ಮದ್ದೂರು ಪಟ್ಟಣದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯುಂಟಾಗಿದ್ದನ್ನು ಪರಿಹರಿಸುವುದರಲ್ಲಿ ಪೊಲೀಸರ ಕಾರ್ಯವೈಖರಿಯನ್ನು ನಾವು ಸ್ವಾಗತಿಸಿದ್ದೇವೆ. ಆದರೆ ಪೊಲೀಸ್ ಇಲಾಖೆ, ಗುಪ್ತಚರ ಇಲಾಖೆಯ ವೈಫಲ್ಯ ಮತ್ತು ರಾಜ್ಯ ಸರ್ಕಾರ ಸರ್ಕಾರ ಕೋಮುವಾದಿಗಳೊಂದಿಗೆ ಆಡುತ್ತಿರುವ ಆಟ, ಕೋಮುವಾದದ ಕಡೆಗೆ ಮೃದು ಧೋರಣೆಯಿಂದ ಕೋಮುವಾದಿಗಳು ತಲೆ ಎತ್ತುವಂತೆ ಮಾಡಿದೆ ಎಂದು ಸಿಪಿಐಎಂ ಮುಖಂಡ ಕೃಷ್ಣೇಗೌಡ ಆರೋಪಿಸಿದರು.
ಇತ್ತೀಚಿಗೆ ಮದ್ದೂರಿನಲ್ಲಿ ಸಂಭವಿಸಿದ ಗಲಭೆ ಹಿನ್ನೆಲೆ ಸಾರ್ವಜನಿಕರಲ್ಲಿ ಸೌಹಾರ್ದತೆ, ಸಾಮರಸ್ಯ ಬೆಳೆಸಲು ಪರಸ್ಪರ ವಿಶ್ವಾಸದಿಂದ ಸಹಬಾಳ್ವೆ ನಡೆಸಲು ಉತ್ತೇಜಿಸುವ ಉದ್ದೇಶದಿಂದ ಮಂಡ್ಯ ಜಿಲ್ಲಾ ಜನಪರ ಸಂಘಟನೆಗಳು ನಡೆಸಲಾಗುತ್ತಿರುವ ಸೌಹಾರ್ದ- ಸಾಮರಸ್ಯ ನಡಿಗೆ ಮದ್ದೂರು ಕಡೆಗೆ ಎಂಬ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಸಾಮರಸ್ಯ ಸೌಹಾರ್ದ ನಡಿಗಡೆಯಲ್ಲಿ ಪಾಲ್ಗೊಳ್ಳಲು ಪೊಲೀಸ್ ಇಲಾಖೆ ಅನುಮತಿ ನೀಡದೆ ಬ್ಯಾರಿಕೇಡ್ ಹಾಕಿ ತಡೆಹಿಡಿದಿದೆ. ವರು ಯತ್ನಾಳ್, ಸಿ ಟಿ ರವಿ, ಪ್ರತಾಪ್ ಸಿಂಹನಂತಹ ಕೋಮುವಾದಿಗಳಿಗೆ ದ್ವೇಷ ಭಾಷಣ ಮಾಡಲು ಅವಕಾಶ ನೀಡುತ್ತಾರೆ. ಆದರೆ ಸಾಮಾನ್ಯ ನಾಗರಿಕರು ಮದ್ದೂರು ತಲುಪುವುದನ್ನು ನಿರಾಕರಿಸುತ್ತಾರೆಂದರೆ ಪೊಲೀಸ್ ಇಲಾಖೆಗೆ ಕ್ರಿಮಿನಲ್‌ಗಳು ಯಾರು? ಸಜ್ಜನರು ಯಾರು? ಎಂಬ ವ್ಯತ್ಯಾಸವೇ ಗೊತ್ತಿಲ್ಲದಿರುವಂತಹ ಅಜ್ಞಾನದಲ್ಲಿ ವರ್ತಿಸುತ್ತಿರುವುದು ಖಂಡನೀಯ” ಎಂದರು.
