ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಹಾಗೂ ಜೆಸ್ಕಾಂ ಇಲಾಖೆಗಳ ಅವೈಜ್ಞಾನಿಕ ಹಾಗೂ ಅಸುರಕ್ಷತಾ ನಿಲುವಿನ ವಿರುದ್ಧ ಜನವಾದಿ ಮಹಿಳಾ ಸಂಘ ತೀವ್ರವಾಗಿ ಖಂಡಿಸಿದ್ದು, ಇಲಾಖೆಗಳು ಅವೈಜ್ಞಾನಿಕ ಹಾಗೂ ಅಸುರಕ್ಷತಾ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಸಂಬಂಧ ಸೆ ಪಟ್ಟಣದ ಗಾಂಧಿ ವೃತ್ತದಲ್ಲಿ ಸಂಘದ ಮುಖಂಡರು ಹಾಗೂ ಪತ್ರಕರ್ತೆ ಟಿ. ಭಾಗ್ಯ, ಜೆಸ್ಕಾಂ ಇಲಾಖೆ ಹಾಗೂ ಪಟ್ಟಣ ಪಂಚಾಯ್ತಿ ಇಲಾಖೆಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಪಟ್ಟಣದ ಸಾರ್ವಜನಿಕರು, ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಮಧ್ಯಭಾಗದಲ್ಲಿರುವ ಸ್ಟ್ರೀಟ್‌ಲೈಟ್ ಕಂಬದ ಬುಡದಲ್ಲಿ ಅಳವಡಿಸಿರುವ ಕಬ್ಬಿಣದ ಕಂಟ್ರೋಲ್ ಬೋರ್ಡ್, ಹಲವು ತಿಂಗಳುಗಳಿಂದ ಬಲಿಗಾಗಿ ಬಾಯ್ತೆರೆದು ಕುಳಿತ ಕಿಂಕರನಂತೆ ಕಾಣುತ್ತಿದೆ. ಈ ರಸ್ತೆಯಲ್ಲಿ ನಿತ್ಯ ನೂರಾರು ಮಕ್ಕಳು ಹಾಗೂ ಸಾವಿರಾರು ಸಾರ್ವಜನಿಕರು ಸಂಚರಿಸುತ್ತಿದ್ದು, ಅವರ ಜೀವಕ್ಕೆ ಯಾವುದೇ ಗ್ಯಾರಂಟಿ ಇಲ್ಲದೆ ಭಯದಿಂದ ಓಡಾಡುವಂತಾಗಿದೆ.
ಪಟ್ಟಣದಲ್ಲಿ ಹಲವರು ಕಡೆ ಇದೇ ರೀಯಿಯ ಸಾಕ್ಷಿಗಳು ಸಿಗುತ್ತವೆ. ಅವೆಲ್ಲವೂ ಒಂದಕ್ಕೊಂದು ವಿಭಿನ್ನವಾಗಿದ್ದು ಸಾರ್ವಜನಿಕರ ಪಾಲಿಗೆ ಅಪಾಯದ ಗಂಟೆ ಬಾರಿಸುತ್ತಿವೆ. ಆದರೆ ಜೆಸ್ಕಾಂ ಇಲಾಖೆ ಹಾಗೂ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಸಾರ್ವಜನಿಕರ ಅಳಲನ್ನು ಕೇಳದೆ ಜಾಣ ಕಿವುಡರಾಗಿದ್ದಾರೆ.



“ಸಾರ್ವಜನಿಕರ ಒತ್ತಡದ ಹಿನ್ನೆಲೆ ಅಧಿಕಾರಿಗಳು ಭೇಟಿ ನೀಡಿದ ತಕ್ಷಣವೇ ಕಂಟ್ರೋಲ್ ಬಾಕ್ಸ್ ಗೆ ಬಾಗಿಲು ಹಾಕಿ ಭದ್ರ ಮಾಡಲಾಗಿದ್ದು, ಇದು ಸ್ವಾಗತಾರ್ಹವಾಗಿದೆಯಾದರೂ ಖಾಯಂ ಸುರಕ್ಷತೆ ಕ್ರಮಗಳನ್ನು ಜರುಗಿಸಬೇಕಿದೆ. ಸುರಕ್ಷತೆ ಹಾಗೂ ವೈಜ್ಞಾನಿಕತೆಗೆ ಆದ್ಯತೆ ನೀಡಬೇಕಿದೆ. ಮಳೆ ಬಂದಲ್ಲಿ ಅಥವಾ ಬೋರ್ಡಗಳಿರುವ ಬಾಕ್ಸ್ ಬಾಯ್ತೆರೆದರೆ, ಅವು ಸಾರ್ವಜನಿಕರ ಪಾಲಿಗೆ ಯಮ ಕಿಂಕರವಾಗಲಿವೆ. ಹಾಗಾಗಿ ಕಂಟ್ರೋಲ್ ಬಾಕ್ಸ್‌ಗಳನ್ನು ಮಕ್ಕಳ ಕೈಗೆಟುಕದಂತೆ ಎತ್ತರಕ್ಕೆ ನಿರ್ಮಿಸಿ ಶೀಘ್ರವೇ ಸೂಕ್ತ ಸುರಕ್ಷತಾ ಕ್ರಮ ಜರುಗಿಸಬೇಕಿದೆ. ನಿರ್ಲಕ್ಷ್ಯ ತೋರಿದಲ್ಲಿ ಇಲಾಖೆಗಳ ಜನ ವಿರೋಧಿ ನಿಲುವಿನ ವಿರುದ್ಧ ಹಂತ ಹಂತವಾಗಿ ಕಾನೂನು ರೀತ್ಯಾ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಸಾರ್ವಜನಿಕರು ಎಚ್ಚರಿಸಿದರು.
ಇದನ್ನೂ ಓದಿ: ಕೂಡ್ಲಿಗಿ | ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಪ್ರತ್ಯೇಕ ಕೌಂಟರ್ ತೆರೆಯಲು ವಂದೇ ಮಾತರಂ ವೇದಿಕೆ ಆಗ್ರಹ
ಈ ಸಂದರ್ಭದಲ್ಲಿ ಜನವಾದಿ ಮಹಿಳಾ ಸಂಘದ ಪದಾಧಿಕಾರಿಗಳು, ವಂದೆ ಮಾತರಂ ಜಾಗೃತಿ ವೇದಿಕೆಯ ಜೂಗುಲರ ಸೊಲ್ಲೇಶ, ಎಎಸ್ಐ ಬಸವರಾಜ ಶೆಟ್ರು ಸೇರಿದಂತೆ ಸಾರ್ವಜನಿಕರು, CITU ಸಂಘಟನೆಯ ಹೋರಾಟಗಾರರು ಉಪಸ್ಥಿತರಿದ್ದರು.