ಬೆಳೆ ನಷ್ಟ, ಸಾಲದ ಬಾಧೆ ಹಾಗೂ ಮಾರುಕಟ್ಟೆಯ ಅನ್ಯಾಯದ ವಿರುದ್ಧವಾಗಿ ಗಂಗಾವತಿಯಲ್ಲಿ ರೈತರು ಧ್ವಜ ಹಿಡಿದು ಬೀದಿಗಿಳಿದರು. ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನೆ ದೆಹಲಿ ನೇತೃತ್ವದೊಂದಿಗೆ ಗಂಗಾವತಿಯಲ್ಲಿ ನೂರಾರು ರೈತರು ಭಾಗವಹಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆಗಳ ಮೂಲಕ ಆಗ್ರಹಿಸಿದರು.
ಗಂಗಾವತಿಯಲ್ಲಿ ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನೆ ದೆಹಲಿಯಿಂದ ನೂರಾರು ರೈತರು ತಮ್ಮ ಮೂಲಭೂತ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಾಲೂಕಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಭಾಕ್ರಾಂಕಿಸೇ ಜಿಲ್ಲಾ ಅಧ್ಯಕ್ಷ್ಯ ದೊಡ್ಡ ಬರಮಣ್ಣರ ಮಾತನಾಡಿ, “ಸರ್ಕಾರ ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಿದರೆ ಅದು ಗ್ರಾಮೀಣ ಆರ್ಥಿಕತೆಯ ಕುಸಿತಕ್ಕೆ ಕಾರಣವಾಗುತ್ತದೆ. ನಿತ್ಯವೂ ರೈತರ ಆತ್ಮಹತ್ಯೆಯಿಂದ ದಿಕ್ಕೆಟ್ಟಿದ್ದಾರೆ. ಆದರೆ ಸರ್ಕಾರ ಕೇವಲ ಭರವಸೆಯ ಮಾತುಗಳನ್ನೇ ನೀಡುತ್ತಿದೆ. ಬೆಳೆಹಾನಿ ಪರಿಹಾರ, ಸಾಲಮನ್ನಾ, ಬೆಂಬಲ ಬೆಲೆ ಇವು ರೈತರ ಜೀವಾಳಕ್ಕೆ ಸಂಬಂಧಿಸಿದ ಬೇಡಿಕೆಗಳು. ಈ ಬೇಡಿಕೆಗಳನ್ನು ತಕ್ಷಣ ಪೂರೈಸದಿದ್ದರೆ, ರಾಜ್ಯವ್ಯಾಪಿ ಬೃಹತ್ ಹೋರಾಟ ಆರಂಭಿಸಲು ನಾವು ಹಿಂಜರಿಯುವುದಿಲ್ಲ” ಎಂದು ಎಚ್ಚರಿಸಿದರು.
“ಪ್ರಾಕೃತಿಕ ವಿಕೋಪದಿಂದ ಬೆಳೆ ಹಾನಿಯಾದ ರೈತರಿಗೆ ಎಕರಗೆ ಕನಿಷ್ಠ ₹25,000 ಪರಿಹಾರ ನೀಡಬೇಕು. ಬೆಳೆ ವಿಮಾ ಯೋಜನೆಗಳು ನಿಜವಾದ ರೈತರಿಗೆ ತಲುಪುವಂತೆ ಕಡ್ಡಾಯವಾಗಿ ಜಾರಿಗೆ ತರಬೇಕು. ರೈತರಿಗೆ ಉಚಿತ ಬಿತ್ತನೆಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಔಷಧಿಗಳನ್ನು ಒದಗಿಸಬೇಕು. ಸಾಲಮನ್ನಾ ತಕ್ಷಣ ಜಾರಿಗೆ ಬರಬೇಕು; ರೈತರಿಗೆ ಹೊಸ ಸಾಲ ವಿತರಣೆ ಸುಲಭವಾಗಬೇಕು. ಗ್ರಾಮೀಣ ಉದ್ಯೋಗ ಯೋಜನೆಗಳನ್ನು ಬಲಪಡಿಸಿ ನಿರುದ್ಯೋಗ ನಿವಾರಣೆ ಮಾಡಬೇಕು. ಎಲ್ಲ ಬೆಳೆಗಳಿಗೆ MSP(ಕನಿಷ್ಠ ಬೆಂಬಲ ಬೆಲೆ) ನಿಗದಿ ಮಾಡಿ, ಖರೀದಿ ಖಚಿತಪಡಿಸಬೇಕು. ರೈತರು ಖಾಸಗಿ ಹಣಕಾಸು ಸಂಸ್ಥೆಗಳ ಬಲೆಗೆ ಸಿಲುಕದಂತೆ ಸಹಕಾರ ಮತ್ತು ಸರ್ಕಾರಿ ಬ್ಯಾಂಕ್‌ಗಳ ಮೂಲಕವೇ ಸಾಲ ವಿತರಣೆಯಾಗಬೇಕು ಹಾಗೂ ರೈತರ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರವಲ್ಲ, ಶಾಶ್ವತ ನೀತಿ ಕ್ರಮಗಳು ರೂಪುಗೊಳ್ಳಬೇಕು” ಎಂಬುದು ಸೇರಿದಂತೆ ಮುಂತಾದ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬಾಗೇಪಲ್ಲಿ | ಜಾತಿಗಣತಿ ಸಮೀಕ್ಷೆಯಲ್ಲಿ ಒಕ್ಕಲಿಗ ಎಂದೇ ನಮೂದಿಸಿ: ಸಮುದಾಯಕ್ಕೆ ಮಂಗಲನಾಥ ಸ್ವಾಮೀಜಿ ಮನವಿ
ಇದೇ ವೇಳೆ, ಮನವಿಯನ್ನು ಸ್ವೀಕರಿಸಿದ ಸ್ಥಳೀಯ ಅಧಿಕಾರಿಗಳು, “ಬೇಡಿಕೆಗಳನ್ನು ಮೇಲಧಿಕಾರಿಗಳಿಗೆ ಕಳುಹಿಸಲಾಗುವುದು” ಎಂದು ಭರವಸೆ ನೀಡಿದರು. ಆದರೆ, ರೈತರು ಭರವಸೆಗಳನ್ನು ಕೇಳಿ ಸಾಕಾಗಿದೆ, ಈಗ ರೈತರ ಮೂಲ ಬೇಡಿಕೆಯನ್ನು ಈಡೇರಿಸಲು ನಿಜವಾದ ಕ್ರಮವಹಿಸಬೇಕೆಂದು ಗಟ್ಟಿಯಾಗಿ ಒತ್ತಾಯಿಸಿದರು.
ರಾಷ್ಟ್ರೀಯ ಅಧ್ಯಕ್ಷರಾದ ಎಂ ಎಂ ಕುಕನೂರ್, ನಾಗರಾಜ್ ಬಾವಿಕಟ್ಟಿ, ಜಿಲ್ಲಾ ಗೌರವ ಅಧ್ಯಕ್ಷ ದೇವಪ್ಪ ಹಳ್ಳಿಗುಡಿ, ಜಿಲ್ಲಾ ಉಪಾಧ್ಯಕ್ಷ ಹನ್ಮಂತಪ್ಪ ಬೇವೂರ್ ಸೇರಿದಂತೆ ನೂರಾರು ರೈತರು ಇದ್ದರು.