ಮಹಾತ್ಮ ಗಾಂಧಿಯವರ ಕನಸಾದ ಮದ್ಯಪಾನ ಮುಕ್ತ ಭಾರತದ ದಾರಿಗೆ ಹೆಜ್ಜೆ ಇಟ್ಟಿರುವ ಒಂದು ಸಣ್ಣ ಗ್ರಾಮ ಇಂದು ಕೊಪ್ಪಳ ಜಿಲ್ಲೆಯ ಹೆಮ್ಮೆಯಾಗಿದೆ. ತಾಲೂಕಿನ ಲೇಬಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ʼಕಾಮನೂರುʼ, ಕಳೆದ ನಾಲ್ಕು ದಶಕಗಳಿಂದ ಮದ್ಯಪಾನ, ಧೂಮಪಾನ ಹಾಗೂ ಗುಟ್ಕಾ ಮುಕ್ತ ಜೀವನ ಶೈಲಿಯನ್ನು ಅಳವಡಿಸಿಕೊಂಡು ಅಪರೂಪದ ಮಾದರಿ ಗ್ರಾಮವಾಗಿ ಬೆಳೆದಿದೆ. ದುಶ್ಚಟಗಳಿಂದ ದೂರವಿದ್ದು ಕೃಷಿ ಕಾಯಕದಲ್ಲಿ ತೊಡಗಿಕೊಂಡಿರುವ ಇಲ್ಲಿನ ಜನ, ತಮ್ಮ ಹಸಿರು ಕೃಷಿಭೂಮಿಗಳೊಂದಿಗೆ ಗ್ರಾಮವನ್ನು ಸಿರಿವಂತವಾಗಿ ಹೊಳೆಯುವಂತೆ ಮಾಡಿದ್ದಾರೆ.
ಗ್ರಾಮದ ನಿಯಮಗಳು ಕೇವಲ ಕಾಗದಗಳಿಗೆ ಸೀಮಿತವಾಗಿಲ್ಲದೆ, ಅವುಗಳನ್ನು ಕಟ್ಟುನಿಟ್ಟಾಗಿ ಮತ್ತು ಕರಾರುವಾಕ್ಕಾಗಿ ಪಾಲನೆ ಮಾಡಲಾಗುತ್ತಿದೆ. ಇದೇ ಕಾರಣದಿಂದ ಕಾಮನೂರು ಇಂದು ನಗರೀಕರಣದ ಭರಾಟೆಯ ಹಿಡಿತಕ್ಕೆ ಸಿಲುಕದೆ, ಅಪ್ಪಟ ಹಳ್ಳಿಯ ಸೊಬಗನ್ನು, ಹಳ್ಳಿಯ ಸಂಸ್ಕೃತಿಯ ಜೀವಂತತೆಯನ್ನು ಉಳಿಸಿಕೊಂಡಿದೆ. ಇಲ್ಲಿ ಕೇವಲ ಸಾರಾಯಿ ಮಾರಾಟ ಮಾತ್ರ ನಿಷೇಧವಾಗಿಲ್ಲ, ಗ್ರಾಮದಲ್ಲಿ ಒಂದೇ ಒಂದು ಚಹಾದಂಗಡಿಯೂ ಇಲ್ಲ ಎಂಬುದು ಗಮನಾರ್ಹ ಸಂಗತಿ. ಸುಮಾರು 2.5 ರಿಂದ 3 ಸಾವಿರ ಜನರಿರುವ ಈ ಹಳ್ಳಿಯಲ್ಲಿ ಕಿರಾಣಿ ಅಂಗಡಿಗಳು ಮತ್ತು ಸಣ್ಣ ವ್ಯಾಪಾರ ಮಳಿಗೆಗಳಿದ್ದರೂ ಕೂಡಾ ಅವುಗಳಲ್ಲಿ ಗುಟ್ಕಾ ಅಥವಾ ತಂಬಾಕು ಉತ್ಪನ್ನಗಳು ದೊರೆಯುವುದಿಲ್ಲ. ಮದ್ಯಪಾನ ಮಾಡಲು ಅವಕಾಶವಿಲ್ಲದ ಕಾರಣದಿಂದ ಗ್ರಾಮದಲ್ಲಿ ಇಂತಹ ಚಟುವಟಿಕೆಗಳು ಬೇರು ಬೀಳಲು ಅವಕಾಶವೇ ಸಿಕ್ಕಿಲ್ಲ.


