ಮದ್ದೂರಿನ ಹೊಸಕೆರೆಯಲ್ಲಿ ಮೆಗಾ ಕ್ಲಸ್ಟರ್ ಅಡಿಯಲ್ಲಿ ನಿರ್ಮಿಸಲಾಗಿರುವ ವಾಣಿಜ್ಯ ರೇಷ್ಮೆ ಹುಳು ಸಾಕಣೆ ಮನೆಗಳು ಮತ್ತು ಹಿಪ್ಪುನೇರಳೆ ತೋಟಗಳಿಗೆ ಮಧ್ಯಪ್ರದೇಶದ ರೇಷ್ಮೆ ಕೃಷಿ ಆಯುಕ್ತ ಮೋಹಿತ್ ಬುಂದಾಸ್ (IAS) ಮತ್ತು ಕೇಂದ್ರ ರೇಷ್ಮೆ ಮಂಡಳಿ ಬೆಂಗಳೂರಿನ ವಿಜ್ಞಾನಿ ಸಂತೋಷ್ ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹೊಸಕೆರೆ ಗ್ರಾಮದಲ್ಲಿ ರೇಷ್ಮೆ ಹುಳು ಸಾಕಣೆ ಮನೆಗಳು ಮತ್ತು ಹಿಪ್ಪುನೇರಳೆ ತೋಟದ ಚಟುವಟಿಕೆಗಳನ್ನು ಉತ್ತಮವಾಗಿ ನಿರ್ವಹಿಸುತ್ತಿರುವ ರೈತ ಪುಟ್ಟಲಿಂಗಯ್ಯ ಎಚ್ ಕೆ ಮತ್ತು ರೇಷ್ಮೆ ಕೃಷಿಕ ಹರೀಶ್ ಅವರು ರೇಷ್ಮೆ ಕೃಷಿಯಲ್ಲಿ ತಾವು ತೊಡಗಿಸಿಕೊಳ್ಳುತ್ತಿರುವ ಕಾರ್ಯ ಚಟುವಟಿಕೆಗಳನ್ನು ನೋಡಿ ಶ್ಲಾಘಿಸಿದರು.
ಮದ್ದೂರು ದ್ವಿತಳಿ ಮೆಗಾ ಕ್ಲಸ್ಟರ್‌ನ ವಿಸ್ತರಣಾ ಚಟುವಟಿಕೆಗಳ ವಿವರಗಳನ್ನು ಮದ್ದೂರು ಕೇಂದ್ರ ರೇಷ್ಮೆ ಮಂಡಳಿ-ಸಂಶೋಧನಾ ವಿಸ್ತರಣಾ ಕೇಂದ್ರ ಉಪ ಘಟಕದ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಶಿವಕುಮಾರ್ ಅವರು ಅಧಿಕಾರಿಗಳಿಗೆ ವಿವರಿಸಿದರು.
ಕೇಂದ್ರ ರೇಷ್ಮೆ ಮಂಡಳಿ ಅಭಿವೃದ್ಧಿಪಡಿಸಿದ ರೇಷ್ಮೆ ಹುಳುಗಳ ಹೊಸ ದ್ವಿತಳಿ, ಡಬಲ್ ಹೈಬ್ರಿಡ್‌ಗಳು, ಕ್ರಾಸ್‌ಬ್ರಿಡ್‌ಗಳು ಮತ್ತು ಹಿಪ್ಪುನೇರಳೆ ತಳಿಗಳು ಬಗ್ಗೆ ಮತ್ತು ಪ್ರಸ್ತುತ ಕ್ಷೇತ್ರದಲ್ಲಿ ಲಭ್ಯವಿರುವ ಕುಕೂನ್ ಇಳುವರಿ ಮತ್ತು ಪರಿಸರ ಸ್ನೇಹಿ ವಿಷಯದಲ್ಲಿ ಅಸ್ತಿತ್ವದಲ್ಲಿರುವ ರೂಲಿಂಗ್ ಹೈಬ್ರಿಡ್‌ಗಳಿಗಿಂತ ಉತ್ತಮವಾದ ಹೈಬ್ರಿಡ್‌ಗಳು ಕುರಿತು ಮಾಹಿತಿ ನೀಡುವಂತೆ ರೈತರು ಕೋರಿದರು.
