ಇತ್ತೀಚೆಗೆ ಕಾಟಾಚಾರದಂತಾಗಿರುವ ಹಬ್ಬಗಳು ಸಪ್ಪೆ ಅನಿಸತೊಡಗಿವೆ. ಆ ದಿನಗಳ ಸಂಭ್ರಮ ಮೆಲುಕು ಹಾಕಿ ‘ಹಿಂದೊಂದಿತ್ತು ಕಾಲ, ವೈಭವದ ಮೇಳ’ ಅಂತ ಗುನುಗುವಂತಾಗಿವೆ. ಈಗೇನಿದ್ದರೂ ಎಲ್ಲವೂ ತಿರುಳಿಲ್ಲದ ಸಿಪ್ಪೆ-ಸಪ್ಪೆ. ತೋರಿಕೆ ಬಹಳಷ್ಟಿದೆ; ನೈಜತೆಯೇ ಮಾಯವಾಗಿದೆ.
ಒಣ ನಗೆ, ಕೃತಕ ಭಾವ, ಕೃತಿಮ ಕೃತಿಗಳು ಯಾಕೊ ಭಣ ಭಣ ಅನಿಸುವಂತೆ ಮಾಡಿವೆ. ಜಗತ್ತು ರುಚಿಯಿಲ್ಲದ ಸಿಹಿಯಂತೆ ಭಾಸವಾಗುತ್ತಿದೆ. ಎಲ್ಲೋ ತಾಳ ತಪ್ಪಿದ ಹಾಗನಿಸುತ್ತಿದೆ. ಮೇಳ ದಿಕ್ಕೆಡಿದಂತಾಗಿದೆ. ಈಗೆ ಹೀಗಾದರೆ ಮುಂದೆ? ನಾವುಗಳು ಕಂಡ ಚೆಂದದ ಬದುಕು ನಮ್ಮ ಮುಂದಿನ ಪೀಳಿಗೆಗೆ ವರ್ಗಾವಣೆ ಮಾಡಬೇಕಾದ ಸಂಸ್ಕೃತಿವಾಹಕರು. ಹೀಗಾಗಿ ಎಡವಿದ ಬದುಕನ್ನು ಕೊಡವಿ ಏಳುವಂತೆ ಮಾಡಲೇಬೇಕಿದೆ.
ನಮ್ಮ ಒಳ ಸೇರಿ ‘ಆ ಜಗತ್ತು’ ದ್ವಂಸ ಮಾಡಿ ನಿತ್ರಾಣ ಮಾಡಿರುವ ಕೆಲವು ‘ಬೇಡದವು’ಗಳನ್ನು ಈಚೆ ಎಳೆದು ‘ನಡೆಯಾಚೆ’ ಎಂದು ದೂಡಬೇಕಿದೆ. ಹಬ್ಬ ಬಂದಾಗ ಈಗ ‘ಸಿಹಿ ಹೊಟ್ಟೆಗಲ್ಲ; ಬದುಕಿಗೆ’ ತರಬೇಕಿದೆ ಎಂಬ ಸಂಕಲ್ಪಗೀತೆ ಹಾಡಬೇಕಿದೆ. ಏನೇನೋ ಆಗಿ ಹೇಗೇಗೋ ಅನಿಸುತ್ತದೆ ಅನ್ನೋದನ್ನು ಬಿಟ್ಟು ಹೊಸ ಉಮೇದಿನೊಂದಿಗೆ ಹೆಜ್ಜೆ ಇಡಬೇಕಿದೆ. ಸುಮ್ಮನೆ ಹಬ್ಬ ಮಾಡುವುದರಲ್ಲಿ ಏನರ್ಥ? ಒಳಗಿನ ರಾವಣನ ಮೇಲೆ ವಿಜಯ ಸಾಧಿಸಿದರೆ ‘ವಿಜಯದಶಮಿ’, ನರಕಾಸುರನ ಕೊಂದರೆ ಬೆಳಕಿನ ‘ದೀಪಾವಳಿ, ಜಡತ್ವದಿಂದ ಸಂಕ್ರಮಿಸಿ ಕ್ರಾಂತಿಯಾದರೆ ‘ಸಂಕ್ರಾಂತಿ’ ಹೊಸದು ಒಳ-ಹೊರ ಸೇರಿದರೆ ‘ಯುಗಾದಿ’, ಇಲ್ಲದಿದ್ದರೆ ಎಲ್ಲ ಮಾಡಿಯೂ ಮಾಡದಂತೆ. ಹೀಗಾದರೆ ಮಾಡದಿರುವುದೇ ಉತ್ತಮೋತ್ತಮ.
