ಕೊಪ್ಪಳ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-50(ಎನ್‌ಎಚ್-50)ರಲ್ಲಿ ಆಗಸ್ಟ್-2024ರ ಅಂತ್ಯದ ವೇಳೆಗೆ ಸುಮಾರು 190 ಅಪಘಾತಗಳು ಉಂಟಾಗಿ, ಅದರಲ್ಲಿ 59 ಸಾವುಗಳು ಸಂಭವಿಸಿದ್ದವು. ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿವೇಗವಾಗಿ ವಾಹನ ಚಲಾಯಿಸುವುದರಿಂದ ಅಪಘಾತಗಳು ಸಂಭವಿಸಿರುವುದು ಕಂಡುಬರುತ್ತಿದೆ. ಈ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ಕೊಪ್ಪಳ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಅಳವಡಿಸಲಾದ ಸಿಸಿಟಿವಿಗಳ ಉದ್ಘಾಟನಾ ಕಾರ್ಯಕ್ರಮವು ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ನಡೆಯಿತು. ನಂತರ ಜಿಲ್ಲಾಡಳಿತ ಭವನದ ಸಂಸದರ ಕಚೇರಿಯಲ್ಲಿ ಸಂಸದ ರಾಜಶೇಖರ ಹಿಟ್ನಾಳ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
“ರಾಷ್ಟ್ರೀಯ ಹೆದ್ದಾರಿ-50ರಲ್ಲಿ ವಣಬಳ್ಳಾರಿ, ಬೂದಗುಂಪಾ ಕ್ರಾಸ್, ಅಮರೇಶ್ವರ ದೇವಸ್ಥಾನ ಕ್ರಾಸ್, ತುಂಗಭದ್ರಾ ನದಿ ಸೇತುವೆ-1 ಹತ್ತಿರ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು, ಇದಕ್ಕೆ ವಾಹನಗಳ ಅತಿಯಾದ ವೇಗದ ಸಂಚಾರವೇ ಕಾರಣ ಎಂಬುದು ತಿಳಿದಿರುತ್ತದೆ. ಈ ಹಿನ್ನೆಲೆಯಲ್ಲಿ ಅಪಘಾತ ವಲಯವಾದ ಈ ಸ್ಥಳಗಳಲ್ಲಿ ಅನುಮತಿಸಿದ ವೇಗಕ್ಕಿಂತ ಹೆಚ್ಚು ವೇಗವಾಗಿ ಸಂಚರಿಸುವ ವಾಹನಗಳನ್ನು ನಿಯಂತ್ರಣ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ” ಎಂದರು.
“ರಾಷ್ಟ್ರೀಯ ಹೆದ್ದಾರಿ 50ರಲ್ಲಿ ರಸ್ತೆ ಅಪಘಾತಗಳನ್ನು ತಡೆಗಟ್ಟಲು ವಾಹನ ವೇಗ ನಿಯಂತ್ರಣಮಾಡಲು ಭದ್ರತಾ ಸುರಕ್ಷತೆ ಹಾಗೂ ಸಿಸಿಟಿವಿ ಅಳವಡಿಕೆಗಾಗಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದ್ದು, ಇದಕ್ಕಾಗಿ ₹2 ಕೋಟಿ ₹5 ಲಕ್ಷ ಮಂಜೂರು ಮಾಡಿದ್ದಾರೆ. ಇದರಲ್ಲಿ 1 ಕೋಟಿ 39 ಲಕ್ಷ ರೂಪಾಯಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ವಣಬಳ್ಳಾರಿ, ಬೂದಗುಂಪಾ ಕ್ರಾಸ್, ಅಮರೇಶ್ವರ ದೇವಸ್ಥಾನ ಕ್ರಾಸ್, ತುಂಗಭದ್ರಾ ನದಿ ಸೇತುವೆ-1 ಮತ್ತು ಮುನಿರಾಬಾದ್ ಪೋಲಿಸ್ ಠಾಣೆಯಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ” ಎಂದು ತಿಳಿಸಿದರು.
