ಸಂತೆ ಪ್ರಾಚೀನ ಕಾಲದಿಂದಲೂ ನಡೆದು ಬಂದಿದ್ದು, ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣ ಪ್ರತಿ ಶುಕ್ರವಾರ ಸಂತೆ ಜರುಗುವ ವ್ಯವಹಾರ ಕೇಂದ್ರವಾಗಿದೆ. ಆದರೆ ಪ್ರಸ್ತುತ ದಿನಗಳಲ್ಲಿ ಸಂತೆ ಎಂಬುದು ಬಲು ದೂರದ ಮಾತಾಗಿದೆ.
ಕೂಡ್ಲಿಗಿ ಪಟ್ಟಣದ ಸಂತೆ ನಾಗರಿಕರ ಪಾಲಿಗೆ, ಗ್ರಾಮೀಣ ಜನತೆಯ ಪಾಲಿಗೆ ಸಂತೆ ದೂರವಾಗಿದೆ. ಮಾತ್ರವಲ್ಲ ಪಟ್ಟಣದ ಹೊರವಲಯದಲ್ಲಿ ಸಂತೆ ನಡೆಯುವುದರಿಂದ ವೃದ್ಧರು ಸೇರಿದಂತೆ ಇತರೆ ಗ್ರಾಹಕರು ಸಂತೆಗೆ ಬರಲು ಬಲು ದೂರವಾಗುತ್ತದೆ. ಅಲ್ಲದೆ ಬಲು ದುಬಾರಿಯಾಗಿದೆ ಎಂಬುದು ಪಟ್ಟಣ ಹಾಗೂ ಗ್ರಾಮೀಣ ಜನರ ಅಭಿಪ್ರಾಯವಾಗಿದೆ.
“ಪಟ್ಟಣದ ಹೃದಯ ಭಾಗದಲ್ಲಿ ಜರುಗುತ್ತಿದ್ದ ಸಂತೆಯನ್ನು ಇದೀಗ ಪಟ್ಟಣದ ಯಾವುದೋ ಮೂಲೆಯಲ್ಲಿ, ಅದೂ ಕೂಡ ಆರ್ಥಿಕವಾಗಿ ಸಬಲರಾಗಿದ್ದು, ಪ್ರಬಲರು ಹೆಚ್ಚಿರುವ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಅದು ಅವೈಜ್ಞಾನಿಕ ನಿಲುವಾಗಿದ್ದು, ಬಡವರಿಗೆ, ರೈತಾಪಿ ಜನರಿಗೆ, ಗ್ರಾಮೀಣ ಜನರಿಗೆ ಅನಾನುಕೂಲವಾಗಿದೆ” ಎಂಬ ದೂರಿದೆ.
ಆರ್ಥಿಕ ಸಬಲರೇ ಹೆಚ್ಚಿರುವ ನಗರಾಭಿವೃದ್ಧಿ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದ್ದು, ಬಡ ಮಹಿಳೆಯರು, ವೃದ್ಧರು ಸಂತೆಗೆ ತೆರಳಲು ಖಾಸಗಿ ವಾಹನದ ಬಾಡಿಗೆಗೆ ಸಾಕಷ್ಟು ಹಣ ವ್ಯಯ ಮಾಡುವಂತಾಗಿದೆ. ಸಂತೆಗೆ ತೆರಳಬೇಕೆಂದರೆ ಡಾ. ಬಿ ಆರ್ ಅಂಬೇಡ್ಕರ್ ನಗರ ಹಾಗೂ ರಾಜೀವ್ ಗಾಂಧಿ ನಗರವಾಸಿಗಳು, ಖಾಸಗಿ ವಾಹನಗಳ ಬಾಡಿಗೆಗೆಂದು ತುಂಬಾ ಹಣ ವ್ಯಯ ಮಾಡುವ ದುಃಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದ ಯಾವುದೋ ಒಂದು ಮೂಲೆಯಲ್ಲಿ ಸಂತೆ ಇದೆ. ಪಟ್ಟಣದ ಹೊರಭಾಗದ ತುಂಬಾ ದೂರದಲ್ಲಿದೆ. ಬಹುತೇಕ ಗ್ರಾಮೀಣ ಪ್ರದೇಶದವರಿಗೆ ಹೇಳತೀರದಂತಹ ಕಷ್ಟನಷ್ಟ ಅನುಭವಿಸುವಂತಾಗಿದೆ. ಎಸ್‌ಸಿ/ಎಸ್‌ಟಿ ಜನಾಂಗದವರು, ರೈತರು ಕಾರ್ಮಿಕರು, ಬಡವರು, ದೀನ ದಲಿತರು ಹೆಚ್ಚಿರುವ ಅಂಬೇಡ್ಕರ್ ನಗರ ರಾಜೀವ್ ಗಾಂಧಿ ನಗರವಾಸಿಗಳಿಗೆ ಸಂತೆ ದೂರ ದೂರ ಮಾತ್ರವಲ್ಲ ಬಲು ದುಬಾರಿಯಾಗಿದೆ ಎನ್ನಲಾಗುತ್ತಿದೆ.
