ನಾಡ ಹಬ್ಬವು ರಾಜ್ಯದ 7 ಕೋಟಿ ಜನರ ಹಬ್ಬವಾಗಿ ಪ್ರತಿಬಿಂಬಿತವಾಗಿದೆ. ಈ ಹಬ್ಬದಲ್ಲಿ ಜಾತಿ-ಧರ್ಮ ಬೆರೆಸುವುದು ಸರಿಯಲ್ಲ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಕೋಲಾರದ ಕೆಜಿಎಫ್‌ನ ಬೆಮೆಲ್ ನಗರದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ನೂತನ ಕಟ್ಟಡ ಹಾಗೂ ಸ್ವಯಂಚಾಲಿತ ವಾಹನ ಚಾಲನಾ ಪರೀಕ್ಷಾ ಪಥ ಉದ್ಘಾಟನೆಗೊಳಿಸಿ ಮಾತನಾಡಿದ ಅವರು, “ನಾಡ ಹಬ್ಬ ದಸರಾ ಉದ್ಘಾಟನೆಗೆ ಮುಖ್ಯ ಅಥಿತಿಯಾಗಿ ರಾಜ್ಯ ಸರ್ಕಾರ ಬಾನು ಮುಷ್ತಾಕ್ ರನ್ನು ಆಹ್ವಾನಿಸಿರುವುದು ಸರಿಯಿದೆ. ಆದರೆ, ಕೆಲವು ಬಿಜೆಪಿ ಮುಖಂಡರು ವಿನಾಕಾರಣವಾಗಿ ಗೊಂದಲವನ್ನು ಸೃಷ್ಟಿ ಮಾಡುತ್ತಿದ್ದಾರೆ. ಮೇಲು ಕೀಳು ಎಂಬುದು ಯಾವುದು ಇಲ್ಲ. ಸರ್ವ ಧರ್ಮವು ಸಮಾನ ಎಂಬುದನ್ನು ಪ್ರತಿಪಾದಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಇಡಿ, ಸಿಬಿಐ, ಚುನಾವಣಾ ಆಯೋಗ ಹಾಗೂ ಇತರೆ ಕೇಂದ್ರ ಸರ್ಕಾರದ ಸ್ವಾಯತ್ತ ಸಂಸ್ಥೆಗಳು ಕೇಂದ್ರ ಬಿಜೆಪಿ ಸರ್ಕಾರ ನೀಡುವ ಆದೇಶಗಳನ್ನು ಪಾಲನೆ ಮಾಡುತ್ತಿವೆ” ಎಂದು ಆರೋಪಿಸಿದರು.

ಮುಂದುವರೆದು, “ಸಾರಿಗೆ ಇಲಾಖೆಯಲ್ಲಿ ಹಲವು ಬದಲಾವಣೆಗಳನ್ನು ತರುತ್ತಿದ್ದು, ಸಾರ್ವಜನಿಕರು ಆನ್‍ಲೈನ್ ಮೂಲಕ ತಮ್ಮ ಕೆಲಸಗಳನ್ನು ಮಾಡಿಕೊಳ್ಳಲು ಅನುವು ಮಾಡಿಕೊಡಲಾಗಿದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸಾರಿಗೆ ಇಲಾಖೆಯ ನೂತನ ಕಟ್ಟಡಗಳ ಉದ್ಘಾಟನೆಗೊಂಡಿದೆ. ಬಾಕಿ ಕಟ್ಟಡಗಳ ಕಾಮಗಾರಿ ಪೂರ್ಣಗೊಂಡಿರುವ ಹಂತಕ್ಕೆ ಬಂದಿದ್ದು, ಶೀಘ್ರವಾಗಿ ಉದ್ಘಾಟನೆಗೊಳಿಸಿ ಸಾರ್ವಜನಿಕರ ಸೇವೆಗೆ ಲೋರ್ಕಾಪಣೆಗೊಳಿಸಲಾಗುವುದು” ಎಂದು ಹೇಳಿದರು.
ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿ, “ಕೋಲಾರ ಜಿಲ್ಲೆಯು ನನ್ನ ಕರ್ಮ ಭೂಮಿಯಾಗಿದ್ದು, ನಾನು ಹಿಂದೆ ರೈಲ್ವೆ ಸಚಿವನಾಗಿದ್ದ ಸಂದರ್ಭದಲ್ಲಿ ಬಿಸನತ್ತಂ ರೈಲ್ವೆ ಮಾರ್ಗಕ್ಕೆ ಚಾಲನೆ ನೀಡಿದ್ದೆ. ಕುಪ್ಪಂ ಮಾರಿಕುಪ್ಪಂ ರೈಲ್ವೆ ಹಳಿಗಳ ಜೋಡಣೆ ಕಾಮಗಾರಿಗೂ ಅನುದಾನ ಮೀಸಲಿಟ್ಟಿದ್ದು, ಶೀಘ್ರವಾಗಿ ಕಾಮಗಾರಿ ಪೂರ್ಣಗೊಳ್ಳುವ ಕಡೆ ಸಂಸದ ಮಲ್ಲೇಶಬಾಬು ಗಮನಹರಿಸಬೇಕು. ತಿರುಪತಿ ಮುಳುಬಾಗಿಲು ಮಾರ್ಗ, ಕಡಪ -ಮದನಪಲ್ಲಿ ಶ್ರೀನಿವಾಸಪುರ ಮಾರ್ಗ, ಕೋಲಾರ ವೈಟ್‍ಫೀಲ್ಡ್ ಮಾರ್ಗದ ಸರ್ವೇ ನಡೆಸಲಾಗಿದೆ. ರೈಲ್ವೆ ಕೋಚ್ ಕಾರ್ಖಾನೆ ಪ್ರಾರಂಭಿಸಲು ಕೇಂದ್ರ ಸರ್ಕಾರ ಅಸ್ತು ಎಂದಿತ್ತು ಆದರೆ ನಂತರ ಅದು ಯಾವ ಹಂತದಲ್ಲಿ ಇದೆ ಎಂಬುದು ತಿಳಿದಿಲ್ಲ” ಎಂದು ಹೇಳಿದರು.
ಶಾಸಕಿ ರೂಪಕಲಾ ಶಶಿಧರ್ ಮಾತನಾಡಿ, “ಕಳೆದ 40-50 ವರ್ಷಗಳಿಂದ ಗಡಿ ಭಾಗವಾಗಿರುವ ಕೆಜಿಎಫ್ ವಿಧಾನಸಭೆ ಕ್ಷೇತ್ರವು ತೀರ ಹಿಂದುಳಿದಿತ್ತು. ಮತದಾರರ ಬೇಡಿಕೆಗಳು, ನಿರೀಕ್ಷೆಗಳು ಬೆಟ್ಟದಷ್ಟು ಇತ್ತು. ನನಗೆ ಪ್ರಥಮವಾಗಿ ಅವಕಾಶ ಲಭಿಸಿದಾಗ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಏಕೆಂದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು. ನಾನು ಕೇಳಿದ ಅನುದಾನವನ್ನು ನೀಡಲಿಲ್ಲ. ಈ ಹಿನ್ನಲೆಯಲ್ಲಿ ನನಗೆ ತೃಪ್ತಿ ದೊರಕಿರಲಿಲ್ಲ. ಆದರೆ ಇಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಸಹಕಾರವನ್ನು ನೀಡುತ್ತಿದ್ದು, ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿಗಾಗಿ ಬೀದಿ ದೀಪಗಳ ಅಳವಡಿಕೆಗಾಗಿ ಹಾಗೂ ಇಂಟರ್ ಗ್ರೇಟ್ ಟೌನ್ ಶಿಪ್ ನಿರ್ಮಾಣ ಮಾಡಲು ಸಹಕಾರ ನೀಡಿದ್ದಾರೆ” ಎಂದು ಹೇಳಿದರು.


“ಕಳೆದ 50 ವರ್ಷಗಳ ಹಿಂದೆ ಬಿಇಎಂಎಲ್ ಕಂಪನಿಗೆ ರಾಜ್ಯ ಸರ್ಕಾರ 2000 ಸಾವಿರ ಎಕರೆ ಜಮೀನು ಮಂಜೂರು ಮಾಡಿತ್ತು. ಆದರೆ ಬಿಇಎಂಎಲ್ ಕಂಪನಿಯು 973 ಎಕರೆ ಜಮೀನು ಬಳಕೆ ಮಾಡಿಕೊಂಡಿರಲಿಲ್ಲ. ಬಳಕೆಯಾಗದೆ ಉಳಿದಿದ್ದ ಜಮೀನನ್ನು ಪತ್ತೆ ಹಚ್ಚಿ ಮರಳಿ ರಾಜ್ಯ ಸರ್ಕಾರದ ವಶಕ್ಕೆ ಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿಸಿ ಸಫಲವಾದೆ. ಇದೀಗ ಜಮೀನು ಅಭಿವೃದ್ಧಿಪಡಿಸಲು ಕೆಐಎಡಿಬಿಐಗೆ ಅನುದಾನವನ್ನು ಬಿಡುಗಡೆಗೊಳಿಸಲಾಗಿದ್ದು, ಕೈಗಾರಿಕೆ ಕ್ರಾಂತಿಯಾಗಿ ಸಾವಿರಾರು ನಿರುದ್ಯೋಗ ಯುವಕರಿಗೆ ಉದ್ಯೋಗ ಅವಕಾಶಗಳು ಲಭ್ಯವಾಗಲಿದೆ” ಎಂದು ಹೇಳಿದರು. ಕೆಜಿಎಫ್ ಬಸ್ ಡಿಪೋಗೆ ಬಸ್‍ಗಳನ್ನು ಹೆಚ್ಚುವರಿಯಾಗಿ ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟರು.
