ಮದ್ದೂರು | ಸಂಘಪರಿವಾರ ತಳಸಮುದಾಯದ ಜನರಲ್ಲಿ ಕೋಮುವಿಷ ಬಿತ್ತಿ ಗಲಭೆಗೆ ಪ್ರಚೋದಿಸುತ್ತಿದೆ: ಭೂಮಿಗೌಡ

Date:

Advertisements

ಆರ್‌ಎಸ್‌ಎಸ್‌ ಸಂಘಪರಿವಾರ, ಬಿಜೆಪಿ ಮುಖಂಡರು ಅಭಿವೃದ್ಧಿ ಹಾಗೂ ಜನಪರ ಕಾರ್ಯಕ್ರಮಗಳನ್ನು ಮುಂದು ಮಾಡಿ ಚುನಾವಣೆಯನ್ನು ಎದುರಿಸುತ್ತಿಲ್ಲ. ಬದಲಿಗೆ ಧರ್ಮ- ಧರ್ಮಗಳ ನಡುವೆ ಒಡಕನ್ನು ಉಂಟುಮಾಡಿ ಅದರಲ್ಲಿ ರಾಜಕೀಯ ಮಾಡಲು ಮದ್ದೂರಿಗೆ ಬಂದಿದ್ದಾರೆ. ತಳಸಮುದಾಯದ ಜನರ ಮೆದುಳಿನಲ್ಲಿ ಕೋಮು ವಿಷವನ್ನು ಸುರಿದು ಅವರನ್ನು ಗಲಭೆಗೆ ಪ್ರಚೋದಿಸುತ್ತಿದ್ದಾರೆ ಎಂದು ಹಿರಿಯ ಸಾಹಿತಿ ಭೂಮಿಗೌಡ ಆರೋಪಿಸಿದರು.

ಇತ್ತೀಚಿಗೆ ಮದ್ದೂರು ಪಟ್ಟಣದಲ್ಲಿ ಸಂಭವಿಸಿದ ಗಲಭೆ ಹಿನ್ನೆಲೆ ಸಾರ್ವಜನಿಕರಲ್ಲಿ ಸೌಹಾರ್ದತೆ, ಸಾಮರಸ್ಯ ಬೆಳೆಸಲು ಪರಸ್ಪರ ವಿಶ್ವಾಸದಿಂದ ಸಹಬಾಳ್ವೆ ನಡೆಸಲು ಉತ್ತೇಜಿಸುವ ಉದ್ದೇಶದಿಂದ ಮಂಡ್ಯ ಜಿಲ್ಲಾ ಜನಪರ ಸಂಘಟನೆಗಳು ನಡೆಸಲಾಗುತ್ತಿರುವ ಸೌಹಾರ್ದ- ಸಾಮರಸ್ಯ ನಡಿಗೆ ಮದ್ದೂರು ಕಡೆಗೆ ಎಂಬ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

“ಬಿಜೆಪಿ ನಾಯಕರ ಮಕ್ಕಳು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದರೆ, ನಮ್ಮ ಶೂದ್ರ ಸಮುದಾಯದ ಯುವಕರು ಕೋಮುಗಲಭೆಯಲ್ಲಿ ಭಾಗಿಯಾಗಿ ಶಾಂತಿ ಕದಡಿ ಜೈಲು ಸೇರುತ್ತಿದ್ದಾರೆ. ಬಿಜೆಪಿ, ಅರ್‌ಎಸ್‌ಎಸ್‌ ನಾಯಕರ ಹುನ್ನಾರವನ್ನು ಜನರು ಅರಿತುಕೊಳ್ಳಬೇಕು” ಎಂದು ತಿಳಿಸಿದರು.