ಹೌದು, ಒಳಗಿನ ಯುದ್ದ ಗೆದ್ದು ನೈಜತೆಯ ಬದುಕು ಸಾಗಿಸಬೇಕಾಗಿದೆ. ಗುಣಮಟ್ಟದ ಜೀವನ ನಮ್ಮೆಲ್ಲರ ಮೂಲಭೂತ ಹಕ್ಕು. ಆ ಹಕ್ಕನ್ನು ಕೆಲ ಸೂತ್ರಗಳೊಂದಿಗೆ ಸುಸೂತ್ರವಾಗಿಸೋಣ. ಬದುಕು ಚಂದಗಾಣಿಸಿ ಬದುಕೇ ಸಂಭ್ರಮದ ಹಬ್ಬವಾಗಿಸಲು ಹೀಗೆ ಬದುಕೋ ಸಂಕಲ್ಪಿಸೋಣ.
ಒತ್ತಡ ಈಗ ಎಲ್ಲರೆಲ್ಲರಿಗೂ ಸಹಜ. ಎಲ್ಲೆಡೆ ಎಲ್ಲರಿಗೂ ಸಿಕ್ಕ ಉಡುಗೊರೆ. ನಾವೇ ನಾವಾಗಿ ನಮಗಾಗಿ ಪಡೆದ ಕೊಡುಗೆ. ಈ ಕೊಡುಗೆ ಅನುಭವಿಸಿದಷ್ಟು ಆನಿಸಿಕೊಂಡು ನೂರ್ಮಡಿಯಾಗುತ್ತಲೆ ಹೋಗುತ್ತದೆ. ಆದರೆ ಪರಿಹಾರ? ಒತ್ತಡ ನಿರ್ವಹಣೆ ಮಾಡಲೆಬೇಕು ಅನ್ನೋ ಮ್ಯಾನೆಜ್‌ಮೆಂಟ್ ಕಲೆ ಮಾತ್ರ. ಎಂತಹದೇ ಒತ್ತಡ ಬಂದ್ರು ಸದಾ ಸಮಧಾನದಿಂದ ಹ್ಯಾಂಡಲ್ ಮಾಡುವುದಷ್ಟೇ. ಬರಲಿ ಒತ್ತಡ ಅಂತ ನಗು-ನಗ್ತಾ ಕೂಲ್ ಆಗಿರೋಣ. ಮುಕ್ತವಾಗಿ ಸ್ವೀಕರಿಸಿ ಸಹಜವಾಗಿರೋಣ. ಒತ್ತಡಕ್ಕೆ ಒತ್ತಡವಾಗಿ ಒತ್ತುವರಿ ತೆರವುಗೊಳಿಸುವಂತೆ ಮಾಡೋಣ.
ಒಂದಂತೂ ಸತ್ಯ! ಕೆಲವು ಸಮಸ್ಯೆ ಎಷ್ಟೇ ಬಡಿದಾಡಿದರೂ ಬಗೆ ಹರಿಯಲ್ಲ. ಸಮಸ್ಯೆ ಬಗೆಹರಿಸಲು ಯತ್ನಿಸಿದಷ್ಟು ವಿಶ್ವರೂಪ ತಾಳಿ ‘ಟೈಗರ್ ಅಭಿ ಜಿಂದಾ ಹೈ’ ಅಂತಾವೆ. ಹೀಗಾಗಿ ಯಾವುದೇ ಪರ್ಯಾಯ ಇಲ್ಲ ಎಂದು ಮನವರಿಕೆಯಾದಾಗ ಅದರ ಪಾಡಿಗೆ ಅದನ್ನು ಬಿಡುವುದಷ್ಪೇ! ಸಮಯ ಎಲ್ಲವನ್ನೂ ನಿರ್ವಹಣೆ ಮಾಡಬಲ್ಲದು. ಆ ಕಲೆ ಸಮಯಕ್ಕಿದೆ. ಸಮಯವೇ ಮದ್ದು. ನಾವು ಸಮಯವೇ ಮುದ್ದು ಎಂದು ನಿರ್ಲಿಪ್ತವಾಗಿರೋಣ. ಕೈಯಲ್ಲಿರದಿರುವುದು, ಕೈಯಿಂದಾಗದಿರುವುದು ಎರಡನ್ನೂ ಮಾಡದಿರೋಣ. ಬಂದವುಗಳನ್ನು ಬಂದಂತೆ ಸ್ವೀಕರಿಸಿ ನಿಶ್ಚಿಂತೆಯಿಂದಿರೋಣ.