ಇದನ್ನೂ ಓದಿ: ಕೋಲಾರ | ರಸ್ತೆ ವಿಸ್ತರಣೆಗೆ ಕಾನೂನು ಬಾಹಿರವಾಗಿ ಜಾಗ ಅತಿಕ್ರಮಣ; ಕುರ್ಕಿ ರಾಜೇಶ್ವರಿ ಆರೋಪ
ಕಾರ್ಯಕ್ರಮದಲ್ಲಿ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎ.ಎಂ.ಯೋಗೀಶ್, ಸಾರಿಗೆ ಆಯುಕ್ತ ಅಕ್ರಂ ಪಾಷಾ, ಅಪರ ಸಾರಿಗೆ ಅಧಿಕಾರಿ ಉಮಶಂಕರ್, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಗಜೇಂದ್ರಬಾಬು, ಕೋಲಾರ ಜಿಲ್ಲಾಧಿಕಾರಿ ಡಾ. ಎಂ ಆರ್ ರವಿ, ಸಿಇಒ ಪ್ರವೀಣ್ ಬಾಗೇವಾಡಿ, ಪೊಲೀಸ್ ವರಿಷ್ಠಾಧಿಕಾರಿ ಶಿವಂಶು ರಜಪೂತ್, ತಹಶೀಲ್ದಾರ್ ಭರತ್, ಇಒ ವೆಂಕಟೇಶಪ್ಪ, ಪೌರಾಯುಕ್ತ ಅಂಜನೇಯಲು, ತಾಲ್ಲೂಕು ಗ್ಯಾರೆಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರಾಧಾಕೃಷ್ಣ ರೆಡ್ಡಿ, ಬಂಗಾರಪೇಟೆ ಗ್ಯಾರೆಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಪಾರ್ಥಸಾರಥಿ, ಸ್ಥಾಯಿ ಸಮಿತಿ ಅಧ್ಯಕ್ಷ ವಳ್ಳಲ್‍ಮುನಿಸ್ವಾಮಿ, ನಗರಸಭೆ ಸದಸ್ಯ ಮಾಣಿಕ್ಯಂ, ಕೋಲಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾಧಬಾಬು, ಮಾಜಿ ಪುರಸಭಾ ಅಧ್ಯಕ್ಷ ಚಂದ್ರರೆಡ್ಡಿ, ಮಾಜಿ ಕೆಡಿಎ ಅಧ್ಯಕ್ಷ ಜಯಪಾಲ್, ಬೇತಮಂಗಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ವಿನುಕಾರ್ತಿಕ್, ರಾಮಸಾಗರ ಅಧ್ಯಕ್ಷ ಚಂದ್ರಪ್ಪ, ಕಮ್ಮಸಂದ್ರ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ನಾಗರಾಜ್, ಕೆಪಿಸಿಸಿ ಸದಸ್ಯ ದುರ್ಗಪ್ರಸಾಧ್,ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಅ.ಮು.ಲಕ್ಷ್ಮಿನಾರಾಯಣ, ಸುಂದರಪಾಳ್ಳ ಮಾಜಿ ಅಧ್ಯಕ್ಷ ರಾಂ ಬಾಬು, ತಾಪಂ ಮಾಜಿ ಅಧ್ಯಕ್ಷ ರಾಮಕೃಷ್ಣ ರೆಡ್ಡಿ, ವಕೀಲ ಪದ್ಮನಾಭರೆಡ್ಡಿ, ಅಂಕತಟ್ಟಹಳ್ಳಿ ವೇಣುಗೋಪಾಲ್ ಹಾಗೂ ಇತರರು ಹಾಜರಿದ್ದರು.