ಮಹಿಳೆಯರು ಹಾಗೂ ಮಕ್ಕಳ ಅಪೌಷ್ಠಿಕತೆ ನಿವಾರಣೆಗಾಗಿ ಸರ್ಕಾರದಿಂದ ಉಚಿತವಾಗಿ ಸರಬರಾಜಾಗುತ್ತಿರುವ ಗೋಧಿ ತುಂಬಿದ ಚೀಲಗಳು ಕೊಪ್ಪಳದ ಕುರುಬನಾಳ ಹಳ್ಳದಲ್ಲಿ ಪತ್ತೆಯಾಗಿದ್ದು, ಸಾಕಷ್ಟು ಪ್ರಮಾಣದ ಗೋಧಿ ಮಣ್ಣುಪಾಲಾಗಿರುವ ಘಟನೆ ನಡೆದಿದೆ.
ಚೀಲಗಳ ಮೇಲೆ ಕುಷ್ಟಗಿ ಎಂಎಸ್‌ಪಿಟಿಸಿ ಎಂದು ಸ್ಪಷ್ಟವಾಗಿ ನಮೂದಿಸಲಾಗಿದ್ದ ಗೋಧಿ ಚೀಲಗಳು ಹಳ್ಳದಲ್ಲಿ ಬಿದ್ದಿರುವುದನ್ನು ಫೋಟೋ, ವಿಡಿಯೋ ಮೂಲಕ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯಲ್ಲಮ್ಮ ಹಂಡಿಯವರನ್ನು ಈದಿನ.ಕಾಮ್ ಸಂಪರ್ಕಿಸಿದಾಗ, “ಕುರಬನಾಳ ಹಳ್ಳದಲ್ಲಿ ಎಸೆದ ಗೋಧಿ ಚೀಲಗಳು ನಮ್ಮ ಅಂಗನವಾಡಿ ಕೇಂದ್ರಕ್ಕೆ ಸೇರಿದವುಗಳಲ್ಲ. ಅದು ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಮಹಿಳಾ ಪೂರಕ ಪೌಷ್ಟಿಕ ಆಹಾರ ತಯಾರಿಕಾ ಕೇಂದ್ರಕ್ಕೆ (ಎಂಎಸ್‌ಪಿಟಿಸಿ) ಸೇರಿದ ಚೀಲಗಳು. ನಮ್ಮ ಅಂಗನವಾಡಿ ಕೇಂದ್ರಗಳಿಗೆ ಸಂಪೂರ್ಣವಾಗಿ ಗೋಧಿ ಹಿಟ್ಟು ಹಾಗೂ ನುಚ್ವಿನಿಂದ ತಯಾರಿಸಿದ ಪ್ಯಾಕೆಟ್‌ಗಳನನ್ನು ಪೂರೈಕೆ ಮಾಡಲಾಗುತ್ತಿದ್ದು, ಅವುಗಳನ್ನು ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವಿತರಿಸಲಾಗುತ್ತದೆ. ಅಲ್ಲದೆ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ನಾವು ವಿತರಿಸುವ ಗೋಧಿ ಬಿಳಿ ರವೆ ಮಿಶ್ರಿತ ಇರುತ್ತದೆ. ಹಳ್ಳದಲ್ಲಿ ಎಸೆಯಲಾದ ಗೋಧಿ ಕೆಂಪಾಗಿದೆ. ಹಾಗಾಗಿ ಅವು ಅಂಗನವಾಡಿ ಕೇಂದ್ರದ ಗೋಧಿ ಚೀಲಗಳಲ್ಲ. ಹಾಗೂ ನಾನು ಇದರ ಕುರಿತು ಮಾಹಿತಿಗಾಗಿ ಎಮ್‌ಎಸ್‌ಪಿಟಿಸಿಗೆ ನೋಟೀಸ್ ಜಾರಿ ಮಾಡಿದ್ದೇನೆ” ಎಂದರು.

