ ಸುತ್ತಾಡುವ ಹಾದಿಗಳನ್ನು ತುಂಡರಿಸಿರುತ್ತದೆ, ಮತ್ತು ಕಾಡಿನಿಂದ ಪ್ರಾಣಿಗಳು ಹೊರಹೋಗದಂತೆ ಅಳವಡಿಸಲಾಗಿರುವ ಸೌರ ಶಕ್ತಿ ಬೇಲಿ ಮತ್ತು ಚೂಪಾದ ರೈಲ್ವೆ ಕಂಬಿ ಬೇಲಿ ವ್ಯವಸ್ಥೆಗಳು ಪ್ರಾಣಿಗಳನ್ನು ಗಾಯಗೊಳಿಸುತ್ತವೆ ಮತ್ತು ಇದರಿಂದ ಪ್ರಾಣಿಗಳು ಸಾವನ್ನಪ್ಪುತ್ತಿವೆ ” ಎಂದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಅರಣ್ಯ ಇಲಾಖೆ ವಿಚಾರಣೆಗೆ ಹಾಜರು; ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯಿದೆ : ನಟ ಚೇತನ್

ಆದಿವಾಸಿ ಮುಖಂಡ ರಾಮಕೃಷ್ಣ ಮಾತನಾಡಿ ನಾಗರಹೊಳೆಯಲ್ಲಿ ಪರಿಸರದ ಒತ್ತಡವನ್ನು ಮತ್ತು ಸಂಘರ್ಷವನ್ನು ಹೆಚ್ಚಿಸುತ್ತಿವೆ. ಆದರೂ, ಈ ಮೂಲ ತಪ್ಪುಗಳನ್ನು ತಿದ್ದುವ ಬದಲಿಗೆ, ಅರಣ್ಯ ಇಲಾಖೆ ಅರಣ್ಯವಾಸಿಗಳನ್ನೇ ತಪ್ಪುಗಾರರನ್ನಾಗಿ ಬಿಂಬಿಸುತ್ತಿದೆ, ಅರಣ್ಯವನ್ನು ನಮ್ಮ ಮನೆ ಎಂದು ಕರೆದುಕೊಂಡಿದ್ದಕ್ಕಾಗಿ ನಮ್ಮನ್ನು ಅಪರಾಧಿಗಳಿಗೆ ಪರಿವರ್ತಿಸುತ್ತಿದ್ದಾರೆ. ವನ್ಯಜೀವಿಗಳೊಂದಿಗೆ ಸಹಜ ಜೀವನ ನಡೆಸುತ್ತಾ ಬಂದಿರುವ ಜನರ ಬಗ್ಗೆ ಈ ಮಾತುಗಳು ಸಂಪೂರ್ಣವಾಗಿ ಅನ್ಯಾಯವಾಗಿದೆ. ಈ ಪ್ರತಿಭಟನೆ ಕೇವಲ ಗುರಿತಿಸಲ್ಪಡುವ ಕಾರ್ಯಕ್ರಮವಲ್ಲ, ಬದಲಾಗಿ ಹಕ್ಕುಗಳನ್ನು ಒತ್ತಾಯಿಸುವ ಶಕ್ತಿಯುತ ಹೋರಾಟದ ಭಾಗವಾಗಿದೆ ” ಎಂದರು.
ಪ್ರತಿಭಟನೆ ಲೈವ್ ವೀಕ್ಷಿಸಿ : https://www.youtube.com/live/BpyK1ckiUWk?feature=shared

ಹಕ್ಕೊತ್ತಾಯಗಳು:
- ಅರಣ್ಯ ಹಕ್ಕು ಕಾಯ್ದೆ 2006 ರ ಅಡಿಯಲ್ಲಿ ಸಮುದಾಯ ಮತ್ತು ಸಮುದಾಯ ಅರಣ್ಯ ಸಂಪನ್ಮೂಲದ ಹಕ್ಕುಗಳ ಮಾನ್ಯತೆ ಮಾಡಬೇಕು.
