ಶಿಥಿಲಗೊಂಡ ಕಟ್ಟಡ, ಬಿರುಕು ಬಿಟ್ಟ ಚಾವಣಿ, ತೊಟ್ಟಿಕ್ಕುವ ಮಳೆನೀರು ಮತ್ತು ಎರಡು ತರಗತಿಗಳಿಗೆ ಇಬ್ಬರು ಶಿಕ್ಷಕರಂತೆ ನಡೆಯುತ್ತಿರುವ ಶಾಲೆ. ಶಾಲೆಯ ಆವರಣದಲ್ಲೇ ವಾಹನಗಳ ಸಂಚಾರ, ಕಿಡಿಗೇಡಿ ಯುವಕರ ಅನೈತಿಕ ಚಟುವಟಿಕೆ, ರಾತ್ರಿಯಾದರೆ ಶಾಲೆಯ ಮೈದಾನ ಹಾಗೂ ಶಾಲೆಗಾಗಿ ಕಟ್ಟಿಸಿರುವ ನೀರಿನ ತೊಟ್ಟಿಯೇ ಬಯಲು ಶೌಚಕ್ಕೆ ಜಾಗ, ಶಾಲೆಯ ಮೆಟ್ಟಿಲು, ಕಬ್ಬಿಣದ ಸರಳುಗಳು ಸಾರ್ವಜನಿಕರ ಬಟ್ಟೆ ಒಣಗಿಸುವ ಹ್ಯಾಂಗರ್‌ಗಳು… ಇದು ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದ ಕೆಲವೇ ವರ್ಷಗಳಲ್ಲಿ ಶತಮಾನೋತ್ಸವ ಆಚರಿಸಿಕೊಳ್ಳಲು ಸಜ್ಜುಗೊಳ್ಳುತ್ತಿರುವ ಶಾಸಕರ ಮಾದರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ.
1936ರಲ್ಲಿ ದೊರೆ ನಿಜಾಮರ ಕಾಲದಲ್ಲಿ ಶಾಸಕರ ಮಾದರಿಯ ಶಾಲೆ ಆರಂಭವಾಯಿತು. ಶಾಲೆಯ ಸುದೀರ್ಘ ಇತಿಹಾಸಕ್ಕೆ, ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಹಾಗೂ ಶಿಕ್ಷಕರ ವೇತನದ ಕುರಿತು ಅರೇಬಿಕ್ ಭಾಷೆಯಲ್ಲಿ ಮಾಹಿತಿ ಬರೆದಿರುವುದೇ ಸಾಕ್ಷಿ. ಆಗಿನ ಶಾಲಾ ದಾಖಲಾತಿ ಹೊಸ ಪುಸ್ತಕದ ರೀತಿ ಕಾಣುತ್ತಿದೆ. ಹಾಳೆಗಳೂ ಹರಿದಿಲ್ಲ ಎಂಬುದು ಸೋಜಿಗ.