ಈಗ ದೊಡ್ಡ ಆಸ್ತಿ ಆರೋಗ್ಯ. ಇದು ಕೈ ಕೊಟ್ಟರೆ ಮಿಕ್ಕೆಲ್ಲವೂ ನಿರರ್ಥಕ. ದೇಹ ಉಳಿದೆಲ್ಲ ಕಾರ್ಯಗಳ ಸಾಂಗೋಪಾಂಗವಾಗಿ ನೆರವೇರಿಸಲು ಇರುವ ಏಕೈಕ ಸಾಧನ. ಕಾಳಜಿಯಿರದಿದ್ದರೆ ಆರೋಗ್ಯ ಕೈಕೊಡುವುದು ಗ್ಯಾರಂಟಿ. ಹೀಗಾಗಿ ಒಂದು ನಾಷ್ಟಾ ಎರಡು ಊಟ ಸರಿಯಾದ ನಿದ್ರೆ ಸರಿಯಾದ ಸಮಯಕ್ಕೆ ಸರಿಯಾಗಿ ಮಾಡುತ್ತಾ ಹಾಯಾಗಿರೋಣ. ದೇಹ ಕೆಡಿಸುವ ಆಹಾರ- ವಿಹಾರ ಯಾವುದು ಬೇಡವೇ ಬೇಡ. ಯೋಗ-ಭೋಗ ಎರಡು ತಾಳ ಮೇಳ ಕೂಡಿರುವಂತೆ ಮಾಡೋಣ.
ಕೆಲಸ ಜೀವನಕ್ಕೆ ಮುಖ್ಯ. ಹಾಗಂತ ಅದೇ ಎಲ್ಲಾ ಅಲ್ಲ. ಮಿಕ್ಕೆಲ್ಲವೂ ಸರಿಯಾಗಿ ನಡೆಯಲು ಕಾರ್ಯ-ಕಾಯಕ ಮಾಡ್ಲೆಬೇಕು. ಬರೀ ಕೆಲಸ ಮಾಡಿಯೇ ಬದುಕುವುದಲ್ಲ. ಎಲ್ಲಾ ಹೊರೆ ಮೈ ಮೇಲೆ ಎಳೆದುಕೊಂಡು ಮಿಕ್ಕೆಲ್ಲ ನಿರ್ಲಕ್ಷ್ಯ ತರವಲ್ಲ. ಮಾಡಬೇಕಾದದನ್ನು ಮನಪೂರ್ವಕವಾಗಿ ಎಷ್ಟು ಹೊತ್ತು ಬೇಕೋ ಅಷ್ಟು ಪೂರ್ಣ ನ್ಯಾಯ ಕೊಟ್ಟು ಕಾಯಕ ಮಾಡೋಣ. ಅದರಲ್ಲಿ ಶ್ರೇಷ್ಠತೆ ಕಾಣೋಣ. ಗಾಣದೆತ್ತಿನ ದುಡಿತಕ್ಕಿಂತ ನಮಗೂ-ನಮ್ಮವರಿಗೂ-ನಂಬಿದವರಿಗೂ ಸೈ ಎನಿಸುವಂತೆ ಕಾಯಕ ಮಾಡೋಣ.
ನಮ್ಮ ಬದುಕು ಜಟೀಲವಲ್ಲ. ಹಾಗಂತ ಹಗುರವೂ ಅಲ್ಲ. ನಾವು ಬದುಕುತ್ತಿರುವ ಬದುಕು ಸಹಸ್ರಾರು ಜನರ ಕನಸು ನಮ್ಮಂತಾಗಬೇಕು ಎಂದು ಅವರೆಲ್ಲ ಕನಸಿಸುತ್ತಿರಬೇಕಾದರೆ ನಾವು ಮತ್ಯಾರೋ ಆಗಬೇಕೆಂದು ಯಾಕೆ ಕನವರಿಸೋಣ? ನಮ್ಮ ಬದುಕನ್ನು ಬದುಕಿನಂತೆ ಸ್ವಿಕರಿಸಿ ಬದುಕೋಣ. ಬದುಕು ಬದುಕುವುದು ಒಂದೇ ಸಲ. ಗಳಿಗೆಗಳ ರಿಪೀಟ್ ಮಾಡಲಾಗದು. ಕ್ಷಣಗಳು ನಿರರ್ಥಕವಾದರೆ ಕೊನೆಗೆ ಉಳಿಯುವುದು ಏನು ಬದುಕಿಲ್ಲ ಅನ್ನೋ ನಿರರ್ಥಕ ಭಾವ. ಹೀಗಾಗಿ ಬದುಕು ಬದುಕೋಣ ಬಹು ಚೆಂದವಾಗಿ, ಬಹು ಸಾರ್ಥಕವಾಗಿ. ನಮ್ಮ ಬದುಕಿನ ಬಗ್ಗೆ ನಾವು ಅಭಿಮಾನ ಪಡೋಣ, ಅನುಭವಿಸೋಣ.