- PVTG ಸಮುದಾಯಗಳ ವಾಸಸ್ಥಾನ,ಆವಾಸಸ್ಥಾನದ ಹಕ್ಕುಗಳಿಗೆ ಸಂಬಂಧಿಸಿದ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ( MOTA) ಭಾರತ ಸರ್ಕಾರದ ನಿರ್ದೇಶನೆಗಳನ್ನು ಜಾರಿ ಮಾಡಬೇಕು.
- ಆದಿವಾಸಿಗಳ ಹಕ್ಕುಗಳನ್ನು ವಜಾಗೊಳಿಸುವಿಕೆ, ಬೆದರಿಕೆ ಮತ್ತು ಅಪರಾಧೀಕರಣ ನಿಲ್ಲಿಸಬೇಕು.
- ನಮ್ಮ ಸಾಂಪ್ರದಾಯಿಕ ಗಡಿ ಕಾಡಿನೊಳಗೆ ಪ್ರವಾಸೋದ್ಯಮದ ಹೆಸರಲ್ಲಿ ನಡೆಸುತ್ತಿರುವ ಸಫಾರಿಯನ್ನು ಹಾಗೂ ಸೈನ್ಯಕೃತ ಮತ್ತು ಕ್ಯಾಮರಾಗಳ ಮೂಲ ಆಧಾರಿತ ಸಂರಕ್ಷಣಾ ಮಾದರಿಗಳು ನಿಲ್ಲಿಸಬೇಕು.
- ಆದಿವಾಸಿ ಜನರು 50% ಮೇಲ್ಪಟ್ಟು ವಾಸಿಸುತ್ತಿರುವ ಪ್ರದೇಶ, ತಾಲೂಕು. ಜಿಲ್ಲೆಯನ್ನು 5ನೇ ಅನುಸೂಚಿತ ಬುಡಕಟ್ಟು ಜನರ ಪ್ರದೇಶ ಹಾಗೂ PESA -1996 ಕಾಯ್ದೆಯ ಪ್ರದೇಶ ಎಂದು ಘೋಷಿಸಬೇಕು.
- ನೈಸರ್ಗಿಕ ಅರಣ್ಯಗಳು ಅತಿಕ್ರಮಿಸಿಕೊಂಡು ಕಾಫಿ ತೋಟಗಳನ್ನಾಗಿ ಪರಿವರ್ತಿಸಿರುವ ಕಾರಣದಿಂದ ಕಾಡು ಮತ್ತು ವನ್ಯಪ್ರಾಣಿಗಳ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ ಇದನ್ನು ತಪ್ಪಿಸಲು ಸೋಲಾರ್ ಪೆನ್ಸಿಂಗ್, ಚೂಪಾದ ರೈಲ್ವೆ ಕಂಬಿಗಳ ತಡೆಗೋಡೆ, ಮೊದಲಾದ ಯೋಜನೆಗಳನ್ನು ತರಲಾಗುತ್ತಿದೆ. ಈ ಮೂಲಕ ಉಂಟಾದ ಪರಿಸರ ಹಾನಿಯನ್ನು ಸರಿಪಡಿಸಬೇಕು.
- ನಾಗರಹೊಳೆ ಕಾಡಿನಲ್ಲಿ ವಾಸಿಸುವ ಆದಿವಾಸಿ ಸಮುದಾಯಗಳ ಪ್ರತಿಭಟನೆಯ ಧ್ವನಿಗೆ ಪತ್ರಿಕಾ ಮಾಧ್ಯಮ ಮಿತ್ರರು ಕೈಜೋಡಿಸಿ. ಈ ಹಕ್ಕು ಹೋರಾಟ ಮತ್ತು ನಮ್ಮ ಅರಣ್ಯ, ವನ್ಯಜೀವಿಗಳ ಭವಿಷ್ಯದ ರಕ್ಷಣೆಯಲ್ಲಿ ನೀವು ಸಹ ಭಾಗಿಯಾಗುವಂತೆ ಆಹ್ವಾನಿಸುತ್ತೇವೆ.