ಕೃಷ್ಣಾಚಾರ್ಯ, ಪ್ರಹ್ಲಾದರಾವ, ಸಂಗಪ್ಪ ಚೆನ್ನಬಸಪ್ಪ, ಮರ್ದಾನಸಾಬ ಸೇರಿ ಹಲವು ಜನರು ಶಾಲೆ ಮೊದಲ ವಿದ್ಯಾರ್ಥಿಗಳಾಗಿದ್ದಾರೆ. ಕರ್ನಾಟಕ ಏಕೀಕರಣವಾಗುವ ಮುಂಚೆಯೇ ಮೈಸೂರು ರಾಜ್ಯದ ಅವಧಿಯಲ್ಲಿ ಉತ್ತಮ ಶಾಲೆ ಎಂಬ ಪ್ರಶಸ್ತಿಗೆ ಶಾಲೆಗೆ ಭಾಜನವಾಗಿದೆ. ನಿಜಾಮರ ಕಾಲದ ಅವಧಿಯಲ್ಲಿ ಕನ್ನಡವನ್ನು ಪ್ರಥಮ ಭಾಷೆಯಾಗಿ, ಉರ್ದುವನ್ನು ದ್ವಿತೀಯ ಭಾಷೆಯಾಗಿ ಕಲಿಸಲಾಗುತ್ತಿತ್ತು ಎಂಬುದು ಕನ್ನಡ ನಾಡಿನ ಶ್ರೇಷ್ಠ ಇತಿಹಾಸವನ್ನು, ಭಾಷೆಯ ಶ್ರೀಮಂತಿಕೆಯನ್ನು ತಿಳಿಸುವ ಮತ್ತೊಂದು ಉದಾಹರಣೆ. ರಾಜಾಸಾಬ್ ಎಲಿಗಾರ ಆಲಿಯಾಸ್ ಮಿಲಿಟರಿ ರಾಜಣ ಶಾಸಕರ ಈ ಮಾದರಿ ಶಾಲೆಗೆ ಸ್ವಂತ ಜಾಗವನ್ನು ದಾನವಾಗಿ ಕೊಟ್ಟಿದ್ದರು ಎಂದೂ ಹೇಳಲಾಗುತ್ತದೆ. ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸಿಕೊಟ್ಟ ಶಾಲೆಗೆ ಇಂದು ಈ ಪರಿಸ್ಥಿತಿ ಬಂದೊದಗಿದೆ.

ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳು ಎಂಜಿನಿಯರ್‌ಗಳಾಗಿ, ನ್ಯಾಯಾಧೀಶರಾಗಿ, ವಕೀಲರಾಗಿ, ಪೊಲೀಸ್ ಅಧಿಕಾರಿಗಳಾಗಿ ಹಲವು ಉನ್ನತ ಹುದ್ದೆಯಲ್ಲಿದ್ದು ಸಾರ್ವಜನಿಕ ಸೇವೆ ಸಲ್ಲಿಸುತ್ತಿದ್ದಾರೆ. ಅಷ್ಟು ವಿಜೃಂಭಿಸಿದ್ದ ಮಾದರಿ ಶಾಲೆ ಇಂದು ಕಳೆಗುಂದಿರುವ ಯಾವುದೋ ಭೂತ ಬಂಗಲೆಯಂತೆ ಭಾಸವಾಗುತ್ತದೆ. ಅಧಿಕಾರಿಗಳು ಇಚ್ಛಾಶಕ್ತಿ ತೋರಿ ಶಾಲೆಯ ಜೀರ್ಣೋದ್ಧಾರ ಮಾಡಬೇಕು ಎನ್ನುವುದು ಅಲ್ಲಿನ ಜನರ ಸಂಕಟದ ಆಶಯ.
ಈ ಶಾಲೆ ತಾಲ್ಲೂಕಿನಲ್ಲಿಯೇ ಅತ್ಯಂತ ಹಳೆಯದಾದ ಶಾಲೆ. ಕೆಲವೇ ವರ್ಷ ಕಳೆದರೆ 100 ವರ್ಷ ಪೂರೈಸಲು ಸಜ್ಜಾಗಿರುವ ಮಾದರಿ ಸರಕಾರಿ ಶಾಲೆ ಶೈಕ್ಷಣಿಕ ಸಾಧನೆಯಲ್ಲಿ ತೀರಾ ಹಿಂದುಳಿದಿದೆ. ಇದು ಕನಕಗಿರಿ ಪಟ್ಟಣದ ಪಾಲಕರಲ್ಲಿ ಆತಂಕ ಸೃಷ್ಟಿ ಮಾಡಿದೆ. ಅಲ್ಲದೆ, ಶಾಲೆಗಳಲ್ಲಿನ ಮೂಲಸೌಲಭ್ಯಗಳ ದುಸ್ಥಿತಿ ಮಕ್ಕಳ ಕಲಿಕೆಗೂ ಅಡ್ಡಿಯಾಗಿದೆ. ಇದರಿಂದ ದಿನೇದಿನೇ ಈ ಸರ್ಕಾರಿ ಶಾಲೆಯಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ಜಿಲ್ಲೆಯ ಹೆಗ್ಗುರುತಿನಂತೆ ಇರುವ ಈ ಶಾಲೆಯ ಅಭಿವೃದ್ಧಿಗೆ ಮತ್ತು ಉನ್ನತ ಸೌಲಭ್ಯ ಕಲ್ಪಿಸಲು ಸರ್ಕಾರ ಕ್ರಮವಹಿಸಬೇಕಿದೆ. ಕನಕಗಿರಿಯ ಶಾಲೆಯಲ್ಲಿ 18 ಶಿಕ್ಷಕ ಹುದ್ದೆಗಳು ಮಂಜೂರಾಗಿದ್ದರೂ ಕೇವಲ 7 ಶಿಕ್ಷಕರು ಖಾಯಂ ಇದ್ದು, ಅದರಲ್ಲಿ ಒಬ್ಬರು ಕ್ರೀಡಾ ಶಿಕ್ಷಕರು, ಒಬ್ಬರು ಸಂಗೀತ ಶಿಕ್ಷಕರಿದ್ದಾರೆ. ಉಳಿದ 5 ಮಂದಿ ಶಿಕ್ಷಕರು ವಿಷಯಾಧಾರಿತ ಹಾಗೂ 8 ಅತಿಥಿ ಶಿಕ್ಷಕರಿದ್ದಾರೆ ಇನ್ನುಳಿದ ಶಿಕ್ಷಕರ ಹುದ್ದೆ ಖಾಲಿಯಿವೆ.


ಜಿಲ್ಲೆಯ ಎಲ್ಲಾ ಶಾಲೆಗಳು ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ, ಕ್ರೀಡಾ ಉಪಕರಣಗಳ ಸೌಲಭ್ಯದಿಂದ ವಂಚಿತಗೊಂಡಿವೆ ಎನ್ನುವುದು ಇನ್ನೊಂದು ದುರಂತ. ಮೊದಲೇ ಶೈಕ್ಷಣಿವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಜಿಲ್ಲೆಯಲ್ಲಿ ಈ ರೀತಿಯ ಬೆಳವಣಿಗೆಗಳು ಮತ್ತಷ್ಟು ಆತಂಕಕಾರಿ. ಮುಂದಿನ ದಿನಗಳಲ್ಲಾದರೂ ಅಗತ್ಯವಿರುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಿ, ಜಿಲ್ಲೆಯ ಹೆಮ್ಮೆಗಳಾಗಿ ಶತಮಾನ ಪೂರೈಸುತ್ತಿರುವ ಶಾಲೆಗೆ ಅಭಿವೃದ್ಧಿ ಪಡಿಸುವ ಮಹತ್ವದ ಜವಾಬ್ದಾರಿ ಸರ್ಕಾರದ ಮೇಲಿದೆ.
ಒಟ್ಟು 23 ಕೊಠಡಿಗಳು ಅದರಲ್ಲಿ ಹಳೆಯ ಕಟ್ಟಡ ಹಾಗೂ ಸತತ ಮಳೆಗೆ ಹಾಳಾದ ಒಟ್ಟು 8 ಕೊಠಡಿಗಳು ಶಿಥಿಲಗೊಂಡು, ಅಪಾಯದ ಅಂಚಿನಲ್ಲಿವೆ. ತರಗತಿ ಕೋಣೆಗಳು ಸಂಪೂರ್ಣ ದುರಸ್ತಿ, ಮರು ನಿರ್ಮಾಣ ಕೈಗೊಳ್ಳುವ ಸ್ಥಿತಿ ತಲುಪಿವೆ. 4 ಹೊಸ ಕಟ್ಟಡ ಮಂಜೂರಾಗಿದ್ದರೂ ಇನ್ನೂ ಅದಕ್ಕೆ ಕಾಯಕಲ್ಪ ಕೂಡಿಬಂದಿಲ್ಲ. ತಾಂತ್ರಿಕ ದೋಷದ ನೆಪ ಹೇಳುತ್ತ ನೆನೆಗುದಿಗೆ ಬಿದ್ದಿದೆ. ಇದರ ಬಗ್ಗೆ ಮೇಲಧಿಕಾರಿಗಳು ಇತ್ತ ಗಮನ ಹರಿಸಿಲ್ಲ ಎಂದು ಪಟ್ಟಣದ ನಾಗರಿಕರಿಂದ ಹಾಗೂ ವಿದ್ಯಾರ್ಥಿಗಳ ಪಾಲಕರಿಂದ ಆರೋಪ ಕೇಳಿಬರುತ್ತಿದೆ.