ಯಾವುದು ಸಾರ್ಥಕವೋ ಅದು ಬಹು ಮುಖ್ಯ. ಅದಕ್ಕೆ ಹೆಚ್ಚು ಒತ್ತು ಕೊಡೋಣ. ಯಾವುದು ನಿರರ್ಥಕವೋ ಅದಕ್ಕೆ ಸಲ್ಲಿಸಬೇಕಾದದಷ್ಟು ಮಾತ್ರ ಸಲ್ಲಿಸೋಣ. ನಿರರ್ಥಕಕ್ಕೆ ಸಾರ್ಥಕಕ್ಕಿಂತ ಹೆಚ್ಚು ಒತ್ತು ಕೊಟ್ಟು ಸಾಧಿಸಿದವರುಂಟೆ? ತವಡು ಕುಟ್ಟುವ ತೆವಲು ಬಿಟ್ಟು ಸಾರ್ಥಕ ಅನಿಸುವುದನ್ನು ಮಾತ್ರ ನಮ್ಮದಾಗಿಸಿಕೊಳ್ಳೋಣ.

ನಮ್ಮ ಯಾನದಲ್ಲಿ ಜೊತೆಗೂಡಿದವರೆಲ್ಲ ನಂಬಿಕೆಗೆ ಅರ್ಹರಾದವರಲ್ಲ. ಯಾರು ಯಾರೋ ಯಾವಾಗೋ ವೀಸಾ ಪಡೆಯದೆ ಬದುಕಲ್ಲಿ ಬಂದು ಸೇರಿಕೊಂಡಿದ್ದಾರೆ. ಜಾಗ ಮಾಡಿಕೊಂಡಿದ್ದಾರೆ. ಅನರ್ಹರು ಜೊತೆ ಇರುವಷ್ಟು ಕಾಲ ಬದುಕು ಬಲು ಭಾರ. ಯಾನ ಕಠಿಣ. ಹೀಗಾಗಿ ಇಂತಹವರನ್ನು ಹುಡು-ಹುಡುಕಿ ಆಚೆ ದೂಡೋಣ. ಅದರ ನಂತರ ಅರ್ಹರಲ್ಲದವರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳದಿರುವ ಪ್ರತಿಜ್ಞೆ ಮಾಡೋಣ. ಹಾಗಂತ ಎಲ್ಲರನ್ನೂ ಅಪನಂಬಿಕೆಯಿಂದ ನೋಡೋದು ಬೇಡ. ಅವರನ್ನು ಜತನದಿಂದ ಕಾಯ್ದುಕೊಳ್ಳೋಣ. ಅಪ್ಪಿ ತಪ್ಪಿಯೂ ನಂಬದೇ ದೂರ ಮಾಡಿಕೊಂಡರೆ ಬಹುದೊಡ್ಡ ದುರಂತವೇ ಸೈ.
ಅರ್ಹರಾದವರನ್ನು ಸರಿಯಾಗಿ ಅರ್ಥ ಮಾಡಿಕೊಂಡು ನಂಬಿಕೆಗೆ ಭಂಗ ಬರದಂತೆ ಜತನದಿಂದ ಸಂಬಂಧ ಕಾಪಾಡಿಕೊಳ್ಳೋಣ ʼಸಂಬಂಧ ಎಲ್ಲಕ್ಕಿಂತ ದೊಡ್ಡದು ಕಣಾʼ ಅಂತಾರೆ ಹಿರಿಯರು. ಯಾರು ತನ್ನ ಬಗ್ಗೆ ನಿಜವಾದ ಕಾಳಜಿ ಮಾಡುತ್ತಾರೋ ಅವರು ಭಗವಂತ ನೀಡಿದ ವರದಾನ. ಅವರನ್ನು ಜೋಪಾನದಿಂದ ಕಾಪಾಡಿಕೊಳ್ಳೋಣ.
