ಕೊಪ್ಪಳದ ಕಾರಟಗಿ ತಾಲೂಕಿನ ಉಳೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಗೊಳಪಡುವ ಈಳಿಗನೂರು ಗ್ರಾಮದ ಎಸ್‌ಸಿ ಕಾಲೋನಿಯು ಮೂಲಸೌಕರ್ಯದಿಂದ ಸಂಪೂರ್ಣವಾಗಿ ವಂಚಿತವಾಗಿದ್ದು, ಬಡಾವಣೆಗೆ ಶುದ್ಧ ಕುಡಿಯುವ ನೀರು, ಚರಂಡಿ ಸೇರಿ ಅಗತ್ಯವಿರುವ ಎಲ್ಲಾ ರೀತಿಯ ಸೌಕರ್ಯಗಳನ್ನು ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿ ಈಳಿಗನೂರು ಗ್ರಾಮದ ಯುವಕರು ಉಳೆನೂರು ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದರು.
ಈಳಿಗನೂರು ಯಮನೂರು ಮಾತನಾಡಿ, “ದಲಿತರ ಓಣಿಗಳು ಸುಸಜ್ಜಿತವಾದ ಚರಂಡಿ, ರಸ್ತೆ ನಿರ್ಮಾಣವಾಗದೆ ಇನ್ನೂ ಕೆಸರು ತುಂಬಿದವುಗಳೇ ಇದ್ದಾವೆ. ನಾವು ಇನ್ನೂ ಯಾವ ಕಾಲದಲ್ಲಿದ್ದೇವೆ ಎಂಬ ಅನುಮಾನ ನಮ್ಮನ್ನು ಕಾಡುತ್ತಿದೆ. ಸ್ವಾತಂತ್ರ್ಯ ಸಿಕ್ಕು 77 ವರ್ಷ ಕಳೆದರೂ ಎಸ್‌ಸಿ ಬಡಾವಣೆಗಳು ಆರೋಗ್ಯಪೂರ್ಣವಾಗಿಲ್ಲ. ಈಳಿಗನೂರು ಗ್ರಾಮದ ದಲಿತರ ಮನೆಗಳು ಇನ್ನೂ ಗುಡಿಸಲು ಹಾಗೂ ಟೆಂಟ್‌ಗಳ ರೂಪದಲ್ಲೇ ಇವೆ. ದಲಿತರ ಅಭಿವೃದ್ಧಿಗಾಗಿ ಮೀಸಲಿರುವ ಎಸ್‌ಸಿಪಿ/ಟಿಎಸ್‌ಪಿ ಹಣ ಎಲ್ಲಿ ಹೋಯ್ತು? ಗುಡಿಸಲು ಹಾಕಿಕೊಂಡು ಸಣ್ಣ ಪುಟ್ಟ ಮನೆ ಕಟ್ಟಿಕೊಂಡು ಬದುಕೋಣ ಅಂದ್ರೆ ಮನೆ ಮುಂದೆ ಚರಂಡಿ ವ್ಯವಸ್ಥೆ ಇಲ್ಲ. ಇದರಿಂದ ಸೊಳ್ಳೆಗಳು ಹರಡಿ ನಾವು ದುಡಿದ ಹಣವನ್ನೆಲ್ಲ ಆರೋಗ್ಯ ಕಾಪಾಡಿಕೊಳ್ಳಲು ಖರ್ಚು ಮಾಡುವಂತಾಗಿದೆ. ಇಲ್ಲಿರುವವರ ಆರೋಗ್ಯಕ್ಕೆ ಏನಾದರೂ ತೊಂದರೆ ಆದರೆ ಅದಕ್ಕೆ ನೇರವಾಗಿ ಗ್ರಾಮ ಪಂಚಾಯತಿಯೇ ಕಾರಣವಾಗುತ್ತೆ. ಓಣಿಯಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿವೆ, ಚರಂಡಿಗಳಿಲ್ಲ ರಸ್ತೆ ದಾಟುವುದಕ್ಕೆ ಸಿಡಿ ಗಳಿಲ್ಲ ಮಳೆ ಬಂದರೆ ಮನೆ ಒಳಗೆ ನೀರು ಬರ್ತವೆ ಇದನ್ನೆಲ್ಲ ಮನದಲ್ಲಿಟ್ಟುಕೊಂಡು ಆದಷ್ಟು ಬೇಗ ವಾರ್ಡಿನ ಎಲ್ಲಾ ಚರಂಡಿಗಳನ್ನು ನಿರ್ಮಿಸಿಕೊಡಬೇಕು” ಎಂದು ಆಗ್ರಹಿಸಿದರು.
