ಕೊಪ್ಪಳದ ಟಣಕನಕಲ್ಲ ಗ್ರಾಮದ ದಲಿತ ಕಾಲೋನಿಯ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ ಗ್ರಾಮ ಪಂಚಾಯತ್ ವಿವಿಧೋದ್ದೇಶ ಸಂಘಟನಾ ಕಾರ್ಯಗಳ ಒಕ್ಕೂಟ ಒತ್ತಾಯಿಸಿದೆ. ಓಜಿನಹಳ್ಳಿ ಗ್ರಾಮ ಪಂಚಾಯತ್ ಪಿಡಿಒ ಅನುಪಸ್ಥಿತಿಯಲ್ಲಿ ಆದಯ್ಯ ಸ್ವಾಮಿ ಹಾಗೂ ಗ್ರಾಂಪಂ ಅಧ್ಯಕ್ಷ ಹುಚ್ಚಪ್ಪ ಯಮನಪ್ಪ ಭೋವಿ ಅವರಿಗೆ ಈ ಕುರಿತು ಮನವಿ ಸಲ್ಲಿಸಲಾಗಿದೆ.
“ಕೊಪ್ಪಳ ತಾಲೂಕಿನ ಓಜಿನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಟಣಕನಕಲ್ಲ ಗ್ರಾಮದ ಎಸ್ಸಿ ಕಾಲೋನಿಯಲ್ಲಿ ಮಹಿಳೆಯರಿಗೆ ಯಾವುದೇ ಸಾರ್ವಜನಿಕ ಶೌಚಾಲಯ ಇರುವುದಿಲ್ಲ. ಇದರಿಂದ ಅನಿವಾರ್ಯವಾಗಿ ಮಹಿಳೆಯರು ಬಹಿರ್ದೆಸೆಗೆ ಹೋಗಬೇಕಾಗಿದೆ. ಇದರಿಂದ ತುಂಬಾ ತೊಂದರೆ ಆಗುತ್ತಿದೆ. ಕೂಡಲೇ ಸಾರ್ವಜನಿಕ ಶೌಚಾಲಯ ನಿರ್ಮಿಸಿಕೊಡಬೇಕು. ಕುಡಿಯುವ ನೀರಿಗಾಗಿ ಸಾರ್ವಜನಿಕ ಸ್ಥಳದಲ್ಲಿ ನಳದ ವ್ಯವಸ್ಥೆಯನ್ನೂ ಮಾಡಿಕೊಡಬೇಕು” ಎಂದು ಮನವಿ ಮಾಡಿದ್ದಾರೆ.
“ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಅಡುಗೆ ಮಾಡುವ ಸಿಬ್ಬಂದಿಯಲ್ಲಿ ಯಾವುದೇ ದಲಿತ ಮಹಿಳೆಯರು ಇರುವುದಿಲ್ಲ. ಕೂಡಲೇ ಅಡಿಗೆ ಮಾಡುವ ಸಿಬ್ಬಂದಿಯಲ್ಲಿ ದಲಿತ ಮಹಿಳೆಯರನ್ನು ಆಯ್ಕೆ ಮಾಡಿಕೊಂಡು ಸಾಮಾಜಿಕ ಸಮಾನತೆ ಸಾಧಿಸಬೇಕು. ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು” ಎಂದು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಹಾಗೂ ಅಧ್ಯಕ್ಷರಿಗೆ ಆಗ್ರಹಿಸಿದರು.
ಇದನ್ನೂ ಓದಿ: ಕೊಪ್ಪಳ | ನಗರಸಭೆ ಅಧ್ಯಕ್ಷರ ಸಹೋದರ & ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ
ಈ ವೇಳೆ ಕರ್ನಾಟಕ ಗ್ರಾಮ ಪಂಚಾಯತ್ ವಿವಿಧೋದ್ದೇಶ ಸಂಘಟನಾ ಕಾರ್ಯಗಳ ಒಕ್ಕೂಟದ ತಾಲೂಕು ಸಂಯೋಜಕ ಸುಂಕಪ್ಪ ಮೀಸಿ, ಟಣಕನಕಲ್ಲ ಗ್ರಾಮಸ್ಥರಾದ ಯಮನೂರಪ್ಪ ಕುಂಜಾಲಿ, ಮಾರುತಿ ಕುಂಜಾಲಿ, ಹನುಮವ್ವ ಕುಂಜಾಲಿ, ಯಮನವ್ವ ಕುಂಜಾಲಿ, ಹನುಮಪ್ಪ ಕುಂಜಾಲಿ, ಪರಶುರಾಮ್ ಕುಂಜಾಲಿ, ದುರಗವ್ವ ಕುಂಜಾಲಿ, ಈರವ್ವ ಕುಂಜಾಲಿ, ಸುರೇಶ ಕುಂಜಾಲಿ, ಗಾಳೆವ್ವ ಕುಂಜಾಲಿ ಹಾಗೂ ಇತರರು ಉಪಸ್ಥಿತರಿದ್ದರು.