ಮದ್ದೂರು ಪುರಸಭೆ ಮಾಜಿ ಅಧ್ಯಕ್ಷ ಎಂ ಸಿ ಬಸವರಾಜು ಮಾತನಾಡಿ, ಮಂಡ್ಯ ಜಿಲ್ಲೆ ಶಾಂತಿ- ಸಾಮರಸ್ಯಕ್ಕೆ ಹೆಸರಾಗಿದೆ. ಇಂತಹ ನಾಡಿನಲ್ಲಿ ಕೆಲವರು ಕೋಮುಗಲಭೆ ಮೂಲಕ ಅಧಿಕಾರ ಹಿಡಿಯಲು ಬಂದಿದ್ದಾರೆ. ಜನಪರ ಸಂಘಟನೆಗಳ ನಾವೆಲ್ಲರೂ ಸೌಹಾರ್ದ ಸಾಮರಸ್ಯದ ನಡಿಗೆ ಮಾಡುತ್ತಿದ್ದು, ಇದಕ್ಕೆ ಪೊಲೀಸರು ಅನುಮತಿ ನೀಡಿಲ್ಲದಿರುವುದು ಬೇಸರ ತಂದಿದೆ. ಸಮಾಜದಲ್ಲಿ ಶಾಂತಿ ನೆಲೆಸಬೇಕು. ಎಲ್ಲ ಸಮುದಾಯಗಳು ಸೌಹಾರ್ದವಾಗಿ ಅನ್ಯೋನ್ಯತೆಯಿಂದ ಬಾಳಬೇಕು ಎಂಬುದು ನಮ್ಮೆಲ್ಲರ ಉದ್ದೇಶ. ಅದಕ್ಕಾಗಿ ಸೌಹಾರ್ದ-ಸಾಮರಸ್ಯ ನಡಿಗೆ ಆಯೋಜಿಸಿದ್ದೇವೆ. ಇಲ್ಲಿ ಬಂದಿರುವ ಒಬ್ಬರು ನೂರು ಮಂದಿಗೆ ಸಮ. ಮದ್ದೂರು ಸೇರಿದಂತೆ ಮಂಡ್ಯ ಜಿಲ್ಲೆಯಲ್ಲಿ ಕೋಮುವಾದಿಗಳಿಗೆ ನೆಲೆ ಕೊಡಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಇದರ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕಿದೆ” ಎಂದು ಕರೆ ನೀಡಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ಮಾತನಾಡಿ, “ರೈತ ಸಂಘಟನೆಗಳು ಸೇರಿದಂತೆ ಶಾಂತಿ, ಸೌಹಾರ್ದತೆ ಬಯಸುವ ಎಲ್ಲ ಸಂಘಟನೆಗಳು ಬಸವಣ್ಣ ಹಾಗೂ ಗಾಂಧೀಜಿಯವರ ತತ್ವಗಳಿಂದಲೇ ನಡೆಯುತ್ತಿವೆ. ಈವರೆಗೆ ನಮ್ಮ ಸಂಘಟನೆಗಳಿಂದ ಯಾವುದೇ ರೀತಿಯ ಅಶಾಂತಿ ನಡೆದಿಲ್ಲ. ಈ ದೃಷ್ಟಿಯಿಂದ ಶಾಂತಿ- ಸಾಮರಸ್ಯ ನಡಿಗೆಗೆ ಪೊಲೀಸ್ ಇಲಾಖೆ ಅನುಮತಿ ಕೊಡಬೇಕಿತ್ತು. ಆದರೆ ಕೋಮು ಪ್ರಚೋದನೆ ಮಾಡುವ ಸಿ ಟಿ ರವಿ, ಬಸವನಗೌಡ ಯತ್ನಾಳ್ ಅವರಿಗೆ ಮದ್ದೂರಿಗೆ ಬರಲು, ಕೋಮುದ್ವೇಷದ ಮಾತನಾಡಲು ಅನುಮತಿ ಇದೆ. ಆದರೆ ನಮ್ಮಂತ ಶಾಂತಿ ಪ್ರಿಯರಿಗೆ ಅನುಮತಿ ನಿರಾಕರಣೆ ಮಾಡಿರುವುದು ಸರ್ಕಾರ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ” ಎಂದರು.