ಮಳೆಗೆ ಬಿರುಕು ಬಿಟ್ಟು ಮೇಲಿನ ಚಾವಣಿ ಪದರು ಆಗಾಗ್ಗೆ ಬೀಳುವುದು, ಮಳೆ ನೀರು ಜಿನುಗುವುದು, ತೇವಾಂಶದಿಂದ ಎಲೆಕ್ಟ್ರಿಕಲ್ ವಯರ್‌ಗಳು ಗೋಡೆಯಿಂದ ಕಳಚಿ ಬಿದ್ದಿವೆ. ಆದರೆ, ಇತ್ತೀಚೆಗೆ ಅವುಗಳನ್ನು ಸ್ವಂತ ಖರ್ಚಿನಿಂದ ದುರಸ್ತಿಗೊಳಿಸಲಾಗಿದೆ ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕರು. ಶಿಥಿಲಗೊಂಡ ಹಳೆಯ ಕಟ್ಟಡದಲ್ಲಿ ಬಿಸಿಯೂಟದ ಅಡಿಗೆ ಮಾಡಲಾಗುತ್ತದೆ. ಅದರಲ್ಲಿ ನಿತ್ಯವೂ ಹೆಗ್ಗಣ, ಇಲಿಗಳ ಕಾಟ ಸಿಲೆಂಡರ್, ಗ್ಯಾಸ್ ಪೈಪ್ ಕಟ್ ಮಾಡುವ ಭೀತಿ. ಗುಡ್ಡೆ ರಾಶಿ ಮಣ್ಣು ತುಂಬಿದೆ. ಆದರೂ, ಅಲ್ಲಿಯೇ ಅಡಿಗೆ ಮಾಡಬೇಕು ಎಂದು ಬಿಸಿಯೂಟದ ಕಾರ್ಯಕರ್ತೆ ತಿಳಿಸಿದರು.
ಎಸ್‌ಡಿಎಮ್‌ಸಿ ಸಮಿತಿ ರಚನೆಯಾಗಿ ಈಗಾಗಲೇ ಸುಮಾರು ವರ್ಷಗಳಾಗಿವೆ. ಆದರೆ, ಇಲ್ಲಿಯವರೆಗೂ ಶಾಲೆಯ ಮುಖ್ಯ ಶಿಕ್ಷಕರು ಪಾಲಕರ ಹಾಗೂ ಸಮಿತಿ ಸಭೆ ಕರೆದು ಯಾವೊಂದು ವಿಷಯವನ್ನೂ ಚರ್ಚಿಸಿಲ್ಲ. ಇದರ ಕುರಿತು ಕೇಳಲಾಗಿ, ಮುಖ್ಯ ಶಿಕ್ಷಕ ಹಾಗೂ ಎಸ್‌ಡಿಎಮ್‌ಸಿ ಅಧ್ಯಕ್ಷ ಇಲ್ಲಸಲ್ಲದ ಸಬೂಬು ಹೇಳಿ ನುಣಿಚಿಕೊಳ್ಳುತ್ತಾರೆ ಎಂದು ಎಸ್‌ಡಿಎಮ್‌ಸಿ ಸದಸ್ಯರೊಬ್ಬರು ಆರೋಪಿಸಿದರು.