ಒಳ್ಳೆಯ ಸಂಸ್ಕಾರ ಮತ್ತು ಮೌಲ್ಯಗಳಿರುವ ಜೀವನಕ್ಕೆ ಪರ್ಯಾಯ ಇಲ್ಲ. ಈಗೀದು ಲೆಕ್ಕಕ್ಕಿಲ್ಲ ಅಂತ ಅದ್ಯಾವುದೋ ಈ ಕಾಲಕ್ಕೆ ಇದೆ ಶ್ರೇಷ್ಠ ಅಂತ ಬಹುಸಂಖ್ಯಾತರ ಆಯ್ಕೆ ಇದೆ ಎಂದು ಅದನ್ನು ನಮ್ಮದಾಗಿಸಿಕೊಳ್ಳೋದಿರೋಣ. ಸಾರ್ವತ್ರಿಕವಾಗಿರೋದು ಕೆಲ ಕಾಲ ಏನು ಇಲ್ಲ ಅನಿಸಬಹುದಾದರೂ ಅಂತಿಮವಾಗಿ ಅದೇ ಗೆಲ್ಲುವುದು- ಅದೇ ಗೆಲ್ಲಿಸುವುದು. ಅದೇ ಕೊಡುಗೆಯಾಗಿ ನಿಲ್ಲುವುದು. ಹೀಗಾಗಿ ಶ್ರೇಷ್ಠ ವಿಚಾರಗಳ ವ್ಯಸನ ಹಚ್ಚಿಕೊಂಡು ಬದುಕು ಹಸನಾಗಿಸಿಕೊಳ್ಳೋಣ; ಸಮೃದ್ಧವಾಗಿಸಿಕೊಳ್ಳೋಣ. ವಾಸ್ತವದ ನೆಲೆಯಲ್ಲಿ ನಿಲ್ಲೋಣ.
ಅಂತಿಮವಾಗಿ ಒಂದು ಮಾತು! ಈ ಬದುಕು ಯಾರಿಗೂ ದರ್ದನಾಕ, ದಯನೀಯವಲ್ಲ.ರೂಪಿಸಿಕೊಳ್ಳಲೆಬೇಕು- ಕಟ್ಟಿಕೊಳ್ಳಲೇಬೇಕು – ಬದುಕಲೇಬೇಕು ಅನ್ನೋರಿಗೆ ಯಾವತ್ತೂ ಅನ್ಯಾಯ ಮಾಡೊಲ್ಲ. ಇದೊಂದು ಭಗವಂತನ ಅದ್ಬುತ ಕೊಡುಗೆ. ಈ ಕೊಡುಗೆಯ ವ್ಯರ್ಥವಾಗಿಸಿ, ದಿನಗಳು ಹೀಗೆ ಬಂದು ಹಾಗೆ ಹೋದವು ಎಂಬಂತೆ ಜೀವಿಸದಿರೋಣ. ಇದು ಒಮ್ಮೆ ಮಾತ್ರ ಬರುವ ಬದುಕು. ಮುಂದೊಮ್ಮೆ ‘ಏ ದೌಲತ್ ಬಿ ಲೇಲೋ; ʼಏ ಶೊಹರತ್ ಬಿ ಲೇಲೋ’ ಅನ್ನುತ್ತಾ ‘ಲೌಟಕೇ ಆವೋ’ ಅನ್ನುತ್ತ ಕೊರಗದಿರೋಣ. ಕಳೆದ ಜೀವನ ವ್ಯರ್ಥವಾಗಿದೆ ಅನ್ನೋ ಭಾವ ಯಾವತ್ತೂ ಬಾರದಿರಲಿ. ಪಯಣ ಎಷ್ಟು ಸೊಗಸಾಗಿತ್ತು ಅಂತ ಮೆಲುಕು ಹಾಕುವಂತೆ ಬದುಕೋಣ. ಕ್ಷಣ-ಕ್ಷಣ ಅನುಭವಿಸೋಣ ಸಾರ್ಥಕ ಯಾನ ನಮ್ಮದಾಗಲಿ.
ಇದನ್ನೂ ಓದಿ : ಔರಾದ್ ಸೀಮೆಯ ಕನ್ನಡ | ದನ ಕಾಯೋರು ತಿಂಗಳಿಗೆ ಪಗಾರ್ ಎಷ್ಟು ತಕೋತಾರ್ ಗೊತ್ತಾ!
ಹಬ್ಬ ನಿರ್ಣಯಗಳ ಮೂಲಕ ನಿರ್ಮಾಣದ ಕಾರ್ಯಕ್ಕೆ ಮೂರ್ತ ರೂಪ ಕೊಡುವಂತಾಗಲಿ. ಈ ಹಬ್ಬದಿಂದ ಮುಂದಿನ ಎಲ್ಲ ಹಬ್ಬ ಅಬ್ಬಬ್ಬಾ ಎನ್ನುವಂತಾಗಲಿ.

ಚನ್ನಬಸವ ಹೇಡೆ
ಬರಹಗಾರರು, ಬೀದರ್