“ಬಿಜೆಪಿ ಜೊತೆ ಕೈಜೋಡಿಸಿರುವ ಜೆಡಿಎಸ್‌ ಜಾತ್ಯತೀತತೆ ಎಂಬ ಪದಕ್ಕೆ ಅಪಮಾನ ಮಾಡಿದೆ. ಹಸಿರು ಟವೆಲ್ ಅನ್ನು ಯಡಿಯೂರಪ್ಪ, ದೇವೇಗೌಡ, ಕುಮಾರಸ್ವಾಮಿ ರೈತರ ಮೇಲಿನ ಕಾಳಜಿಯಿಂದ ಹಾಕಿಲ್ಲ. ಅವರು ತಮ್ಮ ಸ್ವಾರ್ಥ ರಾಜಕೀಯಕ್ಕಾಗಿ ಹಸಿರು ಟವೆಲ್ ಹಾಕುತ್ತಿದ್ದಾರೆ ಎಂಬುದು ಜಗಜ್ಜಾಹೀರಾಗಿದೆ. 40 ವರ್ಷಗಳ ನಮ್ಮ ಸಂಘಟನೆ ಇತಿಹಾಸದಲ್ಲಿ ನಾವೆಲ್ಲರೂ ಕಾನೂನಿಗೆ ಅನುಗುಣವಾಗಿ, ಶಾಂತಿಯಿಂದ ಪ್ರತಿಭಟನೆ, ಹೋರಾಟ ಮಾಡಿಕೊಂಡು ಬಂದಿದ್ದೇವೆ. ಕೋಮುವಾದಿಗಳೊಂದಿಗೆ ಕೈಜೋಡಿಸಿರುವ ಕುಮಾರಸ್ವಾಮಿಯವರು ನಮ್ಮ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿಲ್ಲ. ನಾವು ಏನು ಹೇಳಬೇಕೆಂದುಕೊಂಡಿದ್ದೇವೋ ಅದನ್ನು ಹೇಳಿದ್ದೇವೆ. ಎಲ್ಲ ಜನಪರ ಸಂಘಟನೆಗಳು ಕೋಮು ದ್ವೇಷಕ್ಕೆ ಅವಕಾಶ ನೀಡುವುದಿಲ್ಲ. ಕೋಮುವಾದಿಗಳಿಂದ ಮಂಡ್ಯ ಜಿಲ್ಲೆಯನ್ನು ಕಾಪಾಡಿಕೊಳ್ಳುತ್ತೇವೆ” ಎಂದು ಸ್ಪಷ್ಟಪಡಿಸಿದರು.

ಜನವಾದಿ ಮಹಿಳಾ ಸಂಘಟನೆಯ ದೇವಿ ಮಾತನಾಡಿ, “ಜೆಡಿಎಸ್-ಬಿಜೆಪಿ ಮುಖಂಡರು ತಮ್ಮ ಸ್ವಾರ್ಥಕ್ಕಾಗಿ ಕೋಮುಗಳ ನಡುವೆ ಪ್ರಚೋದನೆ ನೀಡುತ್ತಿರುವುದರಿಂದ ಯಾವ ರೀತಿ ದುಷ್ಪರಿಣಾಮ ಬೀರಿದೆ ಎಂಬುದು ಎಲ್ಲರಿಗೂ ಗೊತ್ತಾಗಿದೆ. ಶಾಂತಿ- ಸೌಹಾರ್ದತೆಗೆ ಹೆಸರಾಗಿರುವ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮುಗಲಭೆ ರಾಜಕೀಯವನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲಿತ ಸಂಘಟನೆ ಮುಖಂಡ ಅಂದಾನಿ ಸೋಮನಹಳ್ಳಿ ಮಾತನಾಡಿ, “ಮಂಡ್ಯ ಜಿಲ್ಲೆಯಲ್ಲಿ ಕೋಮುವಾದಿಗಳು ತಮ್ಮ ಹೀನ ರಾಜಕೀಯ ಮಾಡಲು ಬಂದಿದ್ದಾರೆ. ಶಾಂತಿ ಕದಡಲು ಬಂದಿರುವ ಇವರಿಗೆ ಮದ್ದೂರಿನ ಜನರೇ ನಿಂತು ಶಾಂತಿ-ಸಾಮರಸ್ಯದ ಮೂಲಕವೇ ಉತ್ತರ ನೀಡುತ್ತಾರೆ” ಎಂದರು.

ಈ ಸುದ್ದಿ ಓದಿದ್ದೀರಾ? ಮದ್ದೂರು | ಕೋಮುವಾದಿಗಳ ಪರ ಸರ್ಕಾರದ ಮೃದು ಧೋರಣೆಯೇ ಸಾಮರಸ್ಯ ಕದಡಲು ಕಾರಣ: ಕೃಷ್ಣೇಗೌಡ

