ಕೊಪ್ಪಳದ ಭಾಗ್ಯನಗರ ಕುವೆಂಪು ವೃತ್ತ, ಒಜನ್‌ಹಳ್ಳಿ ರಸ್ತೆಗಳು ಸತತವಾಗಿ ಸುರಿಯುತ್ತಿರುವ ಮಳೆಯಿಂದ ಹಾಗೂ ತುಂಬಿ ಹರಿಯುತ್ತಿರುವ ಚರಂಡಿಗಳ ಕಲುಷಿತ ನೀರಿನಿಂದ ಜಲಾವೃತ್ತಗೊಂಡು ಮಿನಿ ಕೆರೆಯಂತಾಗಿವೆ. ವಾಹನ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗುತ್ತಿದ್ದು, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಳೆಗಾಲ ಶುರುವಾದಾಗಲೆಲ್ಲ ಭಾಗ್ಯನಗರದ ನಿವಾಸಿಗಳು ಹಾಗೂ ಹೋರಾಟಗಾರರು ಪಟ್ಟಣ ಪಂಚಾಯತಿ ಸದಸ್ಯರಿಂದ ಹಿಡಿದು, ಸ್ಥಳೀಯ ಶಾಸಕ ಹಾಗೂ ಸಂಸದರ ಗಮನಕ್ಕೂ ತಂದಿದ್ದಾರೆ. ಹಲವು ಬಾರಿ ಮಾಧ್ಯಮಗಳು ಈ ಕುರಿತು ಸಾಲು ಸಾಲು ವರದಿ ಮಾಡಿವೆ. ಇಷ್ಟಾದರೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡಿಲ್ಲ. ಒಜನ್‌ಹಳ್ಳಿ ರಸ್ತೆಯಲ್ಲಿ ನಿಲ್ಲುವ ನೀರು ಇಲ್ಲೊಂದು ರಸ್ತೆ ಇದ್ದಿತೇ ಎನ್ನುವಷ್ಟು ಅನುಮಾನದ ಜೊತೆಗೆ ಕಸಿವಿಸಿ ಉಂಟು ಮಾಡುತ್ತಿದೆ ಎಂದು ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ರಸ್ತೆಗಳಿಗೆ ಗುಂಡಿಗಳ ಭಾಗ್ಯದ ಜೊತೆ ಮಳೆಗಾಲದಲ್ಲಿ ಉಚಿತವಾಗಿ ಚರಂಡಿ ನೀರು ಸಣ್ಣ ಹೊಳೆಯಂತೆ ಹರಿಯುವಂತ ಭಾಗ್ಯ ಕಲ್ಪಿಸಿಕೊಡಲಾಗಿದೆ. ಒಂದು ನಗರ, ಬಡಾವಣೆ ಅಥವಾ ಓಣಿಗೆ ಸುಸಜ್ಜಿತ ರಸ್ತೆ, ಚರಂಡಿ ಹಾಗೂ ಬಳಕೆಗೆ ನೀರು ಇತ್ಯಾದಿ ಮೂಲ ಸೌಕರ್ಯಗಳನ್ನು ಸಂಬಂಧಿಸಿದ ಇಲಾಖೆ, ಚುನಾಯಿತ ಪ್ರತಿನಿಧಿಗಳು, ಶಾಸಕರು, ಸಂಸದರು ಸ್ಥಳೀಯ ಆಡಳಿತಾಧಿಕಾರಿಗಳು ಕಲ್ಪಿಸಿಕೊಡಬೇಕು. ಆದರೆ, ಕೊಪ್ಪಳ ನಗರದ ಬಗಲಿಗೆ ಹೊಂದಿಕೊಂಡಿರುವ ಭಾಗ್ಯನಗರವನ್ನು ಕಾಪಾಡುವುದಕ್ಕೆ ಯಾವ ಭಾಗ್ಯವಂತ ಬರಲು ಸಾಧ್ಯ ಎಂದು ಪಟ್ಟಣದ ಜನ ಬಿಟ್ಟ ಕಣ್ಣು ಮುಚ್ವದೆ ಅರಳಿಸಿ ಕಾಯುತ್ತಿದ್ದಾರೆ.
