ರೈತನ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ದವಸ ಧಾನ್ಯ, ಬಿತ್ತನೆ ಬೀಜ, ರಸಗೊಬ್ಬರ ದಿನಸಿ ಪದಾರ್ಥಗಳು ನಷ್ಟವಾಗಿರುವ ಘಟನೆ ಸಂಭವಿಸಿದೆ.
ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಕ್ಯಾಮೇನಹಳ್ಳಿ ಗ್ರಾಮದ ವಾಸಿಯಾದ ರೈತ ನಾಗರಾಜು, ಗುಡಿಸಲುಗೆ ಆಕಸ್ಮಿಕವಾಗಿ ಬೆಂಕಿ ತಗುಲಿ, ಬಿತ್ತನೆ ಬೀಜ, ರಸಗೊಬ್ಬರ, ದಿನಬಳಕೆ ವಸ್ತುಗಳು ಸೇರಿದಂತೆ ಸುಮಾರು ₹1 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

ಬೆಂಕಿ ಕಾಣಿಸಿಕೊಂಡಾಗ ಸಾರ್ವಜನಿಕರು ನೀರು ಹರಿಸಿ ನಂದಿಸಲು ಯತ್ನಿಸಿದರೂ ಪ್ರಯೋಜನವಾಗಿಲ್ಲ. ದಿನಸಿ ಸಾಮಗ್ರಿಗಳು, ಬಟ್ಟೆ, ಮನೆ ಬಳಕೆಯ ವಸ್ತುಗಳು ಸಹ ಸಂಪೂರ್ಣ ಸುಟ್ಟಿದ್ದರಿಂದ ರೈತ ನಾಗರಾಜು ತೀವ್ರ ಅಳಲು ವ್ಯಕ್ತಪಡಿಸಿದರು.

ಪ್ರಾಣಹಾನಿ ತಪ್ಪಿದ್ದರೂ ಆರ್ಥಿಕ ಹಾನಿ ಮಾತ್ರ ಭಾರಿಯಾಗಿದೆ ಎಂದು ಸ್ಥಳೀಯರು, ರೈತನಿಗೆ ತಕ್ಷಣ ಪರಿಹಾರ ನೀಡುವಂತೆ ಸರ್ಕಾರ ಹಾಗೂ ಕೃಷಿ ಇಲಾಖೆಗಳಿಗೆ ಮನವಿ ಮಾಡಿದರು.
ಬೆಂಕಿಗೆ ಆಹುತಿಯಾಗಿ ಅವರು ವಾಸಿಸುತ್ತಿದ್ದ ಗುಡಿಸಿಲಿನಲ್ಲಿ ಶೇಂಗಾ, ಜೋಳ, ರಾಗಿ, ಅಳಸಂಡೆ ಸೇರಿದಂತೆ ಹಲವು ಬೆಳೆಗಳ ಬೀಜಗಳು ಹಾಗೂ ಕೃಷಿಗೆ ಉಪಯೋಗವಾಗುವ ಪರಿಕರಗಳು ಇಡಲಾಗಿದ್ದು ,ಆಕಸ್ಮಿಕ ಬೆಂಕಿಯಿಂದ ಎಲ್ಲವೂ ಸುಟ್ಟು ಹೋಗಿರುವ ಈ ದುರ್ಘಟನೆಯಿಂದ ರೈತ ಜೀವನದಲ್ಲಿ ಕಂಗಾಲಾಗಿದ್ದಾರೆ.
ರೈತನ ಕಷ್ಟಕ್ಕೆ ಸ್ಪಂದಿಸಿ ಧೈರ್ಯ ತುಂಬಿದ ಗ್ರಾಮಪಂಚಾಯಿತಿ
ಕ್ಯಾಮೇನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಸ್ಥಳಕ್ಕೆ ಭೇಟಿ ನೀಡಿದ ಪಿಡಿಒ ರವಿ ಜಾಮಗೊಂಡ, ಪಂಚಾಯಿತಿ ಅಧ್ಯಕ್ಷೆ ಸೌಮ್ಯ ಜಗನ್ನಾಥ್, ಸದಸ್ಯೆ ಸಿದ್ದಗಂಗಮ್ಮ ಮತ್ತು ರವೀಶ್ ಕುಮಾರ್ ಅವರು ರೈತ ನಾಗರಾಜು ಅವರಿಗೆ ತಾತ್ಕಾಲಿಕ ಪರಿಹಾರವಾಗಿ ಚೆಕ್ ವಿತರಿಸಿ ಧೈರ್ಯ ತುಂಬಿದರು.