ಮದ್ದೂರು ಪಟ್ಟಣಕ್ಕೂ ಗೆಜ್ಜಲಗೆರೆಗೂ ಸುಮಾರು 5-6 ಕಿಲೋಮೀಟರ್ ಅಂತರವಿದೆ. ಈ ಮಧ್ಯೆ ಸಾವಿರಾರು ಎಕರೆ ಫಲವತ್ತಾದ ಕೃಷಿ ಭೂಮಿಯಿದೆ. ಗ್ರಾಮವನ್ನು ನಗರಸಭೆಗೆ ಸೇರಿಸುವ ಮೂಲಕ ಈ ಕೃಷಿ ಭೂಮಿಯನ್ನು ಡೆವಲಪ್‌ಮೆಂಟ್ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಲೇಔಟ್‌ಗಳನ್ನಾಗಿ ಪರಿವರ್ತಿಸಿ, ದುಡ್ಡು ಹೊಡೆಯುವ ಹುನ್ನಾರ ಇದರ ಹಿಂದಿದೆ ಎಂದು ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಗಂಭೀರ ಆರೋಪ ಮಾಡಿದರು.
ಮದ್ದೂರು ನಗರಸಭೆ ವ್ಯಾಪ್ತಿಗೆ ಗೆಜ್ಜಲಗೆರೆ ಗ್ರಾಮವನ್ನು ಸೇರ್ಪಡೆ ಮಾಡಿರುವುದನ್ನು ವಿರೋಧಿಸಿ ಗ್ರಾಮಸ್ಥರು ನಡೆಸುತ್ತಿರುವ ನಿರಂತರ ಧರಣಿಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಬೆಂಬಲ ಸೂಚಿಸಿದೆ. ಬುಧವಾರ(ಏಪ್ರಿಲ್ 22) ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು, ಸರ್ಕಾರದ ನಡೆ ಹಾಗೂ ಸ್ಥಳೀಯ ಶಾಸಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
“ಸ್ಥಳೀಯ ಶಾಸಕ ಉದಯ್ ʼಜೂಜು ಆಡುವ ಧರ್ಮರಾಜʼ ಎಂದು ಲೇವಡಿ ಮಾಡಿದ ರವಿಕೃಷ್ಣಾರೆಡ್ಡಿ, ಶಾಸಕರು ಗ್ರಾಮಸ್ಥರ ನಂಬಿಕೆಗೆ ದ್ರೋಹ ಮಾಡಿದ್ದಾರೆ. ಚುನಾವಣೆಯ ವೇಳೆ ʼಗಂಡಸರಿಗೆ ಲಿಕ್ಕರ್, ಹೆಂಗಸರಿಗೆ ಕುಕ್ಕರ್ʼ ಕೊಟ್ಟು ಪ್ರಜಾಪ್ರಭುತ್ವವನ್ನು ನಾಶಮಾಡಿರುವ ಇಂತಹ ರಾಜಕಾರಣಿಗಳಿಗೆ ಗ್ರಾಮಸ್ಥರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ” ಎಂದರು.
“ಗ್ರಾಮವನ್ನು ನಗರಸಭೆಗೆ ಸೇರಿಸಲು ಗ್ರಾಮ ಪಂಚಾಯಿತಿ ಅಥವಾ ಗ್ರಾಮ ಸಭೆಯ ಒಪ್ಪಿಗೆ ಇಲ್ಲದಿದ್ದರೂ, ಪಿಡಿಒ ಹಾಗೂ ಅಧಿಕಾರಿಗಳು ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾರೆ. 10 ಸದಸ್ಯರಿರುವ ಪಂಚಾಯಿತಿಯಲ್ಲಿ, ಬಹುತೇಕ ಸದಸ್ಯರು ಗೈರಾಗಿದ್ದರೂ ಒಪ್ಪಿಗೆ ಸೂಚಿಸಲಾಗಿದೆ ಎಂದು ಸುಳ್ಳು ನಿರ್ಣಯ ಬರೆದು ಸರ್ಕಾರಕ್ಕೆ ಕಳುಹಿಸುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ” ಎಂದು ಆರೋಪಿಸಿದರು.
