ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದವರು ಮತ್ತು ಹೆಗ್ಗಡೆ ಅವರು ಅಧ್ಯಕ್ಷರಾಗಿರುವ ಅನೇಕ ಸಂಸ್ಥೆಗಳಲ್ಲಿಆಗಿರುವ ಅಕ್ರಮ ಮತ್ತು ಕಾನೂನು ಉಲ್ಲಂಘನೆಯಾಗಿದೆ ಎಂದು ಮಾಡಿರುವ ಆರೋಪಗಳೇನಾದರೂ ಸುಳ್ಳಾದರೆ, ಹೆಗ್ಗಡೆಯವರ ಕಾಲಿಗೆ ಬೀಳುತ್ತೇವೆ ಎಂದು ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ್ ನಾಯಕ ಹೇಳಿದರು.
ಮಂಗಳೂರು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಭೂ ಕಬಳಿಕೆ ಮತ್ತು ಅತಿಕ್ರಮಣ, ಶ್ರೀಕ್ಷೇತ್ರದ ಮೈಕ್ರೋಫೈನಾನ್ಸ್, ದುಬಾರಿ ಬಡ್ಡಿದಂಧೆ, ಧರ್ಮಸ್ಥಳ ದೇವಸ್ಥಾನದ ಇತಿಹಾಸ, ಆದಾಯ, ಆಸ್ತಿ ಕುರಿತ ದಾಖಲೆಗಳು, ಹೆಗ್ಗಡೆ ಸಂಸ್ಥೆಗಳಿಂದ ಕಾರ್ಮಿಕರಿಗೆ ವಂಚನೆ, ಸೌಜನ್ಯಾ ಕೊಲೆ, ‘ಆತ್ಮಹತ್ಯೆ’ ಪಟ್ಟಿಗೆ ಕೊಲೆಗಳು, ಮಹಿಳಾ ದೌರ್ಜನ್ಯಗಳು, ಬೆಳ್ತಂಗಡಿ ಸಮಾಜ ಮಂದಿರ ನಾಶ ಮತ್ತು ಭೂಕಬಳಿಕೆ, ಒತ್ತುವರಿಯ ದಾಖಲೆಗಳು, ರುಡ್‌ಸೆಟ್ ಸತ್ಯ ಇತಿಹಾಸ, ಅಸತ್ಯಗಳ ದಾಖಲೆ, ಅನುದಾನ ದುರ್ಬಳಕೆ, ಶೋಷಣೆ, ಹೆಗ್ಗಡೆ ವಾದಿ-ಪ್ರತಿವಾದಿಯಾಗಿರುವ 334 ಕೋರ್ಟ್ ಕೇಸ್‌ಗಳು ಇವೆಲ್ಲಾ ಆರೋಪಗಳು ಸುಳ್ಳು ಎಂದಾರೆ ನಾವು ಅವರ ಕಾಲಿಗೆ ಬೀಳುತ್ತೇವೆ” ಎಂದು ಸವಾಲು ಹಾಕಿದರು.
“ಈ ಹಿಂದೆ ಮುಖ್ಯಮಂತ್ರಿಗಳು ಮತ್ತು ಸಚಿವರು ಹೆಗ್ಗಡೆಯವರು ಕಾನೂನು ಉಲ್ಲಂಘನೆ ಮಾಡಿರುವ ಬಗ್ಗೆ ಸಮಗ್ರ ತನಿಖೆ ನಡೆಸಲು ನಿರ್ದೇಶನ ನೀಡಿದ್ದರೂ ಈ ವರೆಗೆ ತನಿಖೆಯಾಗಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಶೇಷ ತನಿಖಾ ತಂಡವನ್ನು ರಚಿಸಿ ಸಮಗ್ರ ತನಿಖೆ ಮಾಡಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ: ಸಾಕ್ಷಿದಾರ ಪ್ರದೀಪ್ ಹೇಳಿಕೆ ಕೋರ್ಟ್‌ನಲ್ಲಿ ದಾಖಲು
ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಮಾತನಾಡಿ, “ವೀರೇಂದ್ರ ಹೆಗ್ಗಡೆ ವಿರುದ್ಧದ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷ ತನಿಖಾ ತಂಡ ರಚಿಸಬೇಕು. ಹೆಗ್ಗಡೆ ಅವರು ಹಣದ ಬಲದಿಂದ ನಿರಂತರವಾಗಿ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ. ಅವರಿಗೆ ಯಾವುದೇ ಕಾನೂನಿನ ಭಯವಿಲ್ಲ. ಅವರು ಹಣಬಲದಿಂದ ಹೀಗೆ ಮಾಡುತ್ತಿದ್ದಾರೆ. ಅವರ ಹಣದ ಸಂಪನ್ಮೂಲ ಯಾವುದು ಎಂದು ತನಿಖೆಯಿಂದ ಮಾತ್ರ ಬಹಿರಂಗವಾಗಲು ಸಾಧ್ಯ. ಆದರಿಂದ ಶೀಘ್ರವಾಗಿ ಹೆಗ್ಗಡೆ ಮತ್ತು ಅವರ ಕುಟುಂಬದ ಮೇಲೆ ಇರುವ ಆರೋಪಗಳಿಗೆ ಅವರು ಉತ್ತರ ನೀಡಬೇಕು. ಅವರು ಪಾರ್ಲಿಮೆಂಟ್ ಸದಸ್ಯರು. ಅವರನ್ನು ಪ್ರಶ್ನಿಸುವ ಅಧಿಕಾರ ಸಾರ್ವಜನಿಕರಿಗೆ ಇದೆ. ಇದರಿಂದ ಸಾರ್ವಜನಿಕರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವುದು ಅವರ ಕರ್ತವ್ಯವಾಗಿದೆ. ನೀವು ಎಲ್ಲಿ ಬೇಕಾದರೂ ಸಭೆ ನಡೆಸಿ ಅಲ್ಲಿಗೆ ನಮ್ಮನ್ನು ಕರೆಯಿರಿ, ನಾವು ಅಲ್ಲಿಗೆ ಬಂದು ಪ್ರಶ್ನೆಗಳನ್ನು ಕೇಳುತ್ತೇವೆ. ನೀವು ಮೇಲೆ ಇರುವ ಆರೋಪಗಳಿಗೆ ಉತ್ತರ ನೀಡಿ. ಆರೋಪಗಳಿಗೆ ಉತ್ತರ ನೀಡದಿದ್ದರೆ ನಾವು ಮಾಡಿದ ಆರೋಪಗಳೆಲ್ಲವೂ ಸತ್ಯವೆಂದು ಒಪ್ಪಿಕೊಂಡ ಹಾಗೇ ಆಗುತ್ತದೆ” ಎಂದು ಗಂಭೀರ ಆರೋಪ ಮಾಡಿದರು.