ಮದ್ದೂರಿನ ಕೇಂದ್ರ ರೇಷ್ಮೆ ಮಂಡಳಿ-ಸಂಶೋಧನಾ ವಿಸ್ತರಣಾ ಕೇಂದ್ರ ಉಪ ಘಟಕದ ವಿಜ್ಞಾನಿ ಡಾ. ಶಿವಕುಮಾರ್, ಕೇಂದ್ರ ರೇಷ್ಮೆ ಮಂಡಳಿಯ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ಮೈಸೂರಿನ ತರಬೇತಿ ಸಂಸ್ಥೆ ರೇಷ್ಮೆ ಕೃಷಿ ರೈತರಿಗೆ ಹೊಸ ದ್ವಿತಳಿ, ಡಬಲ್ ಹೈಬ್ರಿಡ್‌ಗಳು (TT21•TT56, BFC1×BFC10 & G11×G19), ಕ್ರಾಸ್‌ಬ್ರಿಡ್ ಕಾವೇರಿ ಗೋಲ್ಡ್ (MV1xS8) ಮತ್ತು ಹೊಸ ಹಿಪ್ಪುನೇರಳೆ ತಳಿ (AGB-8) ಗಳು ಮತ್ತು ಹೊಸ ಉತ್ಪನ್ನ “ಮಿಸ್ಟರ್ ಪ್ರೊ” ಅನ್ನು ಅಭಿವೃದ್ಧಿಪಡಿಸಿದೆ ಇದು ಹಿಪ್ಪುನೇರಳೆ ಬೇರು ಕೂಳೆ ರೋಗವನ್ನು ನಿಯಂತ್ರಿಸಲು ಉಪಯುಕ್ತವಾಗಿದೆ ಮತ್ತು ಅವುಗಳ ಮಹತ್ವ ಮತ್ತು ಅನುಕೂಲಗಳ ಕುರಿತು ರೈತರಿಗೆ ಹಾಗೂ ಆಗಮಿಸಿದ ಅತಿಥಿಗಳಿಗೆ ವಿವರಿಸಿದರು.
ಇದನ್ನೂ ಓದಿ: ಮಂಡ್ಯ | ಹಿಂದುಳಿದ ಸಮುದಾಯದವರ ಬದುಕು ಕಟ್ಟಿಕೊಡಲು ಶ್ರಮಿಸಿದ ಮಹಾನ್ ನಾಯಕ ಡಿ.ದೇವರಾಜ ಅರಸು: ಜಿಲ್ಲಾಧಿಕಾರಿ ಡಾ.ಕುಮಾರ
ರೇಷ್ಮೆ ಕೃಷಿ ಉಪನಿರ್ದೇಶಕ ಸುಂದರ್ ರಾಜ್ ಮಾತನಾಡಿ, “ರೇಷ್ಮೆ ಕೃಷಿಕರು ರಾಜ್ಯ ಸರ್ಕಾರದೊಂದಿಗೆ ಕೇಂದ್ರ ಸರ್ಕಾರದ ಪ್ರಾಯೋಜಿತ ಸಿಲ್ಕ್ ಸಮಗ್ರ-2 ಯೋಜನೆಯಡಿ ಸಹಾಯಧನದೊಂದಿಗೆ ವಿವಿಧ ಪ್ರಯೋಜನಗಳನ್ನು ಅನೇಕ ರೈತರು ಪಡೆಯುತ್ತಿದ್ದಾರೆ. ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ” ಎಂದರು.
ಮದ್ದೂರು ರೇಷ್ಮೆ ಕೃಷಿ ಸಹಾಯಕ ನಿರ್ದೇಶಕ ಸುರೇಶ್ ಎಚ್. ಸಿ, ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ಪ್ರಶಾಂತ್ ಕುಮಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.