ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಹಿರೇಗೊಣ್ಣಾಗರ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಹಾಸನ ಜಿಲ್ಲೆಯ ಸಕಲೇಶಪುರದ ಪುಷ್ಪಾವತಿ (23) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದು, ಹಿರೇಗೊಣ್ಣಾಗರ ಗ್ರಾಮದ ಮರಿಯಪ್ಪ ಎಂಬುವವರ ಜೊತೆ ಮದುವೆಯಾಗಿದ್ದರು. ಮೃತಳಿಗೆ 3 ತಿಂಗಳ ಮಗುವಿದೆ ಎಂದು ತಿಳಿದು ಬಂದಿದೆ.
ಆರಂಭದಲ್ಲಿ ಸಂಸಾರ ಉತ್ತಮವಾಗಿ ಸಾಗಿತ್ತಾದರೂ ನಂತರ ಮರಿಯಪ್ಪ ತನ್ನ ಪತ್ನಿ ಪುಷ್ಪಾ ಅವರಿಗೆ ಪದೇ ಪದೇ ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿದ್ದ. ಸೆ.8ರಂದು ಮನೆಯವರಿಗೆ ಕರೆ ಮಾಡಿದ್ದ ಪುಷ್ಪಾವತಿ ಗಂಡನ ಹಿಂಸೆ ತಾಳಲಾಗುತ್ತಿಲ್ಲ. ಬಂದು ಕರೆದುಕೊಂಡು ಹೋಗಿ ಇಲ್ಲದಿದ್ದರೆ ನನ್ನ ಜೀವ ಉಳಿಸುವುದಿಲ್ಲ ಎಂದು ಗೋಗರೆದಿದ್ದರು ಎಂದು ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಮೃತಳ ತಂದೆ ದಾಖಲಿಸಿದ ದೂರಿನಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ : ಬೀದರ್ | ವರದಕ್ಷಿಣೆ ಕಿರುಕುಳ ಆರೋಪ : ಗಂಡ, ಮಾವ, ಅತ್ತೆ ಸೇರಿ 6 ಮಂದಿ ವಿರುದ್ಧ ಎಫ್‌ಐಆರ್
ಆದರೆ ಸೆ.11 ರಂದು ಕರೆ ಮಾಡಿದ ಮೃತಳ ಮಾವ ನಿಂಗಪ್ಪ, ನಿಮ್ಮ ಮಗಳು ಸೀತಾಫಲ ಗಿಡಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮಾಹಿತಿ ನೀಡಿದ್ದರು. ಆದರೆ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ, ಗಂಡ ಮರಿಯಪ್ಪನೇ ಕೊಲೆ ಮಾಡಿ ನಂತರ ಗಿಡದಲ್ಲಿ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಇರಿಸಿದ್ದಾರೆ ಎಂದು ಎನ್ನಲಾಗಿದೆ.