ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ 2025-26ನೇ ಸಾಲಿನ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಕುಸ್ತಿ, ನೆಟ್ ಬಾಲ್, ಬಾಕ್ಸಿಂಗ್, ವೇಯ್ಟ್ ಲಿಫ್ಟಿಂಗ್, ಬ್ಯಾಡ್ಮಿಂಟನ್, ವಾಲಿಬಾಲ್ ಮತ್ತು ಬಾಸ್ಕೆಟ್‍ಬಾಲ್ ಕ್ರೀಡೆಗಳನ್ನು ಮಂಗಳೂರು ನಗರದ ಮಂಗಳಾ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 13 ಮತ್ತು 14 ರಂದು ಬೆಳಿಗ್ಗೆ 9 ಗಂಟೆಯಿಂದ ಆಯೋಜಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಈಗಾಗಲೇ ವಿವಿಧ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಹಾಗೂ ತಂಡ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಮೈಸೂರು ವಿಭಾಗದ 8 ಜಿಲ್ಲೆಗಳ (ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಚಾಮರಾಜ ನಗರ, ಮಂಡ್ಯ ಜಿಲ್ಲೆ) ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳು ಈ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ.
ಇದನ್ನೂ ಓದಿ: ಮಂಗಳೂರು | ಗುಂಡಿಗೆ ಬಿದ್ದು ಮಹಿಳೆ ಸಾವು ಪ್ರಕರಣ; ಕಾಂಗ್ರೆಸ್‌ನಿಂದ ಪ್ರತಿಭಟನೆ
ಸ್ಪರ್ಧೆಗಳು ನಡೆಯುವ ದಿನಾಂಕ, ಸ್ಥಳ: ಸೆಪ್ಟೆಂಬರ್ 13 ರಂದು ಕುಸ್ತಿ, ನೆಟ್ ಬಾಲ್, ವೇಯ್ಟ್ ಲಿಫ್ಟಿಂಗ್ ಮತ್ತು ಬಾಕ್ಸಿಂಗ್–ಮಂಗಳಾ ಕ್ರೀಡಾಂಗಣ/ಯುಎಸ್.ಮಲ್ಯ ಒಳಾಂಗಣ ಕ್ರೀಡಾಂಗಣ. ಸೆ.13 ರಂದು ಶಟಲ್ ಬ್ಯಾಡ್ಮಿಂಟನ್-ಉರ್ವಾ ಒಳಾಂಗಣ ಕ್ರೀಡಾಂಗಣ. ಸೆ.14 ರಂದು ವಾಲಿಬಾಲ್, ಬಾಸ್ಕೆಟ್‍ಬಾಲ್ – ಮಂಗಳಾ ಕ್ರೀಡಾಂಗಣ/ ಯು.ಎಸ್. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.
ನೇರವಾಗಿ ವಿಭಾಗ ಮಟ್ಟದಲ್ಲಿ ನಡೆಯುವ ವೇಯ್ಟ್ ಲಿಫ್ಟಿಂಗ್ ಮತ್ತು ವುಷು ಸ್ಪರ್ಧೆಗಳಲ್ಲಿ ಭಾಗವಹಿಸುವ 8 ಜಿಲ್ಲೆಯ ಕ್ರೀಡಾಪಟುಗಳು ತಮ್ಮ ವಿವರಗಳನ್ನು ಮೊಬೈಲ್ ಆ್ಯಪ್ ಅಥವಾ ವೆಬ್ ಪೋರ್ಟಲ್ https://dasaracmcup.2025.etrpindia.com/KA-sports ಅಥವಾ ಕ್ಯೂ ಆರ್ ಕೋಡ್‍ನಲ್ಲಿ ಭರ್ತಿಮಾಡಿ ನೋಂದಾವಣೆ ಮಾಡಿಕೊಳ್ಳಬೇಕು. ಭಾಗವಹಿಸುವ ಕ್ರೀಡಾಪಟುಗಳು ಸ್ಪರ್ಧೆಗಳು ನಡೆಯುವ ದಿನಾಂಕದಂದು ಬೆಳಿಗ್ಗೆ 8.30ಗಂಟೆಗೆ ವರದಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರನ್ನು (ದೂರವಾಣಿ ಸಂಖ್ಯೆ: 0824-2451264) ಸಂಪರ್ಕಿಸಬಹುದು.