“ಮಹಾತ್ಮ ಗಾಂಧೀಜಿಯವರ ‘ಗ್ರಾಮ ಸ್ವರಾಜ್ಯ’ ಹಾಗೂ ನಜೀರ್ ಸಾಬ್ ಅವರು ಜಾರಿಗೆ ತಂದ ಅಧಿಕಾರ ವಿಕೇಂದ್ರೀಕರಣದ ಆಶಯಗಳನ್ನು ಈ ನಡೆ ನಾಶ ಮಾಡುತ್ತಿದೆ. ಸ್ವಾವಲಂಬಿಯಾಗಿ ಬದುಕುತ್ತಿರುವ ರೈತರನ್ನು ಬೀದಿಗೆ ತಂದು, ಅವರಿಗೆ ಸರ್ಕಾರದ ಭಿಕ್ಷೆಗಾಗಿ ಕಾಯುವಂತೆ ಮಾಡುವ ವ್ಯವಸ್ಥೆ ನಿರ್ಮಾಣವಾಗುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದರು.
”ಕಳೆದ 121 ದಿನಗಳಿಂದ ಹೋರಾಟ ನಡೆಯುತ್ತಿದ್ದರೂ ಮುಖ್ಯಮಂತ್ರಿಗಳು, ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕರು ಸ್ಪಂದಿಸದಿರುವುದು ತೀವ್ರ ಖಂಡನೀಯ. ರೈತ ಮುಖಂಡರು, ರೈತ ಮಹಿಳಾ ಹೋರಾಟಗಾರ್ತಿ ಸುನಂದಾ ಜಯರಾಮ್ ಹಾಗೂ ಗ್ರಾಮಸ್ಥರೆಲ್ಲರೂ ಸೇರಿ ಶಾಸಕ ಉದಯ್ ಕೆ ಎಂ ಅವರಿಗೆ ನಿರಂತರವಾಗಿ ಫೋನ್ ಕರೆಗಳನ್ನು ಮಾಡುವ ಮೂಲಕ ಮನವಿ ಮಾಡಬೇಕು” ಎಂದು ಸಲಹೆ ನೀಡಿದರು.
“ಜನಪ್ರಿಯ ಶಾಸಕರಾಗಲು ಬಯಸುವವರು ಕನಿಷ್ಠ ನೈತಿಕತೆ ಪ್ರದರ್ಶಿಸಿ ತಮ್ಮ ನಿರ್ಧಾರ ಬದಲಿಸುತ್ತಾರೆಯೇ ನೋಡೋಣ” ಎಂದು ರವಿಕೃಷ್ಣಾರೆಡ್ಡಿ ಸವಾಲು ಹಾಕಿದರು. ಇದಕ್ಕೆ ಸಮ್ಮತಿಸಿದ ಗ್ರಾಮಸ್ಥರು, ಶಾಸಕರು ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ಇದನ್ನೂ ಓದಿ> ಮದ್ದೂರು | ನಗರಸಭೆಗೆ ಗ್ರಾಮಗಳ ಸೇರ್ಪಡೆ ವಿರೋಧಿಸಿ ಬೃಹತ್ ಪಂಜಿನ ಮೆರವಣಿಗೆ
ʼಸ್ವಾವಲಂಬಿ ರೈತ, ಸ್ವಾಭಿಮಾನಿ ರೈತʼ ಎನ್ನುವ ಘೋಷವಾಕ್ಯವನ್ನು ನೆನಪಿಸಿದ ರವಿಕೃಷ್ಣಾರೆಡ್ಡಿ, “ಎಷ್ಟೇ ಕಷ್ಟ ಬಂದರೂ ಗ್ರಾಮಸ್ಥರು ಎದೆಗುಂದದೆ ತಮ್ಮ ಅಸ್ಮಿತೆ ಉಳಿಸಿಕೊಳ್ಳಲು ಹೋರಾಟ ಮುಂದುವರೆಸಬೇಕು. ಈ ಹೋರಾಟದಲ್ಲಿ ತಾವು ಹಾಗೂ ತಮ್ಮ ಪಕ್ಷ ಸದಾ ಬೆಂಬಲವಾಗಿ ನಿಲ್ಲಲಿದೆ” ಎಂದು ಭರವಸೆ ನೀಡಿದರು.
ಇದೇ ಹೊತ್ತಿನಲ್ಲಿ, ಸ್ಥಳೀಯ ಶಾಸಕರ ಕುಮ್ಮಕ್ಕಿನಿಂದಲೋ ಇಲ್ಲವೇ ಕಾಕತಾಳೀಯವೋ ಎಂಬಂತೆ ಮದ್ದೂರು ನಗರಸಭೆ ಅಧಿಕಾರಿಗಳು ಗೆಜ್ಜಲಗೆರೆ ಗ್ರಾಮದ ಕುಡಿಯುವ ನೀರು, ಗೃಹಬಳಕೆ ಹಾಗೂ ಜಾನುವಾರುಗಳ ಬಳಕೆಯ ನೀರಿನ ಸಂಪರ್ಕವನ್ನು ಕಡಿತಗೊಳಿಸಿದ್ದರು. ಇದರಿಂದ ಕೆರಳಿದ ರವಿಕೃಷ್ಣಾರೆಡ್ಡಿ ನೇತೃತ್ವದ ನಿಯೋಗವು ಮದ್ದೂರು ನಗರಸಭೆಯ ಆಯುಕ್ತೆ ರಾಧಿಕಾ ಅವರನ್ನು ಭೇಟಿ ಮಾಡಿತು.

