ಸಂತಾನಹರಣ ಶಸ್ತ್ರಚಿಕಿತ್ಸೆ ವೇಳೆ ಬಾಣಂತಿ ತಾಯಿಯೊಬ್ಬರು ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕು ಹಿರೇವಕ್ಕಲಕುಂಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಮಲ್ಲಮ್ಮ ಕಲ್ಲೂರ್ (23) ಮೃತರು. ಸಂತಾನಹರಣ ಶಸ್ತ್ರಚಿಕಿತ್ಸೆ ವೇಳೆ ಈ ಘಟನೆ ನಡೆದಿದ್ದು, ಅನಸ್ತೇಶಿಯಾ ನೀಡದೆ ವೈದ್ಯರು ಚಿಕಿತ್ಸೆ ಮಾಡಿದ್ದಾರೆ. ಇದರಿಂದ ಮಹಿಳೆ ಸಾವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಸಂತಾನಹರಣ ಚಿಕಿತ್ಸೆಗೆಂದು ಹಿರೇವಕ್ಕಲಕುಂಟ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಲ್ಲಮ್ಮ ದಾಖಲಾಗಿದ್ದರು. ಚಿಕಿತ್ಸೆ ವೇಳೆ ಮಹಿಳೆ ಸ್ಥಿತಿ ಗಂಭೀರವಾದಾಗ ಆರೋಗ್ಯ ಕೇಂದ್ರದ ವೈದ್ಯರು ಕೊಪ್ಪಳ ಜಿಲ್ಲಾಸ್ಪತ್ರೆಗೆ ರವಾನಿಸುವ ಮಾರ್ಗಮಧ್ಯದಲ್ಲೇ ಮಲ್ಲಮ್ಮ ಸಾವನ್ನಪ್ಪಿದ್ದಾರೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಕುಟುಂಬಸ್ಥರು ಆಸ್ಪತ್ರೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿಎಚ್ಒ ಡಾ.ಲಿಂಗರಾಜ ಮತ್ತು ಶಸ್ತ್ರಚಿಕಿತ್ಸೆ ಮಾಡಿದ ವೈದ್ಯ ಡಾ.ಈಶ್ವರ ಸವದಿ ಇವರನ್ನು ಮೃತ ಮಲ್ಲಮ್ಮಳ ಕುಟುಂಬಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಕೊಪ್ಪಳ | ಗಣೇಶ ವಿಸರ್ಜನೆ ದಿನ ಡಿಜೆ ಬಳಕೆ; ಸಾರ್ವಜನಿಕರ ಆಕ್ರೋಶ