ಕೊಪ್ಪಳ ನಗರಸಭೆ ಆವರಣದ ಬಲ್ಡೋಟ ಕಂಪೆನಿಯ ಕಾರ್ಖಾನೆ ಮಾಲಿನ್ಯದಿಂದ 22 ಹಳ್ಳಿಗಳ ಜನರ ಜೀವ, ಆರೋಗ್ಯ ರಕ್ಷಿಸಿ ಎಂದು ಆಗ್ರಹಿಸಿ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿಯಾಗಿ ನಡೆಸುತ್ತಿರುವ ಧರಣಿ 261 ದಿನಗಳನ್ನು ಪೂರ್ಣಗೊಳಿಸಲಾಗಿದೆ.
ವಿಜಯನಗರ ಜಿಲ್ಲೆಯ ರೈತ ಮುಖಂಡ ಬಿ.ಗೋಣಿಬಸಪ್ಪ ಧರಣಿಗೆ ಬೆಂಬಲಿಸಿ ಮಾತನಾಡಿ, “ಈ ವರ್ಷ ಮುಂಗಾರು ಸಂಪೂರ್ಣ ಕೈಕೊಟ್ಟು ಭೀಕರ ಬರಗಾಲ ಆವರಿಸಿ ಕುಡಿಯುವ ನೀರಿಗೆ ತತ್ವಾರವಾಗಿದೆ. ಇಲ್ಲಿನ ಬಸಾಪುರ ಕೆರೆಯನ್ನು ಸರ್ಕಾರ ಬಲ್ಡೋಟ ಕಂಪನಿಗೆ ಮಾರಿಕೊಂಡಿದೆ. ಗ್ರಾಮಗಳ ಹಿರಿಯರು ಕೆರೆ-ಕಟ್ಟೆ ಕಟ್ಟಿ ಹೋಗಿದ್ದು ಇಂತಹ ಕಾರ್ಖಾನೆಗಳಿಗೆ ಮಾರಕೊಳ್ಳಲಿಗಾಗಿಯೇ? ಇಂತಹ ಸರ್ಕಾರಗಳನ್ನು ಏನೆಂದು ಕರೆಯಬೇಕು” ಎಂದು ಪ್ರಶ್ನಿಸಿದರು.
“ಜನ ಸಮುದಾಯದ ಆಸ್ತಿ ಕೆರೆ ಮಾರಿಕೊಳ್ಳುವ ಹಕ್ಕು ಇವರಿಗೆ ಹೇಗೆ ಬಂತು. ಇದನ್ನು ಗಮನಿಸಿ ಹೈಕೋರ್ಟ್ ಆದೇಶ ಮಾಡಿ ಸುತ್ತಲಿನ ಗ್ರಾಮದ ಜಾನುವಾರು ನೀರು ಕುಡಿಯಲು ಕೆರೆ ಮುಕ್ತವಾಗಿರಬೇಕೆಂದು ಹೇಳಿದೆ. ಆದರೂ ಇಲ್ಲಿನ ಜಿಲ್ಲಾಧಿಕಾರಿಗಳು ಕೆರೆಗೆ ಹಾಕಿದ ಕಾಂಪೌಂಡ್ ತೆರವುಗೊಳಿಸುತ್ತಿಲ್ಲ. ಈಗ ರೈತರು ಏನು ಮಾಡಬೇಕು. ಆ ಕೆರೆ ಉಳಿಸಲು ಸುತ್ತಲಿನ ಗ್ರಾಮಗಳಲ್ಲಿ ಸಾವಿರಾರು ಹಸುಗಳು, ಕುರಿ, ಮೇಕೆ ಸಾಕುವ ರೈತರು ಹೋರಾಡಿ ದಣಿದಿದ್ದಾರೆ. ಈಗ ಬಸಾಪುರ ಕೆರೆ ನೀರಿನ ಮೇಲಿನ ಹಕ್ಕು ಸಾಧಿಸಿ ಇದೇ ಜುಲೈ 21ರಂದು ಬಲ್ಡೋಟ ಗೇಟ್ ಎದುರು ದೊಡ್ಡ ಶಕ್ತಿಯಾಗಿ ಹೋರಾಡೋಣ” ಎಂದು ಕರೆ ನೀಡಿದರು.
ಇದನ್ನು ಓದಿದ್ದೀರಾ? ವಿಜಯಪುರ | ರಾಮಮಂದಿರ ದೇಣಿಗೆ ಹಣದ ಸಂಪೂರ್ಣ ಲೆಕ್ಕ ಬಹಿರಂಗಪಡಿಸಿ: ಕಾಂಗ್ರೆಸ್ ವಕ್ತಾರ ಎಸ್ ಎಂ ಪಾಟೀಲ
ಧರಣಿಯಲ್ಲಿ ಪಿ ಬಸನಗೌಡ ಹಗರಿಬೊಮ್ಮನಹಳ್ಳಿ, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಭೀಮಸೇನ ಕಲಿಕೇರಿ, ಮೂಕಪ್ಪ ಮೇಸ್ತ್ರಿ ಬಸಾಪುರ, ದೇವರಾಜ ಹೊಸಮನಿ, ಡಾ. ಬಸವರಾಜ ಪೂಜಾರ, ಫಕೀರಪ್ಪ ಕುದರಿಮೋತಿ, ಬಿ ಶಿವಪ್ಪ, ಎಸ್ ಮಹದೇವಪ್ಪ ಮಾವಿನಮಡು, ಬಸವರಾಜ ಹೂಗಾರ ಹಿರೇಸಿಂಧೋಗಿ, ಮಂಜುನಾಥ ಕವಲೂರು, ಶೇಖಪ್ಪ ಮೈನಹಳ್ಳಿ, ಯಮನೂರಪ್ಪ ಹಾಲಳ್ಳಿ ಬಸಾಪುರ, ಗವಿಸಿದ್ದಪ್ಪ ಮಾಲಿ ಪಾಟೀಲ್, ಶಿವಪ್ಪ ಜಲ್ಲಿ ಮುಂತಾದವರು ಪಾಲ್ಗೊಂಡರು.