“ಕಡಿಮೆ ಬೆಲೆಗೆ ಸಂತೆ ಮಾಡುವ ನಿರೀಕ್ಷೆಯನ್ನು ಕೈಬಿಡುವಂತಾಗಿದೆ. ಸಂತೆ ಪಟ್ಟಣದಿಂದ ದೂರದಲ್ಲಿ ನಡೆಯುವುದಲ್ಲದೆ, ಸಂತೆಯಲ್ಲಿ ಸಾಮಗ್ರಿಗಳನ್ನು ಕೊಳ್ಳುವುದೂ ಕೂಡ ದುಬಾರಿಗಾಗಿದೆ. ಬಸ್ ನಿಲ್ದಾಣ ಹಾಗೂ ಪ್ರಮುಖ ವೃತ್ತಗಳಿಂದ ಬಹು ದೂರವಿರುವ ಸಂತೆ, ಮಾರುಕಟ್ಟೆಗೆ ತೆರಳಲು ವಾಹನಗಳನ್ನು ಅವಲಂಬಿಸಲೇಬೇಕಾಗುತ್ತದೆ. ತಾವು ಹಳ್ಳಿಯಿಂದ ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಬಂದರೂ ಕೂಡ ಸಂತೆಗೆ ತೆರಳಲು ಖಾಸಗಿ ವಾಹನಕ್ಕೆ ತೆರಳುವಂತಾಗಿದೆ. ಅದಕ್ಕೂ ದುಪ್ಪಟ್ಟು ಬಾಡಿಗೆ ನೀಡಲೇಬೇಕಾಗಿದೆ” ಎಂದು ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.

“ಈಗಿನ ಸಂತೆ ಪಟ್ಟಣದ ಹೊರ ವಲಯದಲ್ಲಿರುವುದರಿಂದ ಖಾಸಗಿ ವಾಹನಗಳ ಬಾಡಿಗೆಗೆ ಹೆಚ್ಚು ಹಣ ವ್ಯಯ ಮಾಡುವಂತಾಗಿದೆ. ಹಾಗಾಗಿ ತರಕಾರಿ ಖರೀದಿಗೆ ಖರ್ಚಾಗುವ ಒಟ್ಟು ಹಣದಷ್ಟು ಸಂಚರಿಸುವ ವಾಹನದ ಬಾಡಿಗೆಗೆ ತೆರಬೇಕಾಗಿದೆ. ಹಾಗಾಗಿ ಮೊದಲಿನಂತೆಯೇ ಪಟ್ಟಣದ ಹೃದಯ ಭಾಗದಲ್ಲಿಯೇ ಸಂತೆ ನಡೆಸಿದರೆ ಪಟ್ಟಣದವರಿಗೆ, ಗ್ರಾಮೀಣ ಜನರಿಗೆ ಸೇರಿದಂತೆ ಸಕಲರಿಗೂ ಕ್ಷೇಮವಾಗುತ್ತದೆ” ಎನ್ನುತ್ತಾರೆ.
“ಹಳೇ ಸಂತೆ ಮೈದಾನದಲ್ಲಿ ಸಂತೆ ಮಾಡಿ ಸರ್ವಜನರ ಹಿತಕಾಪಾಡಿ -ಮಹಿಳೆಯರು, ಹಿರಿಯ ನಾಗರಿಕರು ಸೇರಿದಂತೆ ಆಂಖ್ಯಾತ ಗ್ರಾಮೀಣ ಜನರ ಪಾಲಿಗೆ ಸಂತೆ ವ್ಯಾಪಾರ ಕೇಂದ್ರವಾಗಿದೆ. ನೂರಾರು ವ್ಯಾಪರಿಗಳ ಪಾಲಿನ ಕಾಮಧೇನಾಗಿದೆ. ಅಂತಹ ಸಂತೆ ಪಟ್ಟಣದಾಚೆಗೆ ಸ್ಥಳಾಂತರಗೊಂಡ ಪರಿಣಾಮ, ಸರ್ವರಿಗೂ ಹತ್ತಾರು ಬಗೆಯ ಅನಾನುಕೂಲಗಳನ್ನು ಹುಟ್ಟುಹಾಕಿದೆ” ಎಂದು ಹಲವು ಹೋರಾಟಗಾರರು ತಿಳಿಸಿದ್ದಾರೆ.
