ಬಹರೈನ್‌ನಲ್ಲಿ ನಡೆಯಲಿರುವ 3ನೇ ಏಷ್ಯನ್ ಯೂತ್ ಗೇಮ್ಸ್‌ನಲ್ಲಿ ಪೆಂಕಾಕ್ ಸಿಲಾತ್ ಕ್ರೀಡೆಯಲ್ಲಿನ ಆಯ್ಕೆಗಾಗಿ ನಡೆದ ಟ್ರಯಲ್ಸ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ವಿದ್ಯಾರ್ಥಿನಿ ಆಯಿಶಾ ಹೈಫಾ ಆಯ್ಕೆಯಾಗಿದ್ದಾರೆ.
ತೊಕ್ಕೊಟ್ಟು ಸಮೀಪದ ಬಬ್ಬುಕಟ್ಟೆಯ ಹಿರಾ ಮಹಿಳಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿರುವ ಆಯಿಶಾ ಹೈಫಾ ಏಷ್ಯನ್ ಯೂತ್ ಗೇಮ್ಸ್‌ಗೆ ಆಯ್ಕೆಯಾಗಿರುವ ಪ್ರತಿಭಾನ್ವಿತೆ.
ಸೆ.30ರಂದು ಜಮ್ಮು- ಕಾಶ್ಮೀರದ ಶ್ರೀನಗರದ ಎಸ್.ಕೆ. ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಿದ್ದ ಆಯ್ಕೆ ಟ್ರಯಲ್‌ನಲ್ಲಿ ಉತ್ತೀರ್ಣರಾದ ಹಿನ್ನೆಲೆಯಲ್ಲಿ ಬಹರೈನ್‌ನಲ್ಲಿ ನಡೆಯಲಿರುವ ಗೇಮ್ಸ್‌ಗೆ ಆಯ್ಕೆಯಾಗಿದ್ದಾರೆ.

ಮಂಜನಾಡಿ ಸಮೀಪದ ಕಿನ್ಯ ಗ್ರಾಮದ ಮೊಯ್ದಿನ್ ಹನೀಫ್ ಹಾಗೂ ಫಾತಿಮಾ ದಂಪತಿಯ ಪುತ್ರಿಯಾಗಿರುವ ಆಯಿಷಾ ಹೈಫಾ, ಈ ಹಿಂದೆ ಪೆಂಕಾಕ್ ಸಿಲಾತ್ ಯೂತ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದರು.

ಇವರಿಗೆ ಟೀಂ ಎಂ. ಟೈಗರ್ಸ್‌ನ ಮಾಸ್ಟರ್ ಆಶಿಫ್, ಮಾಸ್ಟರ್ ಅಯಾಝ್ ಬರುವಾ ತರಬೇತಿ ನೀಡುತ್ತಾ ಬಂದಿದ್ದಾರೆ.
ಪೆಂಕಾಕ್ ಸಿಲಾತ್ ಕ್ರೀಡೆ ಅಂದರೆ ಏನು?
ಪೆಂಕಾಕ್ ಸಿಲಾತ್ (Pencak Silat) ಎಂದರೆ ಇಂಡೋನೇಷಿಯಾದ ಮೂಲದ ಕರಾಟೆ ಶೈಲಿಗಳ ಸಮೂಹವಾಗಿದೆ. ಇದು ದಕ್ಷಿಣ ಪೂರ್ವ ಏಷ್ಯಾದ ಮಲಯ್ ಆರ್ಚಿಪೆಲಾಗೋದಿಂದ ಬಂದಿದೆ. ಈ ಕ್ರೀಡೆ ಸಂಪೂರ್ಣ ದೇಹದ ಹೋರಾಟದ ರೂಪವಾಗಿದ್ದು, ಹೊಡೆತಗಳು, ಹಿಡಿತಗಳು, ಎಸೆತಗಳು ಮತ್ತು ಆಯುಧಗಳನ್ನು ಕೂಡ ಬಳಸಲಾಗುತ್ತದೆ. ಪ್ರತಿ ಭಾಗವನ್ನೂ ದಾಳಿ ಮಾಡಲು ಬಳಸುತ್ತದೆ ಮತ್ತು ದೇಹದ ಎಲ್ಲಾ ಭಾಗಗಳನ್ನು ಉಪಯೋಗಿಸಲಾಗುತ್ತದೆ.
ಇದು ಕೇವಲ ದೈಹಿಕ ರಕ್ಷಣೆಗಾಗಿಯೇ ಮಾತ್ರವಲ್ಲದೆ, ಕಲೆ, ಸ್ವ-ರಕ್ಷಣೆಯಾಗಿಯೂ ಬಳಸಬಹುದು.
ಯುನೆಸ್ಕೋ ಪೆಂಕಾಕ್ ಸಿಲಾತ್ ಕ್ರೀಡೆಯನ್ನು 2019ರಲ್ಲಿ ‘ಮಾನವತೆಯ ಅಗೋಚರ ಸಾಂಸ್ಕೃತಿಕ ಪರಂಪರೆ’ಯ ಪಟ್ಟಿಗೆ ಸೇರಿಸಿದೆ. ಕ್ರೀಡೆಯಾಗಿ, ಇದು SEA ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ನಂತಹ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಆಯೋಜಿಸಲಾಗುತ್ತಿದೆ. ಇದು ಇಂಡೋನೇಷಿಯಾ, ಮಲೇಷಿಯಾ, ಬ್ರುನೈ, ಸಿಂಗಾಪುರ್ ಮತ್ತು ಇತರ ದಕ್ಷಿಣ ಪೂರ್ವ ಏಷ್ಯಾ ದೇಶಗಳಲ್ಲಿ ಸಾಮಾನ್ಯವಾಗಿದೆ. ಭಾರತದಲ್ಲಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಹೆಚ್ಚು ಪ್ರಚಲಿತಕ್ಕೆ ಬಂದಿದೆ. ಈ ಕ್ರೀಡೆಯನ್ನು ಇಂಡೋನೇಶಿಯಾದ ಶಾಲೆಗಳಲ್ಲಿ ಸ್ವ-ರಕ್ಷಣೆ ಕಾರ್ಯಕ್ರಮವಾಗಿ ತರಬೇತಿ ನೀಡಲಾಗುತ್ತಿದೆ.