₹70 ಲಕ್ಷ ವೆಚ್ಚದಲ್ಲಿ ಜಂಕ್ಷನ್ ಸ್ಥಳಗಳಲ್ಲಿ ಬೆಳಕಿನ ಸೌಲಭ್ಯ ಒದಗಿಸಲು ತುಂಗಭದ್ರಾ ನದಿ ಸೇತುವೆ-1, ಅಮರೇಶ್ವರ ದೇವಸ್ಥಾನ ಕ್ರಾಸ್, ವಣಬಳ್ಳಾರಿ, ಬೇವೂರ ಕ್ರಾಸ್, ಹಿರೇವಂಕಲಕುಂಟಾ, ತುಂಗಭದ್ರಾ ನದಿ ಸೇತುವೆ-2 ಈ ಸ್ಥಳಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗುತ್ತಿದೆ. ಸಿಸಿಟಿವಿ ಅಳವಡಿಕೆಯಿಂದ ಅಪರಾಧಗಳನ್ನು ತಡೆಗಟ್ಟಲು, ಅಪಘಾತಕ್ಕೀಡಾದ ಮತ್ತು ಓಡಿಹೋದ ಪ್ರಕರಣಗಳಲ್ಲಿ ವಾಹನಗಳನ್ನು ಪತ್ತೆಹಚ್ಚಲು, ರಸ್ತೆ ಅಪಘಾತಗಳನ್ನು ತಪ್ಪಿಸಲು ಅತಿ ವೇಗವನ್ನು ಪರಿಶೀಲಿಸಲು ಸಮಗ್ರ ಕಣ್ಗಾವಲು ಹಾಗೂ ಮೇಲ್ವಿಚಾರಣೆ ಮಾಡಲು ಪೊಲೀಸ್ ಇಲಾಖೆಗೆಗೆ ಅನುಕೂಲವಾಗಲಿದೆ” ಎಂದು ಹೇಳಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ವಿವಿಧ ಯೋಜನೆಗಳು:
“ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿವಿಧ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದ್ದು, ₹28.89 ಕೋಟಿ ವೆಚ್ಚದಲ್ಲಿ ಮೆತಗಲ್ ಕ್ರಾಸ್, ₹27.28 ಕೋಟಿ ವೆಚ್ಚದಲ್ಲಿ ಶಹಪೂರ, ₹19.43 ಕೋಟಿ ವೆಚ್ಚದಲ್ಲಿ ಹಿಟ್ನಾಳ ಕ್ರಾಸ್ ಮತ್ತು ₹29.04 ಕೋಟಿ ವೆಚ್ಚದಲ್ಲಿ ಹುಲಗಿ ಕ್ರಾಸ್ ಸೇರಿದಂತೆ ಒಟ್ಟು ₹104.64 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ನಾಲ್ಕು ಮೇಲ್ಸೇತುವೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಕಾಮಗಾರಿ, ಕಾರ್ಯಕ್ರಮಗಳಲ್ಲಿ ಪಾರದರ್ಶಕತೆ, ಗುಣಮಟ್ಟ ಕಾಪಾಡಿ; ಪ್ರಲ್ಹಾದ ಜೋಶಿ
ಪತ್ರಿಕಾಗೋಷ್ಠಿಯಲ್ಲಿ ಸಂಸದರ ಆಪ್ತ ಸಹಾಯಕ ಅರುಣ, ವೀರಭದ್ರಪ್ಪ ನಾಯಕ್, ಮಾಜಿ ಸಂಸದ ಕರಡಿ ಸಂಗಣ್ಣ, ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್ ಅರಸಿದ್ದಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ ಹೇಮಂತ್ ಕುಮಾರ್, ಕೊಪ್ಪಳ ಡಿವೈಎಸ್‌ಪಿ ಮುತ್ತಣ್ಣ ಸವರಗೋಳ, ಜನಪ್ರತಿನಿಧಿಗಳು, ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಇದ್ದರು.