ಕೊಪ್ಪಳ ನಗರದ ಗಂಜ್ ವೃತ್ತದ ಹತ್ತಿರವಿರುವ ಪವಾರ್ ಹೋಟೆಲ್ ಎದುರಿಗೆ ರಸ್ತೆ ದಾಟುವಾಗ ಚಾಪೆ ಮಾರಲು ಹೋಗುತ್ತಿದ್ದ ಮಹಿಳೆಯ ತಲೆಯ ಮೇಲೆ ಗವಿಮಠಕ್ಕೆ ಸಂಬಂಧಿಸಿದ ಟ್ರ್ಯಾಕ್ಟರ್‌ವೊಂದು ಹರಿದ ಪರಿಣಾಮ, ಆಕೆ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಮಂಗಳವಾರ ನಡೆದಿದೆ.
ಉದ್ದನೆಯ ಚಾಪೆಗಳ ಸುರುಳಿಯನ್ನು ಹೊತ್ತು ರಸ್ತೆ ದಾಟುವಾಗ ಚಾಪೆಯ ಒಂದು ಬದಿ ಚಲಿಸುತ್ತಿದ್ದ ಟ್ರ್ಯಾಕ್ಟರ್‌ಗೆ ಬಡಿದಿದ್ದು, ಮಹಿಳೆ ಆಯತಪ್ಪಿ ಟ್ರ್ಯಾಕ್ಟರ್‌ನ ಹಿಂಬದಿ ಚಕ್ರಕ್ಕೆ ಸಿಲುಕಿದ್ದಾರೆ. ಅಪಘಾತದ ತೀವ್ರತೆಗೆ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕೊಪ್ಪಳದ ಸಿದ್ಧೇಶ್ವರ ನಗರದ ಗಂಗಮ್ಮ ದೊಡ್ಡಮನಿ ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಅವರಿಗೆ ಮೂವರು ಮಕ್ಕಳಿದ್ದು, ಒಂದು ಹೆಣ್ಣು, ಒಂದು ಗಂಡು ಮಗು ವಿಶೇಷ ಚೇತನ ಮಕ್ಕಳಾಗಿದ್ದು, ಕಿರಿಯ ಮಗನಿಗೂ ಮಾತು ಬರುವುದಿಲ್ಲ. ಘಟನೆಯ ಮಾಹಿತಿ ತಿಳಿದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ಕೊಪ್ಪಳ | ಅಪ್ರಾಪ್ತ ಬಾಲಕಿಯ ಅಪಹರಣ, ಅತ್ಯಾಚಾರ ಪ್ರಕರಣ; ಅಪರಾಧಿಗೆ 20 ವರ್ಷ ಜೈಲು
ಘಟನಾ ಸ್ಥಳಕ್ಕೆ ನಗರ ಪೊಲೀಸರು ಭೇಟಿ ಕೊಟ್ಟು ಟ್ರ್ಯಾಕ್ಟರ್ ವಶಕ್ಕೆ ಪಡೆದಿದ್ದು, ಅಪಘಾತದ ಬಳಿಕ ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಈ ಘಟನೆಯ ಬಗ್ಗೆ ಮಾಹಿತಿ ಅರಿತಿರುವ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರು, ಬುಧವಾರ ಮೃತ ಮಹಿಳೆಯ ಕುಟುಂಬ ಸದಸ್ಯರನ್ನು ಭೇಟಿಯಾಗಲಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.