ಒಂದು ಕಾಲದಲ್ಲಿ ಕಾಮನೂರಿನ ಹಬ್ಬಗಳೂ ಬೇರೆಯದೇ ರೀತಿಯದ್ದಾಗಿದ್ದವು. ಮೊಹರಂ, ದೇವಿ ಮತ್ತು ದೇವರ ಜಾತ್ರೆಯಂತ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸವಗಳ ಸಮಯದಲ್ಲಿ ಗ್ರಾಮದಲ್ಲಿ ಸಾರಾಯಿ ಮಾರಾಟ ಜೋರಾಗಿರುತ್ತಿತ್ತು. ಆ ಸಂದರ್ಭಗಳಲ್ಲಿ ಕೆಲವರು ಕುಡಿದು ಗದ್ದಲ ಮಾಡುವುದು, ಕೂಗಾಡುವುದು, ಚೀರಾಡುವುದು ಸಹಜವಾಗಿತ್ತು. ಇಂತಹ ಪರಿಸ್ಥಿತಿಯಿಂದ ಸಣ್ಣ ಸಣ್ಣ ಕಾರಣಗಳಿಗೆ ಜಗಳ–ಕಲಹಗಳು ಉಂಟಾಗಿ ಗ್ರಾಮದ ಶಾಂತಿ ಭಂಗವಾಗುತ್ತಿತ್ತು. ಈ ಅಶಾಂತಿಯ ಅಂತ್ಯ ಮಾಡಲು ಸುಮಾರು 30–35 ವರ್ಷಗಳ ಹಿಂದೆ ಗ್ರಾಮದ ಹಿರಿಯ ಮುಖಂಡ ವೆಂಕನಗೌಡ (ದಳವಾಯಿ) ಮಾಲಿಪಾಟೀಲ್ ಅವರು ಮುಂದಾಗಿ, ದೇವಸ್ಥಾನದಲ್ಲಿ ಗ್ರಾಮಸ್ಥರ ಸಭೆ ಕರೆದು ಒಂದು ಐತಿಹಾಸಿಕ ನಿರ್ಧಾರ ಕೈಗೊಂಡರು. “ಇನ್ನು ಮುಂದೆ ಯಾರೂ ಗ್ರಾಮದಲ್ಲಿ ಸಾರಾಯಿ ಮಾರಾಟ ಮಾಡಬಾರದು. ಈ ತೀರ್ಮಾನವನ್ನು ಉಲ್ಲಂಘಿಸಿದರೆ ಅವರಿಗೆ ದಂಡ ವಿಧಿಸಲಾಗುವುದು” ಎಂದು ಘೋಷಿಸಿ ಪಂಚಾಯತಿಯಿಂದ ಫರ್ಮಾನೂ ಹೊರಡಿಸಲಾಯಿತು.
ಆ ದಿನ ಗ್ರಾಮದಲ್ಲಿ ಜಾರಿಗೆ ತಂದ ಮದ್ಯ ಮಾರಾಟ ನಿಷೇಧದ ಮಹತ್ವದ ನಿರ್ಧಾರ ಕೇವಲ ಒಂದು ನಿಯಮವಾಗಿ ಉಳಿಯದೆ, ಅದು ಕಾಮನೂರಿನ ಸಂಸ್ಕೃತಿ ಮತ್ತು ಆತ್ಮಸಂಯಮದ ಭಾಗವಾಗಿಬಿಟ್ಟಿದೆ. ಹಿರಿಯ ಪೀಳಿಗೆ ಕೈಗೊಂಡ ಆ ತೀರ್ಮಾನವನ್ನು ಇಂದಿನ ಯುವ ಪೀಳಿಗೆಯೂ ಅದೇ ಶ್ರದ್ಧೆ ಮತ್ತು ಶಿಸ್ತಿನಿಂದ ಪಾಲಿಸಿಕೊಂಡು ಬರುತ್ತಿದ್ದು, ಯಾವುದೇ ಬದಲಾವಣೆಗೂ ಅವಕಾಶ ನೀಡಿಲ್ಲ. ಪೀಳಿಗೆಯಿಂದ ಪೀಳಿಗೆಗೆ ಸಾಗುತ್ತಿರುವ ಈ ನಂಬಿಕೆ ಮತ್ತು ಬದ್ಧತೆಯೇ ಕಾಮನೂರನ್ನು ಇಂದು ಮದ್ಯ–ಗುಟ್ಕಾ ಮುಕ್ತ ಮಾದರಿ ಗ್ರಾಮವಾಗಿ ರೂಪಿಸಿದೆ.