ಶಾಸಕರ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿದ್ಯಾರ್ಥಿಗಳ ಸಂಖ್ಯೆ ಬೆರಳೆಣಿಕೆಯಲ್ಲಿದ್ದು, ತರಗತಿವಾರು ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ ಸರ್ಕಾರ ಸಾಕಷ್ಟು ಸವಲತ್ತುಗಳನ್ನು ನೀಡುತ್ತಿದ್ದರೂ ವರ್ಷದಿಂದ ವರ್ಷಕ್ಕೆ ಪ್ರವೇಶಾತಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಈ ಶಾಲೆಗೆ ಆಂಗ್ಲ ಮಾಧ್ಯಮ ಹಾಗೂ ಎಲ್‌ಕೆಜಿ, ಯುಕೆಜಿ ತರಗತಿ ಆರಂಭವಾಗಿದೆ ಇದರಿಂದ ಕೆಲ ಮಕ್ಕಳು ದಾಖಲಾಗಿರುವುದು ಕೊಂಚ ಸಮಾಧಾನಕರ. ಇಲ್ಲದಿದ್ದರೆ ವಿದ್ಯಾರ್ಥಿಗಳ ಸಂಖ್ಯೆ ಇನ್ನೂ ಇಳಿಕೆಯಾಗುತ್ತಿತ್ತು. ಪಾಲಕರಲ್ಲಿ ಆಂಗ್ಲ ಮಾಧ್ಯಮ ಶಾಲೆಗಳ ಆಕರ್ಷಣೆ ಹಾಗೂ ಶಾಲೆಯ ಎಸ್‌ಡಿಎಂಸಿ ನಿರಾಸಕ್ತಿಯೂ ಇದಕ್ಕೆ ಕಾರಣ ಎಂದು ಇಲ್ಲಿಯ ಸ್ಥಳೀಯರು ಆರೋಪಿಸುತ್ತಾರೆ.
ಶಾಲೆಗೆ ಮಹಿಳಾ ಶಿಕ್ಷಕಿಯರಿಗೆ ಹಾಗೂ ಹೆಣ್ಣು ಮಕ್ಕಳಿಗೆ ಹಾಗೂ ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ಇಲ್ಲ. ಗಂಡು ಮಕ್ಕಳು ಶಾಲೆ ಹಾಗೂ ಸರಕಾರಿ ಆಸ್ಪತ್ರೆಯೆ ಮಧ್ಯದ ಒಂದು ಕಿರುದಾರಿಯಲ್ಲಿ ಬಯಲಿಗೆ ಹೋಗುತ್ತಾರೆ. ಇದೂ ಈ ಶಾಲೆಯ ಮೂಲ ಕೊರತೆಯಾಗಿದೆ ಎಂದು ಶಿಕ್ಷಕರೊಬ್ಬರು ಹೇಳಿದರು.