“ನಾವು ಇದನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ. ಮುಂದಿನ ದಿನಗಳಲ್ಲಿ ಸೌಹಾರ್ದ ಕೂಟ, ಸೌಹಾರ್ದ ಜಾತ್ರೆ ಹಾಗೂ ಸೌಹಾರ್ದ ಸಮಾರಂಭಗಳನ್ನು ಮಾಡುತ್ತೇವೆ. ಪೊಲೀಸ್ ಇಲಾಖೆ ನಮ್ಮೊಂದಿಗೆ ಕೈ ಜೋಡಿಸಬೇಕು” ಎಂದು ಇದೇ ವೇಳೆ ಮನವಿ ಮಾಡಿದರು.
“ಮದ್ದೂರಿನ ಗಡಿಯೊಳಗಿರುವ ಯಾವುದೇ ನೆಲ ಮದ್ದೂರಿನ ನೆಲ. ಪೊಲೀಸ್ ಇಲಾಖೆ ನಮಗೆ ನಿರ್ಬಂಧ ವಿಧಿಸಿದರೂ ಕೂಡ ನಾವು ಮದ್ದೂರಿನ ಗಡಿಭಾಗದಲ್ಲಾದರೂ ಸೌಹಾರ್ದ ನಡಿಗೆಯನ್ನು ನಡೆಸಲು ಸಾಧ್ಯವಾಗಿದೆ. ಪೊಲೀಸರು ಎಷ್ಟೇ ನಿರ್ಬಂಧ ಹೇರಿದರೂ ಕೂಡ ನಮ್ಮ ಸಾಮರಸ್ಯ ನಡಿಗೆ ತಡೆಯಲು ಸಾಧ್ಯವಾಗಲಿಲ್ಲವೆಂದು ಈ ಮೂಲಕ ಸಂದೇಶವನ್ನು ನೀಡುತ್ತಿದ್ದೇವೆ” ಎಂದು ಹೇಳಿದರು.

ಸಾಮಾಜಿಕ ಹೋರಾಟಗಾರ್ತಿ ಕುಮಾರಿ ಮಾತನಾಡಿ, “ಈ ದೇಶಕ್ಕೆ ಸ್ವಾತಂತ್ರ್ಯ ಸುಮ್ಮನೆ ಬಂದಿಲ್ಲ, ಮಹನೀಯರ ತ್ಯಾಗ ಬಲಿದಾನಗಳಿಂದ ಬಂದಿದೆ. ಎಲ್ಲ ಧರ್ಮದವರೂ, ಎಲ್ಲ ಮನುಷ್ಯರೂ ತಮ್ಮ ಪ್ರಾಣಗಳನ್ನು ತ್ಯಾಗ ಮಾಡಿದಂತೆಯೇ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅತಿ ಹೆಚ್ಚು ಮುಸಲ್ಮಾನ ಬಾಂಧವರೂ ಕೂಡ ಭಾರತಾಂಬೆಗೆ ತಮ್ಮ ಪ್ರಾಣಗಳನ್ನು ನೀಡಿದ್ದಾರೆ. ಈ ದೇಶದ ಇತಿಹಾಸವನ್ನು ಮರೆತಿರುವವರು, ಹೊಸ ಇತಿಹಾಸವನ್ನು ಸೃಷ್ಟಿ ಮಾಡಲು ಸಾಸಧ್ಯವಿಲ್ಲ. ಮುಸಲ್ಮಾನರನ್ನು ದ್ವೇಷ ಮಾಡುವ ಯಾವುದೇ ಧರ್ಮಗಳೂ ಇಲ್ಲ, ಯಾವುದೇ ಧರ್ಮದಲ್ಲಿ ಮುಸಲ್ಮಾನರನ್ನು, ಮನುಷ್ಯರನ್ನು ದ್ವೇಷ ಮಾಡುವುದಾಗಿ ಹೇಳಿಲ್ಲ. ಆದರೆ ಹಿಂದುತ್ವವಾದಿಗಳು ಮಾತ್ರ ಒಟ್ಟಿಗೆ ಬದುಕುವುದನ್ನು, ಸಾಮರಸ್ಯದಿಂದ ಬಾಳುವುದನ್ನು ನಿರಾಕರಿಸುತ್ತಾರೆ. ವಿಭಜನೆ ಮಾಡಲು ಹುನ್ನಾರ ನಡೆಸುತ್ತಿದ್ದಾರೆ. ಈ ಪ್ರಯತ್ನದಲ್ಲಿ ಮಂಡ್ಯವನ್ನು ಪ್ರಯೋಗ ಶಾಲೆಯನ್ನಾಗಿ ಮಾಡಿಕೊಳ್ಳಲು ಹೊರಟಿರುವ ಅವರ ಚಾಣಾಕ್ಷ್ಯತೆಗೆ ನಾವು ಸಾಮರಸ್ಯದ ಮೂಲಕ ಹಿನ್ನಡೆಯನ್ನುಂಟು ಮಾಡುತ್ತೇವೆ” ಎಂದು ಹೇಳಿದರು.