ಕಾಮನೂರಿನಲ್ಲಿ 4 ದೊಡ್ಡ ಪ್ರಮಾಣದ ಕಿರಾಣಿ ಅಂಗಡಿಗಳು ಹಾಗೂ 6 ಸಣ್ಣ ವ್ಯಾಪಾರದ ಅಂಗಡಿಗಳಿದ್ದರೂ ಅಲ್ಲಿ ಯಾವ ಅಂಗಡಿಯಲ್ಲೂ ಗುಟ್ಕಾ ಚೀಟಿ ತೂಗು ಹಾಕಿರುವುದು ಕಾಣಸಿಗುವುದಿಲ್ಲ. ಯಾರಾದರೂ ಹೊಸದಾಗಿ ಅಂಗಡಿ ಆರಂಭಿಸಿದರೂ ಹಿಂದಿನ ಹಿರಿಯ ಗ್ರಾಮ ಮುಖಂಡರು ವಿಧಿಸಿದ್ದ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಗ್ರಾಮದ ಜಾತ್ರೆ ಬಂದಾಗ ಮಾತ್ರ ನಾಲ್ಲೇ ದಿವಸ ಪರಸ್ಥಳದಿಂದ ಬರುವ ವ್ಯಾಪಾರಿಗಳಿಗೆ ಹೋಟೆಲ್ ಇಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಆ ಸಂದರ್ಭದಲ್ಲಿ ಮದ್ಯಪಾನ ಯಾರೂ ಮಾರಾಟ ಮಾಡುವಂತಿಲ್ಲ ಎಂಬ ನಿಬಂಧನೆಯೂ ಇದೆಯಂತೆ.


ಗ್ರಾಮದ ಹಿರಿಯರೆಲ್ಲ ಸೇರಿ ಮದ್ಯ ಮಾರಾಟ ನಿಷೇಧಿಸುವ ತೀರ್ಮಾನ ಕೈಗೊಳ್ಳುವಾಗ ‘ಈ ಗ್ರಾಮದಲ್ಲಿ ಹೋಟೆಲ್ ಕೂಡ ಬೇಡ, ಇದರಿಂದ ಮಕ್ಕಳು ಮನೆಯ ಅಡುಗೆ ಬಿಟ್ಟು ಹೊರಗಿನ ತಿಂಡಿ ತಿನಿಸಿನ ವ್ಯಾಮೋಹಕ್ಕೆ ಒಳಗಾಗುತ್ತಾರೆ. ಹೊರಗಿನ ಆಹಾರ ಸೇವಿಸುವುದರಿಂದ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಾರೆʼ ಎಂಬ ನಿಯಮವನ್ನೂ ಸೇರಿಸಿದ್ದಾರೆ. ಸಭೆಯಲ್ಲಿ ಮತ್ತೊಬ್ಬರು ‘ನಮ್ಮೂರಲ್ಲಿ ಸಾರಾಯಿ, ಹೋಟೆಲ್ ಬಂದ್ ಮಾಡುವುದರ ಜೊತೆಗೆ ಗುಟ್ಕಾ ಮಾರಾಟ ನಿಷೇಧವನ್ನೂ ಮಾಡಬೇಕು. ಇವುಗಳು ಗ್ರಾಮದ ಯುವಕರನ್ನ ಅಡ್ಡ ದಾರಿ ಹಿಡಿಯಲು ಕಾರಣವಾಗುತ್ತವೆ’ ಎಂದರಂತೆ. ಇದೇ ನಿಯಮಗಳನ್ನು ಈಗಲೂ ಪಾಲಿಸಿಕೊಂಡು ಬರಲಾಗುತ್ತಿದೆ. ಗ್ರಾಮದ ಒಬ್ಬರೂ ನಿಬಂಧನೆಗಳನ್ನು ಮೀರಿ ನಡೆದುಕೊಳ್ಳುವುದಿಲ್ಲ ಎನ್ನುವುದು ಇತರರಿಗೆ ಮಾದರಿಯಾಗಿದೆ.