“ಗೆಜ್ಜಲಗೆರೆ ಗ್ರಾಮಸ್ಥರ ಹೋರಾಟ ಸರ್ಕಾರದ ಅವೈಜ್ಞಾನಿಕ ನಿರ್ಣಯಗಳ ವಿರುದ್ಧ ನಡೆಯುತ್ತಿದೆಯೇ ಹೊರತು ನಗರಸಭೆಯ ಅಧಿಕಾರಿಗಳ ವಿರುದ್ಧವಲ್ಲ. ಮೂಲಭೂತ ಸೌಕರ್ಯವಾದ ಕುಡಿಯುವ ನೀರನ್ನು ತಡೆಯುವುದು ಅಮಾನವೀಯ” ಎಂದು ಎಚ್ಚರಿಸಿ, ಕೂಡಲೇ ನೀರಿನ ಸಂಪರ್ಕವನ್ನು ಸರಿಪಡಿಸುವಂತೆ ಆಯುಕ್ತರನ್ನು ಆಗ್ರಹಿಸಿದರು.
ಕೆಆರ್‌ಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ರಮೇಶ್ ಗೌಡ ಜಿ ಎಂ, ನಿಕಟ ಪೂರ್ವ ಮಂಡ್ಯ ಜಿಲ್ಲಾ ಉಸ್ತುವಾರಿ ಅರುಣ ಕುಮಾರ ಹೆಚ್ ಮಲ್ಲೇಗೌಡ, ನರಸಿಂಹಮೂರ್ತಿ (ರಾಜ್ಯ ಕಾರ್ಯದರ್ಶಿ), ನಾಗರಾಜು ಡಿ.ಜಿ (ಮಂಡ್ಯ ಜಿಲ್ಲಾಧ್ಯಕ್ಷ), ಮಲ್ಲೇಶ ಹೆಬ್ಬಕವಾಡಿ (ಜಿಲ್ಲಾ ಉಪಾಧ್ಯಕ್ಷ), ಚಂದ್ರು ಕೀಲಾರ (ಜಿಲ್ಲಾ ಪ್ರಧಾನ ಕಾರ್ಯದರ್ಶಿ), ಮಹದೇವ ಕೊಳಗೆರೆ (ಮದ್ದೂರು ತಾಲೂಕು ಅಧ್ಯಕ್ಷ), ಮಹೇಂದ್ರ ಕುಮಾರ್ ಕೆ.ಎಂ (ಪ್ರಧಾನ ಕಾರ್ಯದರ್ಶಿ), ಪ್ರಮೋದ್ ಎಸ್ (ಯುವ ಘಟಕದ ರಾಜ್ಯ ಕಾರ್ಯದರ್ಶಿ), ರಾಜು (ಜಿಲ್ಲಾ ರೈತ ಘಟಕದ ಅಧ್ಯಕ್ಷ), ಹರೀಶ್ ಕಂಪಲಾಪುರ (ಜಿಲ್ಲಾ ರೈತ ಘಟಕದ ಪ್ರಧಾನ ಕಾರ್ಯದರ್ಶಿ), ದೀಪಿಕಾ (ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿ), ಅನಿತಾ (ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ) ಮುಂತಾದವರು ಪಾಲ್ಗೊಂಡಿದ್ದರು.
ಮಂಡ್ಯ ಜಿಲ್ಲೆಯ ಎಲ್ಲ ತಾಲೂಕು ಪದಾಧಿಕಾರಿಗಳು, ಮೈಸೂರು, ಚಾಮರಾಜನಗರ, ತುಮಕೂರು, ಬೆಂಗಳೂರು ದಕ್ಷಿಣ(ರಾಮನಗರ) ಜಿಲ್ಲೆಯ ಹಲವು ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹಾಜರಿದ್ದು, ಗ್ರಾಮಸ್ಥರ ಹೋರಾಟಕ್ಕೆ ಬಲ ತುಂಬಿದರು. ಕೆಆರ್‌ಎಸ್ ಪಕ್ಷದ ನೂರಾರು ಕಾರ್ಯಕರ್ತರೊಂದಿಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಹಲವು ಪದಾಧಿಕಾರಿಗಳು ಬೆಂಬಲ ಸೂಚಿಸಿದರು.






