ಪ್ರೀತಿಸಿ ಮದುವೆಯಾಗಿದ್ದ ಕಾರಣಕ್ಕೆ ಯುವಕನ ಕುಟುಂಬದ ಮೇಲೆ ಯುವತಿಯ ಕಡೆಯವರು ಮಾರಕಾಸ್ತ್ರಗಳಿಂದ ಭೀಕರ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿರುವ ಆಘಾತಕಾರಿ ಘಟನೆ ತಾಲೂಕಿನ ಕುಂಬಳಾವತಿ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಒಟ್ಟು 11 ಜನರ ವಿರುದ್ಧ ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಾಯಗೊಂಡವರು ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಂಬಳಾವತಿ ಗ್ರಾಮದ ನೀಲಪ್ಪ ಎಂಬ ಯುವಕ ಅದೇ ಗ್ರಾಮದ ಶಿವಲೀಲಾ ಎಂಬ ಯುವತಿಯನ್ನು ಪ್ರೀತಿಸಿ ಸುಮಾರು ಒಂದು ತಿಂಗಳ ಹಿಂದೆ ವಿವಾಹವಾಗಿದ್ದರು. ಆದರೆ, ಈ ಮದುವೆ ಯುವತಿಯ ಕುಟುಂಬಸ್ಥರಿಗೆ ಇಷ್ಟವಿರಲಿಲ್ಲ. ಈ ದ್ವೇಷದ ಕಾರಣದಿಂದಾಗಿ ನವದಂಪತಿಯು ತಮ್ಮ ಊರನ್ನು ಬಿಟ್ಟು ಗಂಗಾವತಿ ಸಮೀಪದ ಸಿಂಗನಾಳ ಗ್ರಾಮದಲ್ಲಿ ಪ್ರತ್ಯೇಕವಾಗಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.
ಅಕ್ಟೋಬರ್ 20ರ ರಾತ್ರಿ ಶಾಲಾ ದಾಖಲಾತಿಗಳನ್ನು ತರಲೆಂದು ನೀಲಪ್ಪ ಮತ್ತು ಆತನ ಪತ್ನಿ ಕುಂಬಳಾವತಿಯ ತಮ್ಮ ಸ್ವಗ್ರಾಮಕ್ಕೆ ಬಂದಿದ್ದರು. ರಾತ್ರಿ 9:30ರ ವೇಳೆಗೆ ಮನೆಯ ಮುಂಭಾಗ ನಿಂತಿದ್ದಾಗ, ಯುವತಿಯ ಕುಟುಂಬದವರಾದ ಮಂಜುನಾಥ ಮುತ್ತಪ್ಪ ಕುಂಟೋಜಿ, ಮುತ್ತಪ್ಪ ಮುದಕಪ್ಪ ಕುಂಟೋಜಿ, ಅನಿಲ ಮುತ್ತಪ್ಪ ಕುಂಟೋಜಿ ಸೇರಿದಂತೆ ಒಟ್ಟು 11 ಜನರ ಗುಂಪು ಕೈಯಲ್ಲಿ ಕೊಡಲಿ, ರಾಡ್, ಕಟ್ಟಿಗೆ ಹಾಗೂ ಕಲ್ಲುಗಳನ್ನು ಹಿಡಿದುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಕೊಲೆ ಮಾಡುವ ಉದ್ದೇಶದಿಂದ ಧಾವಿಸಿ ಬಂದಿದೆ.
ಇದನ್ನು ಕಂಡು ಬೆದರಿದ ನವದಂಪತಿ ಮನೆಯೊಳಗೆ ಓಡಿಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಈ ವೇಳೆ ಮನೆಯ ಮುಂದಿದ್ದ ನೀಲಪ್ಪ ಅವರ ಅಣ್ಣ ಶರಣಪ್ಪ, ತಾಯಿ ಮಂಗಳಮ್ಮ, ಮಾವ ನೀಲಪ್ಪ ಜಗ್ಗಲ್ ಹಾಗೂ ತಂದೆ ಮಲ್ಲಪ್ಪ ಅವರ ಮೇಲೆ ಆರೋಪಿಗಳು ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಮನೆಯ ಬಾಗಿಲನ್ನು ಕಲ್ಲಿನಿಂದ ಒಡೆದು ಒಳಗಿದ್ದ ನೀಲಪ್ಪ ಅವರಿಗೂ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದಾರೆ. ಮಾರಣಾಂತಿಕ ಹಲ್ಲೆಯಿಂದಾಗಿ ಶರಣಪ್ಪ ಎಂಬುವವರಿಗೆ ತಲೆ ಹಾಗೂ ಮೈಕೈಗೆ ಭಾರಿ ರಕ್ತಗಾಯಗಳಾಗಿದ್ದು, ಉಳಿದವರಿಗೂ ಗಂಭೀರ ಒಳಪೆಟ್ಟುಗಳಾಗಿವೆ.
ಈ ಸಂದರ್ಭದಲ್ಲಿ ಸ್ಥಳೀಯರಾದ ಶರಣಪ್ಪ ಹನುಮಸಾಗರ ಹಾಗೂ ಯಲಗುರದಪ್ಪ ವಡಗೇರಿ ಮಧ್ಯಪ್ರವೇಶಿಸಿ ಜಗಳ ಬಿಡಿಸಿದಾಗ ಆರೋಪಿಗಳು ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಖಾಸಗಿ ವಾಹನದ ಮೂಲಕ ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಕುರಿತು ಗಾಯಾಳು ನೀಲಪ್ಪ ನೀಡಿದ ದೂರಿನ ಮೇರೆಗೆ ಹನುಮಸಾಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





