ಮೈಸೂರು ನಗರದ ಚಾಮುಂಡಿ ಬೆಟ್ಟದಲ್ಲಿ ದಸರಾ ಹಬ್ಬ ಉದ್ಘಾಟನೆಯ ಬಗ್ಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡುವಾಗ, ʼಮೈಸೂರು ದಸರಾದಲ್ಲಿ ಸನಾತನ ಧರ್ಮದವರು ಮಾತ್ರ ಚಾಮುಂಡಿ ದೇವಿಗೆ ಹೂ ಮುಡಿಸಬೇಕು. ಅದರ ಹೊರತು ಒಬ್ಬ ಸಾಮಾನ್ಯ ದಲಿತ ಹೆಣ್ಣುಮಕ್ಕಳಿಗೆ ಅವಕಾಶ ಇಲ್ಲʼವೆಂದು ಹೇಳುವ ಮೂಲಕ ಇಡೀ ರಾಜ್ಯದ ದಲಿತ ಮಹಿಳೆಯರಿಗೆ ಅವಮಾನ ಮಾಡಿರುವುದರಿಂದ ಕೂಡಲೇ ಅವರನ್ನು ಬಂಧಿಸುವಂತೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಮಹಿಳಾ ವಿಭಾಗ ರಾಜ್ಯಾಧ್ಯಕ್ಷೆ ಸಬಿಹಾ ಪಟೇಲ್ ಅಗ್ರಹಿಸಿದ್ದಾರೆ.
“ಸಾರ್ವಜನಿಕವಾಗಿ ದಲಿತ ಹೆಣ್ಣುಮಕ್ಕಳ ಬಗ್ಗೆ ಕೀಳುಮಟ್ಟದಲ್ಲಿ ಹೇಳಿಕೆ ನೀಡುವ ಮೂಲಕ ಅವಮಾನ ಮಾಡಿದ್ದಾರೆ. ಇಂತಹ ಕೊಳಕು ಮನಸ್ಥಿತಿ ಮತ್ತು ಕೋಮು ಸಂಘರ್ಷದ, ಪ್ರಚೋದನಾಕಾರಿ ಹೇಳಿಕೆ ನೀಡಿರುವ ಇವರನ್ನು ವಿಡಿಯೊ ಆಧಾರದ ಮೇಲೆ ಎಸ್ಸಿ ದೌರ್ಜನ್ಯ ಕಾಯ್ದೆಯ ಅಡಿಯಲ್ಲಿ ಬಂಧಿಸಿ ಜೈಲಿಗೆ ಕಳುಹಿಸಬೇಕು” ಎಂದರು.
“ಶಾಸಕ ಬಸನಗೌಡ ಯತ್ನಾಳ್ ದಲಿತರು ಹಾಗೂ ಅಲ್ಪಸಂಖ್ಯಾತರ ಮಹಿಳೆಯರಿಗೆ ಅವಮಾನ ಮಾಡುವ ರೀತಿಯಲ್ಲಿ ನಿರಂತರವಾಗಿ ಹೇಳಿಕೆ ಕೊಡುತ್ತಿದ್ದಾರೆ. ಯತ್ನಾಳ್ ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿದ್ದು, ದಲಿತರು ಹಾಗೂ ಅಲ್ಪಸಂಖ್ಯಾತ ಸಮಾಜಕ್ಕೆ ತುಂಬಾ ನೋವುಂಟು ಮಾಡಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಪಿಪಿಪಿ ಮಾದರಿ ಕೈಬಿಟ್ಟು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮಾಡಬೇಕು: ಅರವಿಂದ ಕುಲಕರ್ಣಿ
“ಸಮಾಜದಲ್ಲಿ ಇಂಥ ಕೋಮುಪ್ರಚೋದನೆ ನೀಡಿ ಅಶಾಂತಿಗೆ ಕಾರಣವಾಗುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ಶಾಸಕತ್ವ ಸ್ಥಾನದಿಂದ ವಜಾಗೊಳಿಸಬೇಕು. ಒಬ್ಬ ಶಾಸಕರಾಗಿ ಜನರ ಸಮಸ್ಯೆಗಳ ಬಗ್ಗೆ ಕೆಲಸ ಮಾಡುವ ಬದಲು ಹಿಂದೂ ಮುಸ್ಲಿಮರ ಮಧ್ಯೆ ವಿಷಬೀಜ ಬಿತ್ತುವುದನ್ನೇ ಕಸುಬು ಮಾಡಿಕೊಂಡಿದ್ದಾರೆ. ಸರ್ಕಾರ ಇಂಥ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ವಹಿಸಬೇಕು” ಎಂದು ಆಗ್ರಹಿಸಿದರು.