ಅಲ್ಲಿಂದ ಇಲ್ಲಿಯವರೆಗೂ ಕಾಮನೂರ ಗ್ರಾಮದಲ್ಲಿ ಮದ್ಯಪಾನ/ಪಾನೀಯ, ಹೋಟೆಲ್, ಗುಟ್ಕಾ ಸೇರಿದಂತೆ ಇತರೆ ನಶೆಯಂತಹ ಯಾವುದೇ ವಸ್ತುಗಳನ್ನೂ ಮಾರಾಟ ಮಾಡುವುದಿಲ್ಲ. ಯಾರಾದರೂ ಕೊಪ್ಪಳ ಅಥವಾ ಅಕ್ಕಪಕ್ಕದ ಹಳ್ಳಿಗೆ ಹೋಗಿ ಮದ್ಯ ಸೇವಿಸಿ ಬಂದರೂ ನಶೆಯ ಉನ್ಮಾದಿಂದ ಕಿರುಚಾಡುವುದು, ಕೂಗಾಡುವುದು ಮಾಡುವಂತಿಲ್ಲ. ಒಂದು ವೇಳೆ ಹಾಗೇನಾದರೂ ಮಾಡಿದ್ದು ಕಂಡು ಬಂದರೆ ಅಂತವರಿಗೆ ದಂಡ ವಿಧಿಸುವುದರ ಮೂಲಕ ಶಿಕ್ಷೆಗೊಳಪಡಿಸಲಾಗುತ್ತದೆ. ಇದು ಕಟ್ಟಾಜ್ಞೆಯೂ ಹೌದು. ಯಾರೂ ಅಂಗಡಿಗಳಲ್ಲಿ ಗುಟ್ಕಾ ಮಾರಾಟ ಮಾಡಿದ್ದು ತಿಳಿದರೆ ಅವರ ವಿರುದ್ಧವೂ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಇಂತಹ ಆದರ್ಶ ಮತ್ತು ಶಿಸ್ತುಪಾಲನೆಯ ಗ್ರಾಮವಾಗಿರುವ ಕಾಮನೂರಿಗೆ ಕಳೆದ ವರ್ಷ ಗಾಂಧಿ ಜಯಂತಿಯಂದು ಸಂಸದ ರಾಜಶೇಖರ್ ಹಿಟ್ನಾಳರು ಪಾದಯಾತ್ರೆಯ ವೇಳೆ ಭೇಟಿ ನೀಡಿ, ಗ್ರಾಮವನ್ನು ಅಧಿಕೃತವಾಗಿ ದತ್ತು ಪಡೆದುಕೊಂಡರು. ಇದರ ಫಲವಾಗಿ ಕಾಮನೂರಿನ ಅಭಿವೃದ್ಧಿಗೆ ಹೊಸ ಬಾಗಿಲು ತೆರೆಯಲ್ಪಟ್ಟಿದೆ.
ಜಿಲ್ಲಾ ಪಂಚಾಯಿತಿಯು ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮದಲ್ಲಿ ಹಲವು ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೊಂಡಿದ್ದು, ರಸ್ತೆ, ನೀರು, ಒಳಚರಂಡಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ಹಂತ ಹಂತವಾಗಿ ಮುಂದುವರಿಯುತ್ತಿವೆ. ಇನ್ನೂ ಅನೇಕ ಯೋಜನೆಗಳು ಪ್ರಗತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಕಾಮನೂರು ಇನ್ನಷ್ಟು ಸಿರಿವಂತ ಮತ್ತು ಮಾದರಿ ಗ್ರಾಮವಾಗಿ ರೂಪುಗೊಳ್ಳಲಿದೆ ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸುತ್ತಾರೆ.


