ತನ್ನ ಪತ್ನಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಾರದಿದ್ದಕ್ಕೆ ವ್ಯಕ್ತಿಯೊಬ್ಬರು ಏಕಾಂಗಿ ಕೊಪ್ಪಳ ಜಿಲ್ಲಾಡಳಿತ ಭವನದ ಎದುರು ಏಕಾಂಗಿ ಹೋರಾಟ ನಡೆಸುತ್ತಿದ್ದು, ನ್ಯಾಯ ಸಿಗುವವರೆಗೂ ಹೋರಾಟ ಕೈಬಿಡುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ.
ಜಿಲ್ಲೆಯ ಕುಷ್ಟಗಿ ತಾಲೂಕಿನ ಹಾಬಲಕಟ್ಟಿ ಗ್ರಾಮದ ಶರಣಪ್ಪ ಬೋವಿ ಎಂಬುವವರು ತಮ್ಮ ಪತ್ನಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗಲೆಂದು 25,000 ರೂಪಾಯಿ ಖರ್ಚು ಮಾಡಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿರುವ ಪತ್ನಿ ಶಿಲ್ಪಾ ಅವರಿಗೆ ಈ ಯೋಜನೆ ಜಾರಿ ಆದಾಗಿಂದಲೂ ಹಣ ಜಮೆಯಾಗಿಲ್ಲ. ಇದರಿಂದ ಬೇಸತ್ತ ಶರಣಪ್ಪ, ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ಶರಣಪ್ಪ ಭೋವಿ ಅವರು ಈ ದಿನ. ಕಾಮ್ ಜತೆಗೆ ಮಾತನಾಡಿದ್ದು, “ಕಳೆದ 3 ವರ್ಷಗಳಿಂದ ಹಣ ಪಡೆಯಲು ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಮತ್ತು ತಾಂತ್ರಿಕ ದೋಷಗಳನ್ನು ಸರಿಪಡಿಸಲು ಹತ್ತಾರು ಕಚೇರಿಗಳಿಗೆ ಅಲೆದಾಡಿದ್ದೇನೆ. ಈ ಅಲೆದಾಟದಲ್ಲಿ ಈವರೆಗೆ ಬರೋಬ್ಬರಿ 25 ಸಾವಿರ ರೂಪಾಯಿ ಖರ್ಚಾಗಿದೆ” ಎಂದು ನೋವು ತೋಡಿಕೊಂಡಿದ್ದಾರೆ.
“ಅಲ್ಲದೇ, ಕಳೆದ ಒಂದು ವರ್ಷದ ಹಿಂದೆ ಕುಷ್ಟಗಿಯಲ್ಲಿ ಗ್ಯಾರಂಟಿ ಸಮಿತಿಯವರೇ ಮುಂದೆ ನಿಂತು ಕೆವೈಸಿ ಮಾಡಿಸಿದ್ದಾರೆ. ಅದಾದ ಒಂದು ತಿಂಗಳಿಗೆ ಗೃಹಲಕ್ಷ್ಮಿ ಯೋಜನೆಯ ಅಪ್ಲಿಕೇಷನ್ ಅಪ್ರೂವಲ್ ಆಗಬೇಕಿತ್ತು. ಆದರೂ ಅಧಿಕಾರಿಗಳ ಕಳ್ಳಾಟದಿಂದ ಯೋಜನೆಯ ಹಣ ಸಿಕ್ಕಿಲ್ಲ”ವೆಂದು ಆಕ್ರೋಶ ಹೊರಹಾಕಿದ್ದು, ಕುಷ್ಟಗಿ ಸಿಡಿಪಿಒ ಹುಲಿಗೆಮ್ಮ ಹುಂಡಿ ಅವರ ವಿರುದ್ಧವೇ ಶರಣಪ್ಪ ಬೋವಿ ಗಂಭೀರ ಆರೋಪ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ನೀಟ್ ಅಕ್ರಮ ಖಂಡಿಸಿ ಕರಾದಸಂಸ ಧರಣಿ; ಧರ್ಮೇಂದ್ರ ಪ್ರಧಾನ ರಾಜೀನಾಮೆಗೆ ಆಗ್ರಹ
ಈ ಕುರಿತು ಕುಷ್ಟಗಿ ಸಿಡಿಪಿಒ ಹುಲಿಗೆಮ್ಮ ಹುಂಡಿ ಅವರನ್ನು ಈ ದಿನ.ಕಾಮ್ ತಂಡ ಸಂಪರ್ಕಿಸಲು ಪ್ರಯತ್ನಿಸಿದೆಯಾದರೂ ಕರೆಗೆ ಲಭ್ಯವಾಗಿಲ್ಲ.
ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಹಣ ಕೊಟ್ಟರೂ ಅಧಿಕಾರಿಗಳು ಅದನ್ನು ಫಲಾನುಭವಿಗಳಿಗೆ ತಲುಪಿಸುತ್ತಿಲ್ಲವೇ ಎನ್ನುವ ಪ್ರಶ್ನೆಗಳು ಎದ್ದಿವೆ. ಹೀಗಾಗಿ, ಮೇಲಧಿಕಾರಿಗಳು ಎಚ್ಚೆತ್ತುಕೊಂಡು ಅರ್ಹ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳು ತಲುಪುವಂತೆ ಮಾಡುವ ಅವಶ್ಯಕತೆ ಇದೆ.





