ಮಂಗಳೂರಿನ ಸರ್ಕಾರಿ ಕಂಪೆನಿಯೊಂದರ ಉದ್ಯೋಗಿ ಖರೀದಿಸಿದ್ದ ಓಲಾ ಎಲೆಕ್ಟ್ರಿಕ್ ಸ್ಕೂಟರ್ ನಿರಂತರ ದೋಷ ತೋರಿದ ಹಿನ್ನೆಲೆಯಲ್ಲಿ, ಗ್ರಾಹಕರ ನ್ಯಾಯಾಲಯ ಓಲಾ ಎಲೆಕ್ಟ್ರಿಕ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಭಾರೀ ದಂಡ ವಿಧಿಸಿದೆ.
ಸರ್ಕಾರಿ ಉದ್ಯೋಗಿ ಉದಯ್ ಕುಮಾರ್ ಬಿ ಸಿ ಅವರು 1.17 ಲಕ್ಷ ರೂ ಪಾವತಿಸಿ ಓಲಾ ಸ್ಕೂಟರ್ ಖರೀದಿಸಿದ್ದರು. ಆದರೆ, ಖರೀದಿಸಿದ ಕೆಲವೇ ದಿನಗಳಲ್ಲಿ ಸ್ಕೂಟರ್ ರಸ್ತೆ ಮಧ್ಯದಲ್ಲಿ ಹಠಾತ್ತನೆ ನಿಲ್ಲುತ್ತಿತ್ತು. ಮೊದಲ ಬಾರಿಗೆ ದೂರು ದಾಖಲಿಸಿದಾಗ ಕಂಪೆನಿಯೇ ರಿಪೇರಿ ಮಾಡಿದರೂ, ಸಮಸ್ಯೆ ಮರುಕಳಿಸುತ್ತಲೇ ಇತ್ತು. ರಿಪೇರಿ ನೆಪದಲ್ಲಿ ಕಂಪೆನಿಯೇ ವಾಹನವನ್ನು ತನ್ನ ಬಳಿಯಲ್ಲಿಟ್ಟುಕೊಂಡರೂ ಶಾಶ್ವತ ಪರಿಹಾರ ನೀಡಲು ವಿಫಲವಾಯಿತು.
ಇದರಿಂದ ಬೇಸತ್ತ ಗ್ರಾಹಕರು ಕಾನೂನು ನೋಟಿಸ್ ನೀಡಿ ಬಳಿಕ ಗ್ರಾಹಕರ ಪರಿಹಾರ ಆಯೋಗವನ್ನು ಸಂಪರ್ಕಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯ, ಓಲಾ ಕಂಪೆನಿ ಸೇವಾನ್ಯೂನ್ಯತೆ ತೋರಿದೆ ಮತ್ತು ದೋಷಯುಕ್ತ ಉತ್ಪನ್ನ ಮಾರಾಟ ಮಾಡಿದೆ ಎಂದು ತೀರ್ಪು ನೀಡಿದೆ.
ಇದನ್ನೂ ಓದಿ: ಮಂಗಳೂರು | ಸಾಮಾಜಿಕ ಜವಾಬ್ದಾರಿ ಕವಿಗಳ ಆಶಯವಾಗಬೇಕು: ಬಹುಭಾಷಾ ಕವಿ ವಿಲ್ಸನ್ ಕಟೀಲ್
ಕಂಪೆನಿಯು 45 ದಿನಗಳಲ್ಲಿ ಸ್ಕೂಟರ್‌ನ್ನು ಸಂಚಾರ ಯೋಗ್ಯವಾಗಿ ರಿಪೇರಿ ಮಾಡಬೇಕು ಅದು ಸಾಧ್ಯವಾಗದಿದ್ದರೆ, 45 ದಿನಗಳಲ್ಲಿ ಶೇಕಡಾ 6ರಷ್ಟು ಬಡ್ಡಿಯೊಂದಿಗೆ 1.17 ಲಕ್ಷ ರೂ.ಗಳನ್ನು ಗ್ರಾಹಕರಿಗೆ ಮರುಪಾವತಿಸಬೇಕು. ಜೊತೆಗೆ, ಸೇವಾನ್ಯೂನ್ಯತೆಗೆ 10,000 ರೂ. ದಂಡ ಹಾಗೂ ಪ್ರಕರಣದ ವೆಚ್ಚವಾಗಿ 5,000 ರೂಗಳನ್ನು ಪಾವತಿಸಬೇಕು ಎಂದು ಆದೇಶಿಸಿದೆ.