ಕೆಲ ದಿನಗಳ ಹಿಂದೆ ಮದ್ದೂರಿನ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದ ನಂತರ ಕೆಲವು ನಾಯಕರು ಸೇರಿದಂತೆ ಸಂಘಪರಿವಾರಗಳ ಮುಖಂಡರು ಕೋಮು ದ್ವೇಷ ಕೆರಳಿಸಿ, ಪ್ರಚೋದನೆಯ ಮಾತುಗಳನ್ನಾಡಿದ್ದರು. ಇದಕ್ಕೆ ಪ್ರತಿಯಾಗಿ ಜಿಲ್ಲೆಯ ಜನಪರ ಸಂಘಟನೆಗಳು ಇಂದು ಮದ್ದೂರಿನಲ್ಲಿ ಸೌಹಾರ್ದ ಸಾಮರಸ್ಯ ನಡಿಗೆ ನಡೆಸಲು ಆಯೋಜಿಸಿ, ಟಿ ಬಿ ವೃತ್ತದಲ್ಲಿರುವ ರೈತನಾಯಕ ಪ್ರೊ. ನಂಜುಂಡಸ್ವಾಮಿಯವರ ಪ್ರತಿಮೆಯಿಂದ ಮದ್ದೂರಿನ ವಿವಿಧ ಬೀದಿಗಳಲ್ಲಿ ಕಾಲ್ನಡಿಗೆ ಜಾಥಾ ತೆರಳಿ ನಂತರ ಐತಿಹಾಸಿಕ ಶಿವಪುರ ಸತ್ಯಾಗ್ರಹ ಸೌಧ ತಲುಪುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆದರೆ ಸೌಹಾರ್ದ-ಸಾಮರಸ್ಯದ ನಡಿಗೆಯಿಂದ ಮತ್ತೆ ಗಲಭೆ ಸಂಭವಿಸಬಹುದೆಂಬ ಸಬೂಬು ನೀಡಿದ ಪೋಲೀಸರು ಅನುಮತಿ ನಿರಾಕರಿಸಿದ್ದಾರೆ.

ಸೌಹಾರ್ದ- ಸಾಮರಸ್ಯದ ನಡಿಗೆ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದ್ದರ ನಡುವೆಯೂ, ನೂರಾರು ಸಂಖ್ಯೆಯಲ್ಲಿದ್ದ ವಿವಿಧ ಜನಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಮದ್ದೂರು ಎಪಿಎಂಸಿ ಆವರಣದಲ್ಲಿಯೇ ಸೌಹಾರ್ದ-ಸಾಮರಸ್ಯದ ನಡಿಗೆಗೆ ಚಾಲನೆ ನೀಡಿದ್ದು, ಮಂಡ್ಯ ಜಿಲ್ಲೆಯಲ್ಲಿ ಕೋಮುವಾದಿಗಳ ಸ್ವಾರ್ಥ ರಾಜಕೀಯಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಜತೆಗೆ ಶಾಂತಿ-ಸೌಹಾರ್ದದ ಜಿಲ್ಲೆಯಲ್ಲಿ ಕೋಮುವಾದಿಗಳ ಸ್ವಾರ್ಥ ರಾಜಕೀಯವನ್ನು ಸೋಲಿಸುವುದಾಗಿ ಶಪಥ ಮಾಡಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಸ್ತೆಗುಂಡಿ ಬಗ್ಗೆ ಸಾರ್ವಜನಿಕರು ಮಾಹಿತಿ‌ ನೀಡುವ ವ್ಯವಸ್ಥೆ ರಾಜ್ಯದಲ್ಲಿ ಮಾತ್ರ: ಡಿಸಿಎಂ ಡಿ ಕೆ ಶಿವಕುಮಾರ್

ರಸ್ತೆಗುಂಡಿಗಳನ್ನು ಸಾರ್ವಜನಿಕಕರು ಗಮನಿಸಿ ಸರ್ಕಾರಕ್ಕೆ ತಿಳಿಸುವ ವ್ಯವಸ್ಥೆ ಇಡೀ ದೇಶದಲ್ಲಿ ಎಲ್ಲಾದರೂ...

ಜನಮನ ಗೆದ್ದ ತುಮಕೂರು ದಸರಾ ಉತ್ಸವ : ಡಾ. ಜಿ.ಪರಮೇಶ್ವರ

 ತುಮಕೂರು ದಸರಾ ಉತ್ಸವವು ನಾಡಿನಾದ್ಯಂತ ಜನರ ಮನಸ್ಸನ್ನು ಗೆಲ್ಲುವ ಮೂಲಕ ಐತಿಹಾಸಿಕ...

NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ

ಭಾರತದ ವಿವಿಧ ರಾಜ್ಯಗಳಲ್ಲಿ 2023ರಲ್ಲಿ ನಾನಾ ರೀತಿಯಲ್ಲಿ ನಡೆದಿರುವ ದಾಖಲಿತ ಅಪರಾಧ...

Download Eedina App Android / iOS

X