ಕೋಲಾರ ಜಿಲ್ಲಾ ಜಮಾತೆ ಇಸ್ಲಾಮೀ ಹಿಂದ್ ವತಿಯಿಂದ ʼನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್ʼ ಎಂಬ ಧ್ಯೇಯ ವಾಕ್ಯದಡಿ ಅವರ ಸಾರ್ವಕಾಲಿಕ ಬೋಧನೆಗಳನ್ನು ಹಾಗೂ ಪ್ರವಾದಿ ಜೀವನ ಸಂದೇಶ ಅಭಿಯಾನವನ್ನು ಜನತೆಗೆ
ತಿಳಿಸಲು ಸೆಪ್ಟೆಂಬರ್ 3 (ನಾಳೆ)ರಿಂದ ಅಕ್ಟೋಬರ್ 14 ರವರೆಗೆ 10 ದಿನಗಳ ಸೀರತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು
ಸಂಘಟನೆಯ ಜಿಲ್ಲಾ ಅಧ್ಯಕ್ಷ ಮಹಮ್ಮದ್ ಅಮ್ಜದ್ ಅಲಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, “ರಾಜ್ಯಾದ್ಯಂತ ನಡೆಯಲಿರುವ ಈ ಅಭಿಯಾನದಲ್ಲಿ ಪ್ರವಾದಿಯವರ ಕುರಿತು ಪುಸ್ತಕ ಬಿಡುಗಡೆ, ಕಿರು ಹೊತ್ತಿಗೆ ವಿತರಣೆ, ವಿಚಾರಗೋಷ್ಟಿ, ಸಮಾವೇಶಗಳು, ಪ್ರಬಂಧ ಸ್ಪರ್ಧೆ, ರಕ್ತದಾನ ಶಿಬಿರ, ಶುಚಿತ್ವ ಅಭಿಯಾನ, ಆಸ್ಪತ್ರೆ, ಅನಾಥಾಲಯ, ವೃದ್ಧಾಶ್ರಮ ಭೇಟಿ, ರೋಗಿಗಳಿಗೆ ಹಣ್ಣು ಹಂಪಲು ವಿತರಣೆಯಂತಹ ಸಮಾಜ ಸೇವಾ ಚಟುವಟಿಕೆಗಳು ಹಾಗೂ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ” ಎಂದು ವಿವರಿಸಿದರು.
ಅಲ್ಪಸಂಖ್ಯಾತರ ಸಮುದಾಯದ ಮುಖಂಡ ಅನ್ವರ್ ಪಾಷ ಮಾತನಾಡಿ, “ಪ್ರವಾದಿ ಮುಹಮ್ಮದ್ ರವರ ನ್ಯಾಯ ಮತ್ತು ಮಾನವೀಯತೆಯ ಸಂದೇಶಗಳನ್ನು ನಾಡಿನ ಜನತೆಗೆ ತಲುಪಿಸುವುದು ಮತ್ತು ಪ್ರವಾದಿಯವರ ಬಗೆಗಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ಹಾಗೂ ವಿವಿಧ ಧರ್ಮೀಯರ ನಡುವಿನ ಪರಸ್ಪರ ಸಂಬಂಧಗಳನ್ನು ಬಲಪಡಿಸುವುದು ಅಭಿಯಾನದ ಉದ್ದೇಶವಾಗಿದೆ. ಪರಸ್ಪರ ತಪ್ಪುಕಲ್ಪನೆಗಳು, ಪೂರ್ವಗ್ರಹಗಳು, ದ್ವೇಷದ ವಾತಾವರಣವನ್ನು ನಿವಾರಿಸಿ ಶಾಂತಿ, ಸಹಬಾಳ್ವೆ ಪರಸ್ಪರರನ್ನು ಅರಿಯುವಂತಹ ಉದ್ದೇಶದಿಂದ ಜಮಾತೆ ಇಸ್ಲಾಮಿ ಹಿಂದ್ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಜನತೆಯ ಸಹಕಾರವನ್ನು ಕೋರಲಾಗಿದೆ” ಎಂದು ಮನವಿ ಮಾಡಿದರು.
ಇದನ್ನೂ ಓದಿ: ಕೋಲಾರ | ಭೀಮ ಪ್ರಜಾ ಸಂಘದ ಜಿಲ್ಲಾ ಪದಾಧಿಕಾರಿಗಳ ಆಯ್ಕೆ
ಪತ್ರಿಕಾಗೋಷ್ಠಿಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಜಿಲ್ಲಾ ಮಾಜಿ ಅಧ್ಯಕ್ಷ ಮುಬಾರಕ್ ಬಾಗ್ಬಾನ್, ತಾಲೂಕು ಅಧ್ಯಕ್ಷ ಅಜ್ಮಲ್ ಖದೀರ್, ಖಜಾಂಜಿ ರುಹುಲ್ಲಾ ಬೇಗ್ ಹಾಗೂ ಜಮಾತೆ ಇಸ್ಲಾಮಿ ಹಿಂದ್ ನ ಸದಸ್ಯರುಗಳಾದ ನಗರ ಸಭೆ ಮಾಜಿ ಸದಸ್ಯ ಸಲಾವುದ್ದೀನ್ ಬಾಬು, ನಗರಸಭೆ ಮಾಜಿ ಅಧ್ಯಕ್ಷ ಅಪ್ರೋಜ್, ಅಮ್ಜದ್, ಮುಜಾಮುಲ್, ಅಯುಬ್ ಖಾನ್, ನಫೀಜ್ ಹಾಗೂ ಇತರರು ಉಪಸ್ಥಿತರಿದ್ದರು.