ಕೋಲಾರ ತಾಲೂಕಿನ ಹುತ್ತೂರು ಹೋಬಳಿಯ ವ್ಯಾಪ್ತಿಯಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಗಳ ವತಿಯಿಂದ ಜಂಟಿ ಸರ್ವೆ ಕಾರ್ಯ ನಡೆಯುತ್ತಿದೆ. ಆದರೆ ಸರಿಯಾಗಿ ನಡೆಯುತ್ತಿದೆಯೇ ಎಂಬ ಅನುಮಾನ ಈ ಭಾಗದ ರೈತರಿಗೆ ಕಾಡುತ್ತಿದೆ ಎಂದು ರೈತ ಮುಖಂಡ ಶ್ರೀನಿವಾಸನ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಅರಣ್ಯ ಇಲಾಖೆಯ ಹತ್ತಿರವಿರುವ ದಾಖಲೆ ಪತ್ರಗಳ ಬಗ್ಗೆಯೇ ಅನುಮಾನವಿದೆ. ಕಂದಾಯ ಇಲಾಖೆಯಲ್ಲಿ ಪುರಾವೆಗಳೇ ಇಲ್ಲ. ಆದರೆ, ರೈತರ ಬಳಿ ಸೂಕ್ತವಾದ ದಾಖಲೆಗಳು ಇದ್ದರೂ ವಿನಾಕಾರಣ ಅರಣ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ತೊಂದರೆ ಕೊಡುತ್ತಿವೆ. ಹೋಬಳಿಯ ಶಿಲ್ಲಂಗೆರೆಯಿಂದ ಅಬ್ಬಣಿಯವರೆಗೆ ಮೂಲ ಅರಣ್ಯ ಎಂದು ಹೇಳುತ್ತಿದ್ದು, ಕಂದಾಯ, ಸರ್ವೆ, ಪೊಲೀಸ್ ಇಲಾಖೆ ರೈತರನ್ನು ಯಾಮಾರಿಸುತ್ತಿವೆ. ಆರ್ ಟಿಸಿಯಲ್ಲಿ ಗೋಮಾಳ ಎಂದಿದೆ ಅದರಿಂದ ರೈತರಿಗೆ ತೊಂದರೆ ಕೊಟ್ಟಿದ್ದರಿಂದಾಗಿ ಅರಣ್ಯ ಇಲಾಖೆಯ ಸರಿನಾ ಸಿಕ್ಕಲಿಗರ್, ಮಹೇಶ್, ಪುಷ್ಪಲತಾ ಅವರ ಮೇಲೆ ದೌರ್ಜನ್ಯ ಕೇಸ್ ಹಾಕಿದ್ದೇವೆ. ಈ ಭಾಗದಲ್ಲಿ ಹಿಡುವಳಿ ಜಮೀನು ಇದ್ದು ಅರಣ್ಯ ಇಲಾಖೆ ನಕಲಿ ನಕ್ಷೆ ಮಾಡಿಕೊಂಡಿದ್ದಾರೆ ಮಾತು ಎತ್ತಿದರೆ ರಿಯಲ್ ಎಸ್ಟೇಟ್ ಎನ್ನುತ್ತಾರೆ ರೈತರನ್ನು ಅವಮಾನ ಮಾಡತ್ತಾರೆ” ಎಂದು ಆರೋಪಿಸಿದರು.
ಇದನ್ನೂ ಓದಿ: ಕೋಲಾರ | ಹೈನುಗಾರಿಕೆ ಗ್ರಾಮೀಣ ಜನರ ಬದುಕಿಗೆ ಆಸರೆ: ಚೆಲುವನಹಳ್ಳಿ ನಾಗರಾಜ್
ಅರಣ್ಯ ಇಲಾಖೆಯ 1931ರ ನೋಟಿಫಿಕೇಷನ್ ದಾಖಲೆ ಸರಿ ಇಲ್ಲ. ಇದು ನಕಲಿ ಎಂಬ ಅನುಮಾನ ಇದೆ. ಈ ಬಗ್ಗೆ ತನಿಖೆ ನಡೆಸಬೇಕು. ರೈತರ ಮೇಲೆ ದಬ್ಬಾಳಿಕೆ ಮಾಡಬಾರದು. ಅರಣ್ಯ ಇಲಾಖೆ ಜಾಗಕ್ಕೆ ನಂಬರ್ ಕೊಟ್ಟು ದುರಸ್ತಿ ಮಾಡಬೇಕು ಜಂಟಿ ಸರ್ವೆಯಲ್ಲಿ ಮೊದಲು ಅರಣ್ಯ ಜಮೀನು ಎಷ್ಟಿದೆ ಎಂಬುದನ್ನು ಸ್ಕೆಚ್ ಮಾಡಿ, ನಂಬರ್ ಕೊಟ್ಟು ದುರಸ್ತಿ ಮಾಡಬೇಕು” ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ರೈತರಾದ ಹರಟಿ ಪ್ರಕಾಶ್, ಶಿಲ್ಲಂಗೆರೆ ಮಂಜುನಾಥ್, ಅರವಿಂದ್, ವೆಂಕಟರಣಪ್ಪ ಇದ್ದರು.