ಬಿಟ್ಟೂ ಬಿಡದೆ ಎರಡೆರಡು ಗಂಟೆ ಸಮಯ ಸುರಿಯುತ್ತಿರುವ ಮಳೆಗೆ ಭಾಗ್ಯನಗರ ಒಜನ್‌ಹಳ್ಳಿ ರಸ್ತೆ 2-3 ಫೂಟ್ ನೀರಿನಿಂದ ಜಲಾವೃತ್ತಗೊಳ್ಳುತ್ತದೆ. ಮಕ್ಕಳು, ವೃದ್ದರು ಆಯತಪ್ಪಿ ಹರಿವ ನೀರಿನ ರಭಸಕ್ಕೆ ಕಾಲು ಜಾರಿ ಬಿದ್ದು ಎಲ್ಲಿಯಾದರೂ ಚರಂಡಿಗೋ, ತುಂಬಿದ ರಸ್ತೆ ಗುಂಡಿಗೋ ಬಿದ್ದರೆ ಹೊಣೆ ಯಾರು? ಹೆಚ್ಚು ಕಡಿಮೆ ಸಂಭವಿಸಿದರೆ ಅದರ ಜವಾಬ್ದಾರಿ ಹೊತ್ತುಕೊಳ್ಳುವವರು ಯಾರು? ಪಟ್ಟಣ ಪಂಚಾಯತ್ ನವರಾಗಲೀ, ಶಾಸಕರಾಗಲೀ ಇತ್ತ ಸುಳಿಯುತ್ತಿಲ್ಲ. ಭಾಗ್ಯನಗರ ನಗರಸಭೆಗೆ ಸೇರಿರುವುದಿಲ್ಲ. ಅದು ಸ್ವತಂತ್ರ ಪಟ್ಟಣ ಪಂಚಾಯತಿಯಾಗಿ ಅವಳಿ ನಗರವಾಗಿವೆ. ಹಾಗೆಂದ ಮಾತ್ರಕ್ಕೆ ಇದರ ಹೊಣೆಗಾರಿಕೆ ನಗರಸಭೆಗೆ ಇರುವುದಿಲ್ಲವೇ? ಪಟ್ಟಣ ಪಂಚಾಯತಿಯಾದರೂ ಇತ್ತ ಕಣ್ಣು ಹಾಯಿಸುವುದಿಲ್ಲವೆಂದರೆ ಸಾಮಾನ್ಯರು ಎಲ್ಲಿಗೆ ಹೋಗಬೇಕು? ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಪ್ರತಿ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆಯಾದರೆ ಇದೇ ಪರಿಸ್ಥಿತಿ, ಮಳೆಯ ರಭಸಕ್ಕೆ ಹಾಗೂ ವಾಹನಗಳ ದಟ್ಟಣೆಗೆ ರಸ್ತೆ ಗುಂಡಿಗಳು ಬಿದ್ದು ದ್ವಿಚಕ್ರ ವಾಹನ ಸಂಚಾರಕ್ಕೂ ಅಡೆತಡೆ ಆಗುತ್ತದೆ. ರಸ್ತೆಯ ಎರಡೂ ಬದಿಯಲ್ಲೂ ಬಹುಮುಖ್ಯವಾಗಿ ಚರಂಡಿ ವ್ಯವಸ್ಥೆ ಇಲ್ಲ. ನೀರು ಮನೆಯೊಳಗೆ ನುಗ್ಗುವುದಕ್ಕೆ ಇದೇ ಕಾರಣ.
ಸಾಮಾಜಿಕ ಹೋರಾಟಗಾರ ಹಾಗೂ ಹಿರಿಯ ಪತ್ರಕರ್ತ ಬಸವರಾಜ್ ಶೀಲವಂತರ ಮಾತನಾಡಿ, “ಭಾಗ್ಯನಗರ ಪಟ್ಟಣ ಪಂಚಾಯತ್ ಆಡಳಿತಕ್ಕೊಳಪಟ್ಟಿದೆ. ಹಲವಾರು ಸಲ ರಸ್ತೆ ದುರಾವಸ್ಥೆಯ ಕುರಿತು ಪಟ್ಟಣ ಪಂಚಾಯತ್ ಅಧಿಕಾರಿಗಳಿಗೆ ತಿಳಿಸಲಾಗಿದೆ. ಸಾಕಷ್ಟು ಬಾರಿ ಮಾಧ್ಯಮದಲ್ಲೂ ಸುದ್ಧಿ ಮಾಡಲಾಗಿದೆ. ಆದರೂ, ಪಟ್ಟಣ ಪಂಚಾಯತ್ ಅಧಿಕಾರಿಗಳ ಹಾಗೂ ಶಾಸಕ, ಸಂಸದರ ಕಣ್ಣಿಗೆ ಭಾಗ್ಯನಗರ ದೌರ್ಭಾಗ್ಯ ಸ್ಥಿತಿ ಕಾಣಿಸುತ್ತಿಲ್ಲ. ಪಟ್ಟಣ ಪಂಚಾಯತಿಗೆ ಇಂದೂ ಕರೆ ಮಾಡಿ ಹೇಳಿರುವೆ. ಏನ್ ಮಾಡ್ತಾರೋ ಕಾದು ನೋಡಬೇಕು” ಎಂದು ಬೇಸರ ವ್ಯಕ್ತಪಡಿಸಿದರು.


