ಮಂಗಳೂರು ನಗರದ ಉರ್ವಾ ಸ್ಟೋರ್‌ನಲ್ಲಿರುವ ತುಳು ಸಾಹಿತ್ಯ ಅಕಾಡೆಮಿಯ ತುಳು ಭವನದಲ್ಲಿ ಸೆಪ್ಟೆಂಬರ್ 20ರ ಶನಿವಾರ ಮಧ್ಯಾಹ್ನ 2.30ಕ್ಕೆ ದಸರಾ ಬಹುಭಾಷಾ ಕವಿಗೋಷ್ಠಿ ನಡೆಯಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ತಿಳಿಸಿದ್ದಾರೆ.
ಮಂಗಳೂರು ನಗರದಲ್ಲಿ ಪತ್ರಿಕಾ ಪ್ರಕಟಣೆಗೆ ತಿಳಿಸಿರುವ ಅವರು, “ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತುಳು ಪರಿಷತ್ ಹಾಗೂ ಮಯೂರಿ ಫೌಂಡೇಶನ್ ಜಂಟಿಯಾಗಿ ಐದನೇ ವರ್ಷದ ದಸರಾ ಬಹುಭಾಷಾ ಕವಿಗೋಷ್ಠಿಯನ್ನು ಆಯೋಜಿಸಿದ್ದು, ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯ 13 ಭಾಷೆಗಳ ಕವಿಗಳು ಕವಿತೆ ವಾಚಿಸಲಿದ್ದಾರೆ” ಎಂದರು.
“ಬಹುಭಾಷಾ ಕವಿ ವಿಲ್ಸನ್ ಕಟೀಲು ಅವರು ಕವಿಗೋಷ್ಠಿ ಉದ್ಘಾಟಿಸುವರು. ಹಿರಿಯ ಪ್ರರ್ತಕರ್ತರು ಹಾಗೂ ಸಾಹಿತಿ ಮಲಾರ್ ಜಯರಾಮ್ ರೈ ಅವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸುವರು. ಮಯೂರಿ ಫೌಂಡೇಶನ್ ಅಧ್ಯಕ್ಷ ಜಯ ಕೆ ಶೆಟ್ಟಿ ಮುಂಬಯಿ, ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ, ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಚಂಚಲ ತೇಜೋಮಯ ಮುಖ್ಯ ಅತಿಥಿಯಾಗಿ ಭಾಗವಹಿಸುವರು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿಂತಾಮಣಿ | ಶಿಕ್ಷಕರ ಸಮಸ್ಯೆ ಪರಿಹರಿಸುವಂತೆ ಉನ್ನತ ಶಿಕ್ಷಣ ಸಚಿವರಿಗೆ ಮನವಿ
“ಚೆನ್ನಪ್ಪ ಅಳಿಕೆ(ತುಳು), ಮಂಜುಳಾ ಶೆಟ್ಟಿ(ತುಳು), ಸತೀಶ್ ಪಡುಬಿದ್ರಿ(ಕೊರಗ ಭಾಷೆ), ಸದಾನಂದ ನಾರಾವಿ(ಕನ್ನಡ), ಕವಿತಾ ಅಡೂರು(ಶಿವಳ್ಳಿ ತುಳು), ರತ್ನಾ ಕೆ ಭಟ್ ತಲಂಜೇರಿ(ಹವ್ಯಕ ಕನ್ನಡ), ಕರುಣಾಕರ್ ಬಳ್ಕೂರು(ಕುಂದಗನ್ನಡ) ಶಮೀಮಾ ಕುತ್ತಾರ್(ಬ್ಯಾರಿ), ಉದಯ ಭಾಸ್ಕರ್(ಅರೆಭಾಷೆ), ಡಾ. ಮೀನಾಕ್ಷಿ ರಾಮಚಂದ್ರ(ಮಲೆಯಾಳಂ), ಬಾಲಕೃಷ್ಣ ಬೇರಿಕೆ(ಮರಾಠಿ), ರಾಧಿಕಾ ಪೈ(ಕೊಂಕಣಿ), ಚಂದ್ರಕಾಂತ್ ಗೋರೆ(ಚಿತ್ಪಾವನಿ), ಮೀರಾ ಭಟ್(ಕರಾಡ) ಅವರು ಕವಿಗೋಷ್ಠಿಯಲ್ಲಿ ಭಾಗವಹಿಸುವರು ಎಂದು ಮಾಹಿತಿ ನೀಡಿದರು.