ಉಡುಪಿ ಜಿಲ್ಲೆಯ ಅಮಾಸೆಬೈಲ್ ನಲ್ಲಿ ಧರ್ಮ ಸಂರಕ್ಷಣೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೀಡಲು ಬಂದ ಮಹಿಳೆಯನ್ನು ಬಲತ್ಕಾರ ಮಾಡಲು ಮುಂದಾಗಿದ್ದು ಒಂದು ಕಡೆ ಆದರೆ, ಇನ್ನೊಂದು ಕಡೆಯಲ್ಲಿ ಪುತ್ತೂರಿನಲ್ಲಿ ಮದುವೆಯಾಗುವ ಭರವಸೆ ನೀಡಿ 20 ವರ್ಷದ ಯುವತಿಯನ್ನು ಪುಸಲಾಯಿಸಿ ಗರ್ಭಿಣಿ ಮಾಡಿ ಸಂತ್ರಸ್ತ ಯುವತಿ ಮಗುವಿಗೂ ಜನ್ಮ ನೀಡಿದ ಆರೋಪ ಬಿಜೆಪಿ ಮುಖಂಡನ ಮಗ ಕೃಷ್ಣ ರಾವ್ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿತ್ತು. ಇದೀಗ DNA ಪರೀಕ್ಷೆಯ ಪ್ರಕಾರ ಆರೋಪಿಯೇ ಮಗುವಿನ ತಂದೆ ಎಂದು ತಿಳಿದುಬಂದಿದೆ.
“ಧರ್ಮ ಸಂರಕ್ಷಣೆ ಹೆಸರಿನಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ಶೋಷಣೆಯ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಆದರೆ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಈ ಬಗ್ಗೆ ಮೌನವಾಗಿವೆ. ಪುತ್ತೂರಿನ ಈ ಘಟನೆಗೆ ಸಂಬಂಧಿಸಿ ಸರ್ಕಾರ ಹಾಗೂ ಸಂಘ ಪರಿವಾರ ತಕ್ಷಣ ಕ್ರಮ ಕೈಗೊಳ್ಳಬೇಕು,” ಎಂದು ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಆಗ್ರಹಿಸಿದ್ದರು.
ಈ ಕುರಿತಂತೆ ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯಿಸಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ “ಬಿಜೆಪಿಯವರು ಧರ್ಮ, ಸಂಸ್ಕೃತಿ, ಸಂರಕ್ಷಣೆ ಎಂಬ ಹೆಸರಿನಲ್ಲಿ ಮಾತನಾಡುತ್ತಾ ತಮ್ಮದೇ ಕಾರ್ಯಕರ್ತರಿಂದ ಆಗುತ್ತಿರುವ ಅಮಾನುಷ ಘಟನೆಗಳ ವಿರುದ್ಧ ಮೌನವಾಗಿರುವುದು ವಿಷಾದನೀಯ. ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಮತ್ತು ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು,” ಎಂದು ಆಗ್ರಹಿಸಿದ್ದಾರೆ.
ಹಿಂದುಗಳು ಇನ್ನು ಮುಂದೆ ಹೆಚ್ಚು ಹೆಚ್ಚು ಮಕ್ಕಳಿಗೆ ಜನ್ಮ ನೀಡಬೇಕು ಎಂದು ಹೇಳಿರುವ ಚಕ್ರವರ್ತಿ ಸೂಲಿಬೆಲೆ ಕೂಡ ನಾಪತ್ತೆಯಾಗಿದ್ದಾರೆ. ಚಕ್ರವರ್ತಿ ಸೂಲಿಬೆಲೆ ಅವರು ಮದುವೆಯಾಗಿ ಹೆಚ್ಚು ಮಕ್ಕಳು ಮಾಡಿ ಎಂದು ಹೇಳಿದ್ದೋ? ಅಥವಾ ಅತ್ಯಾಚಾರ ಮಾಡಿ ಹೆಚ್ಚು ಮಗು ಮಾಡಿ ಅಂತ ಹೇಳಿದ್ದೋ? ಎಂದು ಪ್ರಶ್ನಿಸಿದ್ದಾರೆ.
ಹಿಂದುಳಿದ ವರ್ಗದ ಯುವತಿಗೆ ನ್ಯಾಯ ಸಿಗುವವರೆಗೆ ಪ್ರತಿಭಾ ಕುಳಾಯಿ ಅವರ ಹೋರಾಟಕ್ಕೆ ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಂಪೂರ್ಣ ಬೆಂಬಲವಿದೆ. ಯುವತಿಯಿಗೂ ಮಗುವಿಗೂ ನ್ಯಾಯ ಸಿಗಬೇಕೆಂಬುದು ನಮ್ಮ ಒಟ್ಟಿನ ಬೇಡಿಕೆ,” ಎಂದು ತಿಳಿಸಿದ್ದಾರೆ.