“ಸುಮಾರು 5-6 ವರ್ಷಗಳಿಂದ ಬಳಕೆ ಮಾಡದ ಕಾರಣ ಹಾಳಾಗಿದ್ದ ಸ್ಥಿತಿಯಲ್ಲಿದ್ದ 20ಕ್ಕೂ ಹೆಚ್ವು ಗೋಧಿ ಮೂಟೆಗಳು ಹಳ್ಳದ ನೀರಿನಲ್ಲಿ ಹೋಗುತ್ತಿದ್ದುದ್ದು ಕಂಡುಬಂದಿತು. ಅಹಾರ ಇಲಾಖೆಯವರು ಭೇಟಿ ನೀಡುವಷ್ಟರಲ್ಲಿ ವ್ಯವಸ್ಥಿತ ರೀತಿಯಲ್ಲಿ ಹಳ್ಳದಲ್ಲಿ ಬಿದ್ದ ಗೋಧಿ ಚೀಲಗಳು ನಾಪತ್ತೆಯಾಗಿವೆ. ಖಾಲಿಯಾದ ಚೀಲಗಳಿಂದ ಸಾಕಷ್ಟು ಪ್ರಮಾಣದ ಗೋಧಿ ಮಾತ್ರ ಹಳ್ಳದಲ್ಲಿ ಹರಿದಿರುವುದು ಸ್ಥಳವನ್ನು ಪರಿಶೀಲಿಸಿದಾಗ ಕಂಡು ಬಂದಿದೆ. ಗೋಧಿ ಮೂಟೆಗಳನ್ನು ಹಳ್ಳದಲ್ಲಿ ಎಸೆದ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಆಹಾರ ಇಲಾಖೆ ಶಿರಸ್ತೆದಾರ ಚನ್ನಬಸಪ್ಪ, ಆಹಾರ ನಿರೀಕ್ಷಕ ರಮೇಶ ತಾಳಕೇರಿ ಗೋಧಿಯ ಮಾದರಿ ಸಂಗ್ರಹಿಸಿದರು. ಈ ವಿಷಯದ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ” ತಿಳಿಸಿದರು.
ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಹೆಚ್ಚಿದ್ದು ಅದರ ನಿವಾರಣೆಗೆ ಸರ್ಕಾರ ಶಿಶು ಅಭಿವೃದ್ಧಿ ಯೋಜನೆ ಮೂಲಕ ಅಂಗನವಾಡಿಗಳಲ್ಲಿನ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ಒದಗಿಸುತ್ತಿದೆ. ಸಿದ್ಧರೂಪದ ಈ ಪೌಷ್ಟಿಕ ಆಹಾರ ಉತ್ಪನ್ನಗಳನ್ನು ಎಂಎಸ್‌ಪಿಟಿಸಿ ಘಟಕದ ಮೂಲಕ ಅಂಗನವಾಡಿಗಳಿಗೆ ತಲುಪಿಸಲಾಗುತ್ತದೆ. ಹಿಂದೆ ಈ ಗೋಧಿ ಈ ಘಟಕಕ್ಕೆ ಬರುತ್ತಿತ್ತು. ಈಗ ಮೌಲ್ಯವರ್ಧನೆಗೊಂಡ ಗೋಧಿ ಮೂಲದ ಪೂರಕ ಆಹಾರ ಎಂಎಸ್‌ಪಿಟಿಸಿಗೆ ಬರುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕೊಪ್ಪಳ | ದಶಕದ ಹಿಂದಿನ ಯಲ್ಲಾಲಿಂಗನ ಕೊಲೆ ಪ್ರಕರಣ: 9 ಆರೋಪಿಗಳ ಖುಲಾಸೆ
ಸ್ವಾಭಿಮಾನಿ ಕರವೇ ಅಧ್ಯಕ್ಷ ಮಾತನಾಡಿ, “ಕೊಪ್ಪಳ ಜಿಲ್ಲೆಯ ಮಕ್ಕಳ ಅಪೌಷ್ಟಿಕತೆ ನಿವಾರಣೆಗಾಗಿ ಸರಕಾರ ಅಂಗನವಾಡಿಗಳಲ್ಲಿನ ಮಕ್ಕಳಿಗೆ ಪೂರಕವಾದ ಪೌಷ್ಟಿಕ ಆಹಾರ ಒದಗಿಸುತ್ತಿದೆ. ಮಕ್ಕಳ ಹಾಗೂ ಮಹಿಳೆಯರಿಗೆ ಪೂರೈಕೆ ಆಹಾರ ಇವತ್ತು ಹಳ್ಳಕ್ಕೆ ಎಸೆದಿದ್ದು ಮಹಾಪರಾಧ. ಎಂಎಸ್‌ಪಿಟಿಸಿ ಕೇಂದ್ರದಲ್ಲಿ ಗೋಧಿಯನ್ನು ಬಳಕೆ ಮಾಡದೆ ನಿರ್ಲಕ್ಷ್ಯದಿಂದ ಹಾಳು ಮಾಡಿ ನಂತರ ಚೀಲಗಳನ್ನು ಹಳ್ಳದಲ್ಲಿ ಎಸೆದಿದ್ದಾರೆ. ಸಂಬಂಧಿಸಿದ ಇಲಾಖಾಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.