ಒಜನ್‌ಹಳ್ಳಿ ರಸ್ತೆಯ ನಿವಾಸಿ ರವಿ ಮಾತನಾಡಿ, ” ಮಳೆ ಆದಾಗಲೆಲ್ಲ ಭಾಗ್ಯನಗರದ್ದು ಇದೆ ಪರಿಸ್ಥಿತಿ ನೋಡಿ. ಶಾಸಕ ಹಾಗೂ ಸಂಸದರು ರಾಜ್ಯದ ಮೂಲೆ ಮೂಲೆಯಲ್ಲಿರುವ ನದಿಗಳು ತುಂಬಿದರೆ ಅಲ್ಲಿಗೆ ಹೋಗಿ ಬಾಗೀನ ಅರ್ಪಿಸಿ ಬರುತ್ತಾರೆ. ಇಲ್ಲಿ ರಸ್ತೆಗಳೇ ಕೆರೆಯಂತಾಗಿವೆ. ಮನೆಗಳಿಗೆ ನೀರು ನುಗ್ಗಿದ್ದರಿಂದ ಭಾಗ್ಯನಗರ ಜನರ ಸ್ಥಿತಿ ನೋಡಿ ಇಲ್ಲಿಯೇ ಬಾಗೀನನ ಅರ್ಪಿಸಲೆಂದು ನಮ್ಮ ಬಡಾವಣೆಯ ಜನರೆಲ್ಲ ಸೇರಿ ವಿನಂತಿಸಿಕೊಳ್ಳುತ್ತೇವೆ. ಜತೆಗೆ ಆಹ್ವಾನವನ್ನೂ ನೀಡುತ್ತೇವೆ. ಒಮ್ಮೆಯಾದರೂ ಇಲ್ಲಿಗೆ ಬರಲೆಂದು ಕೇಳಿಕೊಳ್ಳುತ್ತೇವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕೊಪ್ಪಳ | ಯುಕೆಇಎಂ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಎನ್‌ಒಸಿ ಕೊಡಲು ತಕರಾರು: ಗ್ರಾ.ಪಂ ಎದುರು ಗ್ರಾಮಸ್ಥರ ಪ್ರತಿಭಟನೆ
ಇನ್ಮೇಲಾದರೂ ಭಾಗ್ಯ ನಗರಕ್ಕೆ ಸುಸಜ್ಜಿತ ರಸ್ತೆ, ಚರಂಡಿ ಕಲ್ಪಿಸಲು ಶಾಸಕರು, ಸಂಸದರು, ಪಟ್ಟಣ ಪಂಚಾಯತಿಯ ಅಧ್ಯಕ್ಷ, ಸದಸ್ಯರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಮನಸ್ಸು ಮಾಡುತ್ತಾರೆಯೇ ಎಂಬುದನ್ನು ಕಾಲವೇ ನಿರ್ಧರಿಸಬೇಕಿದೆ.

ಕೇಶವ ಕಟ್ಟಿಮನಿ
ಕೃಷಿ, ಪುಸ್ತಕ ಓದುಗ,
ಫೀಲ್ಡ್ ಕೋರ್ಡಿನೇಟರ್,
ಕೊಪ್ಪಳ ಮತ್ತು ಬಳ್ಳಾರಿ, ಮಾಸ್ ಮೀಡಿಯಾ ಫೌಂಡೇಶನ್