ಶ್ರೀಕಾಂತ ಮಾತನಾಡಿ, “ಚರಂಡಿ ಇಲ್ಲದೆ ನಮಗೆ ತುಂಬಾ ಸಮಸ್ಯೆ ಆಗುತ್ತೆ. ಮನೆಯಲ್ಲಿ ಕೂತು ಊಟ ಮಾಡಕ್ಕಾಗಲ್ಲ. ನೀರೆಲ್ಲ ಮನೆ ಮುಂದೆ ಹರಿಯುತ್ತೆ. ಮನೆಗಳಲ್ಲಿ ಎಲ್ಲರಿಗೂ ಡೆಂಗು, ಮಲೇರಿಯಾದಂತ ಕಾಯಿಲೆಗಳು ಬರುತ್ತಿರುತ್ತವೆ. ತಕ್ಷಣ ಈ ಸಮಸ್ಯೆಯನ್ನು ಪರಿಹರಿಸಬೇಕು. ಗ್ರಾಮ ಸಭೆಗಳನ್ನು ಗ್ರಾಮ ಪಂಚಾಯತಿಯಲ್ಲಿ ಕೂತು ತಾವು ತಾವೇ ಚರ್ಚೆ ಮಾಡಿದರೆ ಇಲ್ಲಿನ ಸಮಸ್ಯೆಗಳು ಗೊತ್ತಾಗುವುದಾದರೂ ಹೇಗೆ? ಸಾರ್ವಜನಿಕವಾಗಿ ಸಭೆ ಸೇರಿಸಿ ಜನರ ಸಮಸ್ಯೆಗಳನ್ನು ಕೇಳಿ ಪರಿಹರಿಸಿ” ಎಂದರು.
ಇದನ್ನೂ ಓದಿ: ಕೊಪ್ಪಳ | ನಗರಸಭೆ ಅಧ್ಯಕ್ಷರ ಸಹೋದರ & ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ
ರಮೇಶ್ ಕಂಠಿ ಹಾಗೂ ಸುರೇಶ ಮಾತನಾಡಿ, “ಊರಿನ ಮುಖ್ಯ ರಸ್ತೆಯಿಂದ ಓಣಿಯನ್ನು ಸಂಪರ್ಕಿಸುವ ರಸ್ತೆಗಳು ಗುಂಡಿ ಬಿದ್ದಿವೆ. ಇದರಿಂದ ವಾಹನ ಸವಾರರಿಗೆ ಮಕ್ಕಳಿಗೆ ತುಂಬಾ ತೊಂದರೆ ಆಗುತ್ತಿದೆ. ಕೇರಿಯಲ್ಲಿ ಚರಂಡಿ ಮಾತ್ರವಲ್ಲ ಇನ್ನು ಮುಂತಾದ ಮೂಲ ಸೌಕರ್ಯಗಳ ಕೊರತೆ ಇದೆ. ಅದು ಈ ಪಂಚಾಯತಿಗೆ ಕಾಣಿಸ್ತಾ ಇಲ್ಲ. ಮುಂದೆ ಇದೇ ರೀತಿ ಕಡೆಗಣಿಸಿದರೆ ನಾವು ಜಿಲ್ಲಾ ಪಂಚಾಯಿತಿಗೆ ಕಾಲ್ನಡಿಗೆ ಜಾಥಾ ಮಾಡುವ ಮೂಲಕ ಉಗ್ರ ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಸಿದರು.
ಈ ವೇಳೆ ಲೋಕೇಶ್, ಶಿವರಾಜ್, ಶರಣ್, ವಿಜಯ್ ಕುಮಾರ್, ರಾಜಣ್ಣ ಹಾಗೂ ಇತರರು ಇದ್ದರು.