ವಿದ್ಯಾರ್ಥಿಗಳಲ್ಲಿ ಕ್ರಿಡಾ ಆಸಕ್ತಿ ಹೆಚ್ಚಿಸಲು ಸರಕಾರ ಉಚಿತವಾಗಿ ಕ್ರೀಡಾ ಪರಿಕರಗಳನ್ನು ಕೊಡುತ್ತದೆ. ಆದರೆ, ಶಾಲೆಯಲ್ಲಿ ಇಟ್ಟಿದ್ದ ಕ್ರಿಡಾ ವಸ್ತುಗಳು ಸ್ಥಳೀಯ ಕಿಡಿಗೇಡಿಗಳ ಪಾಲಾಗುತ್ತಿವೆ. ಶಾಲೆಯ ಕಿಟಕಿ ಮುರಿದು ಕ್ರೀಡಾ ಸಾಮಗ್ರಿಗಳನ್ನು ದೋಚಿದ್ದಾರೆ. ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ಸಾಮಗ್ರಿಗಳು ಕಳ್ಳತನವಾಗಿದೆ. ಅಲ್ಲದೆ, ಶಾಲೆಯ ಗ್ರಂಥಾಲಯದಲ್ಲಿ ಸುಮಾರು 2000 ಪುಸ್ತಕಗಳು ಇದ್ದವು ಅದರಲ್ಲಿ 1000ಕ್ಕೂ ಹೆಚ್ವು ಪುಸ್ತಕಗಳನ್ನು ಶಾಲಾ ರಜಾ ಹಾಗೂ ರಾತ್ರಿ ಸಮಯದಲ್ಲಿ ಕಳ್ಳತನ ಮಾಡಲಾಗಿದೆ. ಇದಕ್ಕೆ ಸುಭದ್ರ ಕಾಂಪೌಂಡ್ ಹಾಗೂ ಗೇಟ್ ಇಲ್ಲದಿರುವುದೇ ಕಾರಣ ಎಂದು ಶಾಲೆಯ ಸಹ ಶಿಕ್ಷಕಿ ಹೇಳುತ್ತಾರೆ.

ಇದನ್ನೂ ಓದಿ: ಕೊಪ್ಪಳ | ಟಣಕನಕಲ್ಲ ಗ್ರಾಮದ ದಲಿತ ಕಾಲೋನಿಯ ಬೇಡಿಕೆ ಈಡೇರಿಕೆಗೆ ಒತ್ತಾಯ
ಇದೇ ಶಾಲೆಯ ಹಳೆಯ ವಿದ್ಯಾರ್ಥಿ ಇಂದಿನ ಎಸ್‌ಡಿಎಮ್‌ಸಿ ಸದಸ್ಯ ಹನಮಂತ ರೆಡ್ಡಿ ಈದಿನ.ಕಾಮ್ನೊಂದಿಗೆ ಮಾತನಾಡಿ, “ನಾನು ಇದೆ ಶಾಲೆಯಲ್ಲಿ ಕಲಿತಿದ್ದೇನೆ. ನನ್ನ ಮಕ್ಕಳೂ ಇದೇ ಶಾಲೆಯಲ್ಲಿ ಕಲಿತಿದ್ದಾರೆ. ಆದರೆ, ಕೊಠಡಿಯಲ್ಲಿರುವ ಪೀಠೋಪಕರಣಗಳು, ಸಿಸಿಟಿವಿ ಮಕ್ಕಳು ಆಡುವ ಆಟದ ವಸ್ತುಗಳು ಪುಸ್ತಕಗಳು ಕಳ್ಳತನವಾಗಿವೆ ಈ ಕುರಿತು ಸಚಿವರಿಗೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಕೊಟ್ಟಿರುತ್ತೇವೆ. ಆದರೂ ಸ್ಪಂದಿಸುತ್ತಿಲ್ಲ. ಇಲ್ಲಿ ಮುಖ್ಯ ಶಿಕ್ಷಕರಂತೂ ಯಾವುದಕ್ಕೂ ಎಸ್‌ಡಿಎಮ್‌ಸಿ ಸದಸ್ಯರನ್ನು ಹಾಗೂ ಸಹ ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಮ್ಮದೇ ದರ್ಪ ನಡೆಸುತ್ತಿದ್ದಾರೆ” ಎಂದು ಆರೋಪಿಸಿದರು.
ಇನ್ನಾದರೂ ಶಾಸಕ, ಸಚಿವರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ಶತಮಾನ ಕಾಣುತ್ತಿರುವ ಈ ಶಾಲೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟು ಸ್ವಾತಂತ್ರ್ಯ ಪೂರ್ವದ ಶಾಸಕರ ಮಾದರಿ ಶಾಲೆಯನ್ನು ಮಾದರಿಯಾಗಿಯೇ ಉಳಿಸಬೇಕಿದೆ.