“ಪಟ್ಥಣದ ಹಳೇ ಸಂತೆ ಮಾರುಕಟ್ಟೆ ಮತ್ತು ಪಾಳುಬಿದ್ದಿರುವ ಹಳೇ ಸಾರ್ವಜನಿಕ ಆಸ್ಪತ್ರೆ ಕಟ್ಟಡಗಳನ್ನು ತೆರವುಗೊಳಿಸಿ, ಸಮತಟ್ಟಾಗಿಸಿ ಸಂತೆ ವ್ಯಾಪರಕ್ಕೆ ವೇದಿಕೆ ಮಾಡಿಕೊಡಬಹುದು. ಪಾಳುಬಿದ್ದಿರುವ ಹಳೇ ಆಸ್ಪತ್ರೆಯ ಸಿಬ್ಬಂದಿಯವರ ವಸತಿ ಕಟ್ಟಡಗಳನ್ನು ತೆರವುಗೊಳಿಸಿ, ಸಮತಟ್ಟಾಗಿಸಿದ ಸ್ಥಳದಲ್ಲಿ ಸುಸಜ್ಜಿತ ಸಂತೆ ಮೈದಾನ ನಿರ್ಮಿಸಬೇಕಿದೆ. ಇದರಿಂದಾಗಿ ಡಾ. ಬಿ ಆರ್ ಅಂಬೇಡ್ಕರ್ ನಗರವಾಸಿಗಳಿಗೆ, ರಾಜೀವ್ ಗಾಂಧಿ ನಗರ ವಾಸಿಗಳಿಗೆ, ಶ್ರೀಪೇಟೆಬಸವೇಶ್ವರ ನಗರ ಹಾಗೂ ರಾಮನಗರ ವಾಸಿಗಳಿಗೆ ತುಂಬಾ ಅನುಕೂಲವಾಗಲಿದೆ” ಎಂದು ಸ್ಥಳೀಯ ನಾಗರಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಂಗಳೂರು | ದೋಷಯುಕ್ತ ಸ್ಕೂಟರ್ ಮಾರಾಟ; ಓಲಾ ಕಂಪೆನಿಗೆ ಭಾರೀ ದಂಡ ವಿಧಿಸಿದ ಗ್ರಾಹಕರ ನ್ಯಾಯಾಲಯ
“ಪಟ್ಟಣ ಪಂಚಾಯಿತಿಯ ಎಲ್ಲ ವಾರ್ಡ್‌ಗಳ ವಾಸಿಗಳಿಗೆ, ಪಟ್ಟಣದ ಸುತ್ತಮುತ್ತಲ ಎಲ್ಲ ಗ್ರಾಮೀಣ ಜನರಿಗೆ ತುಂಬಾ ಅನುಕೂಲವಾಗಲಿದೆ. ಪ್ರಭಾವಿಗಳು ಜನಪ್ರತಿನಿಧಿಗಳು ಮನಸ್ಸು ಮಾಡಬೇಕಿದೆ. ಕಾರಣ ಪಟ್ಟಣದ ಹಾಗೂ ತಾಲೂಕಿನ ಪ್ರಭಾವಿ ಜನಪ್ರತಿನಿಧಿಗಳು ಶೀಘ್ರವೇ ಉತ್ತಮ ಹಾಗೂ ಜನಪರ ನಿಲುವು ತಾಳಬೇಕಿದೆ. ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳು, ಸಂತೆಯನ್ನು ಹಳೇ ಸಂತೆ ಮೈದಾನದಲ್ಲಿಯೇ ಮುಂದುವರೆಸುವಂತೆ ಯೋಜಿಸಬೇಕಿದೆ. ಅಗತ್ಯ ಮೂಲಭೂತ ಸೌಕರ್ಯಗಳೊಂದಿಗೆ ಸುಸಜ್ಜಿತ ಸಂತೆ ಮೈದಾನ ನಿರ್ಮಾಣ ಮಾಡಿ, ಸಕಲರಿಗೆ ಕ್ಷೇಮವಾಗುವ ಸಂತೆ ಮಾರುಕಟ್ಟೆ ನಿರ್ಮಾಣಕ್ಕೆ ಅಗತ್ಯ ಕ್ರಮಗಳನ್ನು ಶೀಘ್ರವಾಗಿ ಕೈಗೊಳ್ಳಬೇಕು” ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ನಿಲುವಿಗೆ ಪಟ್ಟಣದ ಹಿರಿಯ ನಾಗರಿಕರು, ಪಟ್ಟಣದ ಸುತ್ತಮುತ್ತಲ ಗ್ರಾಮಗಳ ಜನರು, ಕಾರ್ಮಿಕರ ಸಂಘಟನೆಗಳು, ರೈತರ ಸಂಘಟನೆಗಳು, ಮಹಿಳಾ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಹಾಗೂ ಹಿರಿಯ ನಾಗರಿಕರು ಈ ಮೂಲಕ ಒತ್ತಾಯಿಸಿದ್ದಾರೆ.
ವರದಿ : ವಿ ಜಿ ವೃಷಭೇಂದ್ರ ಕೂಡ್ಲಿಗಿ