ಡಿಎಸ್‌ಎಸ್ ಶಿವು ಮರಳಿಗ ಮಾತನಾಡಿ, “ಸೌಹಾರ್ದ ಸಾಮರಸ್ಯ ನಡಿಗೆಯನ್ನು ಒಂದು ಕಡೆ ನಡೆದಿದ್ದೇವೆ. ಆದರೆ ಜಿಲ್ಲಾಡಳಿತ ನುಡಿದಂತೆ ನಡೆಯುಲ್ಲಿ ವಿಫಲವಾಗಿದೆ. ಮದ್ದೂರಿನಲ್ಲಿ ಶಾಂತಿ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಸಾಮರಸ್ಯ ಮೂಡಿಸಲು ಯಾವುದೇ ಸಂಘ ಸಂಸ್ಥೆಗಳು ಮುಂದೆ ಬಂದರೆ ಅನುಮತಿ ನೀಡುವುದಾಗಿ ಮಂಡ್ಯ ಜಿಲ್ಲಾ ವರಿಷ್ಠಾಧಿಕಾರಿಗಳು ಹೇಳಿದ್ದ ಮಾತಿಗೆ ಇಂದು ತಪ್ಪಿದ್ದು, ಬ್ಯಾರಿಕೇಡ್ ಹಾಕುವ ಮೂಲಕ ಪ್ರತಿಭಟನಾಕಾರರನ್ನು ಹಿಮ್ಮೆಟ್ಟಿಸುವ ಪ್ರಯತ್ನ ಮಾಡಿದ್ದಾರೆ” ಎಂದು ದೂರಿದರು.
“ನಾವು ಗುಲಾಬಿ ಹಂಚಿ ಪ್ರೀತಿಯಿಂದ ಇರೋಣ ಸೌಹಾರ್ದತೆಯಿಂದ ಬಾಳೋಣ, ಸಹಬಾಳ್ವೆ ನಡೆಸೋಣ ಎನ್ನುವ ಸಹಧರ್ಮೀಯರಿಗೆ ಬ್ಯಾರಿಕೇಡ್ ಹಾಕಿ ರಸ್ತೆಗೆ ಹೋಗಬಾರದೆನ್ನುವ ನಿಮ್ಮ ನಿರ್ಬಂಧಕ್ಕೆ ನಮ್ಮ ಧಿಕ್ಕಾರ” ಎಂದು ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
“ಇವತ್ತಿನ ದಿನ ಕೋಮುಸತ್ಯಗಳು, ಇವರು ಸಭೆ ನಡೆಸುವುದನ್ನು ಏನಾದರೂ ಮಾಡಿ ತಡೆಯಬೇಕೆನ್ನುವ ಪಿತೂರಿ ಹೂಡಿ, ಇಲ್ಲದಿರುವುದನ್ನು ಹೆಚ್ಚೆಚ್ಚು ಹೇಳುವ ಮೂಲಕ ಅವರೇ ನಮಗೆ ಸಭೆಯ ಪ್ರಚಾರ ಮಾಡಿಕೊಟ್ಟರು. ಇದೊಂದೇ ಅಲ್ಲ, ಪೊಲೀಸ್ ಇಲಾಖೆ ಗಮನ ಹರಿಸಬೇಕು. ಹಿಂದೂ ಎನ್ನುವ ಹೆಸರೇಳಿಕೊಂಡು ಕೋಮು ಶಕ್ತಿಗಳು ತಮ್ಮ ಸ್ಟಾಟರ್ಜಿಯನ್ನು ಎಲ್ಲೆಡೆ ಬಿತ್ತುವ ಹುನ್ನಾರ ನಡೆಸುತ್ತಿವೆ. ಮೊದಲನೆಯದು ಶ್ರೀರಂಗಪಟ್ಟಣ, ಎರಡನೆಯದು ಕೆರಗೋಡು ಬಾವುಟದ ವಿಚಾರ, ಮೂರನೆಯದು ನಾಗಮಂಗಲ, ಇದೀಗ ಮದ್ದೂರನ್ನು ಗುರಿಯಾಗಿಸಿಕೊಂಡು ಮಂಡ್ಯ ನೆಲದ ಸಾಮರಸ್ಯವನ್ನು ಕೆಡಿಸಲು ಮುಂದಾಗಿದ್ದಾರೆ. ಮುಂದಿನ ಎಲ್ಲ ಕೆಡುಕುಗಳಿಗೂ ಇಲ್ಲಿನ ಜಿಲ್ಲಾಡಳಿತವೇ ನೇರ ಹೊಣೆ” ಎಂದು ಹೇಳಿದರು.
“ನಾವೆಲ್ಲರೂ ಸಮಾನರೆಂಬ ಅಂಬೇಡ್ಕರ್ ಆಶಯದಲ್ಲಿ ಹೇಳುತ್ತಿದ್ದೇವೆ. ಆದರೆ ಅವರು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಇಡೀ ಜಿಲ್ಲೆಯ ಸಾಮರಸ್ಯ ಕದಡುತ್ತಿರುವುದು ಖಂಡನೀಯ. ಯಾರ್ಯಾರೋ ಬಂದು ತೊಡೆ, ತೋಳು ಕಡಿತೀವೆಂದು ಹೇಳುತ್ತಾರೆ. ಪೊಲೀಸ್ ಇಲಾಖೆ ಅಂಥವರಿಗೆಲ್ಲ ಅನುಕೂಲ ಮಾಡಿಕೊಟ್ಟು, ಬಿಗಿ ಭದ್ರತೆಯಲ್ಲಿ ಅವರನ್ನು ಗಡಿಗೆ ಬಿಡುತ್ತದೆ. ಸೌಹಾರ್ದಯುತ ಬದುಕಿಗಾಗಿ ಹೋರಾಟ ಮಾಡಲು ಮುಂದಾದರೆ ಅವಕಾಶ ನೀಡದೆ ಬ್ಯಾರಿಕೇಡ್‌ಗಳನ್ನು ಅಡ್ಡಲಾಗಿಸುತ್ತಿದ್ದೀರಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಉದ್ಯೋಗ ಮಾಹಿತಿ | ಕೆಎಂಎಫ್ ಶಿಮುಲ್‌ನಲ್ಲಿ ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಆಹ್ವಾನ
ಚಿಂತಕರುಗಳಾದ ಭೂಮಿಗೌಡ, ಶಿವಸುಂದರ್, ಎಂ ವಿ ಕೃಷ್ಣ, ಪುರಸಭೆ ಮಾಜಿ ಅಧ್ಯಕ್ಷ ಎಂ ಸಿ ಬಸವರಾಜು, ಜನಪರ ಸಂಘಟನೆಗಳ ಮುಖಂಡರುಗಳಾದ ಕೆಂಪು ಗೌಡ್ರು, ದೇವಿ, ಯಶ್ವಂತ್ ಟಿ, ಅಂದಾನಿ ಸೋಮನಹಳ್ಳಿ, ಜಾಗೃತ ಕರ್ನಾಟಕದ ನಾಗೇಶ್ ಸೇರಿದಂತೆ ಯುವಜನ, ಮಹಿಳಾ, ದಲಿತ, ಕಾರ್ಮಿಕ, ರೈತ ಸಂಘಟನೆ ಹಾಗೂ ಎಲ್ಲ ಜನಪರ ಸಂಘಟನೆಗಳ ಕಾರ್ಯಕರ್ತರು ಇದ್ದರು.
