ಹೈನುಗಾರಿಕೆಯು ಗ್ರಾಮೀಣ ಜನರ ಆರ್ಥಿಕತೆಯ ಬದುಕಿಗೆ ಆಸರೆಯಾಗಿದೆ. ಇತ್ತಿಚಿನ ದಿನಗಳಲ್ಲಿ ರೈತರು ಕೃಷಿಯ ಜತೆಗೆ ಹೈನುಗಾರಿಕೆ ಮಾಡಿಕೊಂಡು ಸುಖಿ ಜೀವನ ನಡೆಸುತ್ತಿದ್ದಾರೆ ಎಂದು ಕೋಮುಲ್ ನಿರ್ದೇಶಕ ಚೆಲುವನಹಳ್ಳಿ ಡಿ ನಾಗರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕೋಲಾರ ತಾಲೂಕಿನ ಕೊಂಡರಾಜನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, “ಹೈನುಗಾರಿಕೆಯಲ್ಲಿ ತೊಡಗಿರುವ ಹಾಲು ಉತ್ಪಾದಕರಿಗೆ ಒಕ್ಕೂಟವು ಸೂಕ್ತ ಬೆಲೆ ನೀಡಿ ಹಾಲು ಖರೀದಿ ಮಾಡುತ್ತಿದ್ದು, ಡೇರಿಗೆ ಗುಣಮಟ್ಟದ ಹಾಲು ನೀಡುವ ಮೂಲಕ ಸಂಘಗಳೂ ಕೂಡ ಉತ್ತಮ ಲಾಭಾಂಶವನ್ನು ಪಡೆದುಕೊಳ್ಳಬೇಕು” ಎಂದರು.
“ರೈತರು ಹೈನುಗಾರಿಕೆ ನಡೆಸಲು ಸಹಕಾರಿ ಬ್ಯಾಂಕುಗಳು ಹಾಗೂ ಒಕ್ಕೂಟದ ಮೂಲಕ ಸಾಲ ಸೌಲಭ್ಯಗಳನ್ನು ನೀಡಲಾಗುತ್ತದೆ. ನಿಮ್ಮ ಸಂಘದಲ್ಲಿ ಜಾಗ ಇದ್ದರೆ ಕಟ್ಟಡ ಕಟ್ಟಲು ಕೋಮುಲ್ ಒಕ್ಕೂಟ, ಕೆಎಂಎಫ್ ಹಾಗೂ ಧರ್ಮಸ್ಥಳ ಸಂಘದ ಮೂಲಕ ಸುಮಾರು 11 ಲಕ್ಷ ಅನುದಾನವನ್ನು ನೀಡಲಾಗುತ್ತದೆ. ಸದುಪಯೋಗ ಪಡಿಸಿಕೊಳ್ಳಬೇಕು ಉತ್ಪಾದಕರನ್ನು ಪೋತ್ಸಾಹಿಸುವ ಕೆಲಸವನ್ನು ಸಂಘಗಳು ಮಾಡಬೇಕಾಗಿದೆ” ಎಂದು ತಿಳಿಸಿದರು.
ಕೋಮುಲ್ ಉಪ ವ್ಯವಸ್ಥಾಪಕ ಡಾ.ಮಹೇಶ್ ಮಾತನಾಡಿ, “ಕೋಮುಲ್ ವತಿಯಿಂದ ನೀಡುವ ಸವಲತ್ತುಗಳನ್ನು ಹಾಲು ಉತ್ಪಾದಕರು ಸಮರ್ಪಕವಾಗಿ ಬಳಸಿಕೊಂಡು ಡೇರಿಗೆ ಗುಣಮಟ್ಟದ ಹಾಲನ್ನು ಪೂರೈಸಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು. ರೈತರು ತಮ್ಮ ಹಸುಗಳಿಗೆ ವಿಮೆ ಮಾಡಿಸಿಕೊಂಡು ಅವುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಹಿಂದೆ ಸಂಘವು ನಷ್ಟದಲ್ಲಿದ್ದ ಡೇರಿ ಈ ಬಾರಿ 46 ಸಾವಿರ ಲಾಭ ಗಳಿಸಿದೆ. ಇದು ಸಾಲದು, ಮುಂದೆ ಆಡಳಿತ ಮಂಡಳಿಯ ಒಗ್ಗಟ್ಟಿನಿಂದ ಡೇರಿ ಅಭಿವೃದ್ಧಿಗೆ ಮುಂದಾಗಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ ಅತಿವೃಷ್ಟಿ ಜಿಲ್ಲೆ ಘೋಷಣೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಧರಣಿ
ಸಂಘದ ಅಧ್ಯಕ್ಷ ಹೆಚ್ ನಾಗರಾಜ್ ಮಾತನಾಡಿ, “ಕೊಂಡರಾಜನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಪ್ರಸಕ್ತ ಸಾಲಿನಲ್ಲಿ ₹2.61 ಲಕ್ಷ ವ್ಯಾಪಾರ ಲಾಭ ಗಳಿಸಿ 46 ಸಾವಿರ ನಿವ್ವಳ ಲಾಭಗಳಿಸಿದೆ. ಮುಂದೆ ಹೆಚ್ಚಿನ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ” ಎಂದು ತಿಳಿಸಿದರು.
ಕೋಮುಲ್ ವಿಸ್ತರಣಾಧಿಕಾರಿ ನಾಗಪ್ಪ, ಗ್ರಾಪಂ ಸದಸ್ಯರಾದ ಶ್ರೀನಿವಾಸ್ ಯಾದವ್, ಸುಬ್ಬರಾಮಪ್ಪ, ಮುಖಂಡ ಕೋರ್ಟ್ ನಾಗರಾಜ್, ಸಂಘದ ಉಪಾಧ್ಯಕ್ಷ ಕೆ ವಿ ಮಂಜುನಾಥ್, ನಿರ್ದೇಶಕರಾದ ಶಂಕರಪ್ಪ, ಲಕ್ಷ್ಮೀಪತಿ, ನಾರಾಯಣಸ್ವಾಮಿ, ಮುರಳಿಬಾಬು, ಸಿ.ನಾರಾಯಣಸ್ವಾಮಿ, ನಂದಕುಮಾರ್, ವೆಂಕಟಲಕ್ಷ್ಮಮ್ಮ, ಕಾರ್ಯದರ್ಶಿ ಗಂಗಾಧರ್ ನಿರೂಪಕಿ ಕೊಂಡರಾಜನಹಳ್ಳಿ ಮಂಜುಳ ಸೇರಿದಂತೆ ಹಾಲು ಉತ್ಪಾದಕರು ಹಾಗೂ ಗ್ರಾಮಸ್ಥರು ಇದ್ದರು.