ಕಾಮನೂರಿನ ಜನರು ಕೇವಲ ದುಶ್ಚಟಗಳಿಂದ ದೂರವಿರುವುದಲ್ಲದೆ, ತಮ್ಮ ಮಕ್ಕಳ ಭವಿಷ್ಯ ನಿರ್ಮಾಣದಲ್ಲಿಯೂ ಅದೇ ಮಟ್ಟದ ಬದ್ಧತೆಯನ್ನು ತೋರಿದ್ದಾರೆ. ಶಿಕ್ಷಣದ ಮಹತ್ವವನ್ನು ಅರಿತು, ಗ್ರಾಮಸ್ಥರೇ 75 ವರ್ಷ ಹಳೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಹೊಸ ಚೈತನ್ಯ ತುಂಬಿದ್ದಾರೆ. ಶಿಕ್ಷಕರು ಮತ್ತು ದಾನಿಗಳ ಸಹಕಾರದೊಂದಿಗೆ ಅವರು ರೂ. 21 ಲಕ್ಷ ಹಣವನ್ನು ಸಂಗ್ರಹಿಸಿ ಶಾಲೆಯ ವಿಸ್ತರಣೆಗೆ ಅಗತ್ಯವಾದ 1 ಎಕರೆ 20 ಗುಂಟೆ ಜಮೀನು ಖರೀದಿಸಿದ್ದಾರೆ. ತಮ್ಮೂರಿನ ಮಕ್ಕಳ ಶೈಕ್ಷಣಿಕ ಏಳಿಗೆಗೆ ಗ್ರಾಮಸ್ಥರು ತೋರಿಸಿರುವ ಈ ಜಾಗೃತಿ ಮತ್ತು ತ್ಯಾಗಭಾವವೇ ಕಾಮನೂರಿನ ಮತ್ತೊಂದು ವಿಶಿಷ್ಟ ಗುರುತು. ಶಿಕ್ಷಣವೇ ಅಭಿವೃದ್ಧಿಯ ಬುನಾದಿ ಎಂಬ ನಂಬಿಕೆಯಿಂದ ಅವರು ಮುಂದಿನ ಪೀಳಿಗೆಯ ಬೆಳಕಿನ ದಾರಿಯನ್ನು ಕಟ್ಟುತ್ತಿದ್ದಾರೆ.
ಇದನ್ನೂ ಓದಿ: ಕೊಪ್ಪಳ | ದಶಕದ ಹಿಂದಿನ ಯಲ್ಲಾಲಿಂಗನ ಕೊಲೆ ಪ್ರಕರಣ: 9 ಆರೋಪಿಗಳ ಖುಲಾಸೆ
“ಸುಮಾರು 30 ವರ್ಷ ಆಗತ್ತೆ ಮಗಾ… ಇಲ್ಲಿವರೆಗೂ ನಮ್ಮೂರಲ್ಲಿ ಯಾರೂ ಸಾರಾಯಿ ಮಾರೋದಿಲ್ಲ. ಚಹಾದಂಗಡಿಯೂ ಇಲ್ಲ, ಗುಟ್ಕಾ–ಪಾನ್ ಪರಾಗ್ ಅಂತ ಹಾಳುಮೂಳು ವಸ್ತುಗಳನ್ನೂ ಯಾರೂ ಮಾರೋದಿಲ್ಲ. ನಾವು ಹೀಗೆ ಬದುಕೋದು ನಮ್ಮ ಮಕ್ಕಳ ಹಿತಕ್ಕಾಗಿ. ಹಳ್ಳಿಯ ಶಾಂತಿ, ಒಗ್ಗಟ್ಟು ಉಳಿಯಬೇಕೆಂದು ಎಲ್ಲರೂ ಒಂದಾಗಿ ಈ ನಿಯಮ ಪಾಲಿಸ್ತಾ ಬಂದಿದ್ದೀವಿ” ಎಂದು ಹೆಮ್ಮೆಯಿಂದ ಹೇಳಿದರು.