ಕಟೀಲು ಸಮೀಪದ ಕೊಂಡೆಮೂಲ ಎಂಬಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ‘ಗೋಣಿಚೀಲ’ಕ್ಕಾಗಿ ನಡೆದ ಜಗಳದ ಬಗ್ಗೆ ಸರ್ಕಾರವೇ ಸ್ವಷ್ಟನೇ ನೀಡಬೇಕಿತ್ತು. ಆದರೆ ಇಲ್ಲಿಯವರೆಗೂ ಆಹಾರ ಇಲಾಖೆಯ ಅಧಿಕಾರಿಗಳಾಗಲೀ ಅಥವಾ ಸರ್ಕಾರ ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ. ಇದರಿಂದಾಗಿ ರಾಜ್ಯದ ಜನತೆಗೆ ನ್ಯಾಯಬೆಲೆ ಅಂಗಡಿ ಬಗ್ಗೆ ತಪ್ಪು ಸಂದೇಶ ಹೋಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾ ಅಧ್ಯಕ್ಷ ಕೇಶವಮೂರ್ತಿ ನೋವು ತೋಡಿಕೊಂಡಿದ್ದಾರೆ.
ಬುಧವಾರ ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯಕ್ತಿಯೊಬ್ಬ ಪಡಿತರ ಪಡೆಯಲು ಬಂದ ಸಂದರ್ಭದಲ್ಲಿ ಗೋಣಿಚೀಲವನ್ನು ಉಚಿತವಾಗಿ ನೀಡಬೇಕು ಎಂದು ಬೆದರಿಸಿ ವಿಡಿಯೋ ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಗೋಣಿಚೀಲವೂ ಅಂಗಡಿ ಮಾಲೀಕರಿಗೆ ಸೇರಿದ್ದು ಎಂದು ಸರ್ಕಾರವೇ 2018ರಲ್ಲಿ ಆದೇಶ ನೀಡಿದೆ. ಇದನ್ನು ತಿಳಿಯದೇ ವ್ಯಕ್ತಿ ಅಂಗಡಿ ಮಾಲೀಕರನ್ನು ಬೆದರಿಸಿ ವಿಡಿಯೋ ಮಾಡಿಕೊಂಡು ಜಾಲತಾಣದಲ್ಲಿ ಹರಿಬಿಟ್ಟು ನ್ಯಾಯಬೆಲೆ ಅಂಗಡಿ ಬಗ್ಗೆ ತಪ್ಪು ಸಂದೇಶ ನೀಡಿದ್ದಾನೆ. ಇದರ ಬಗ್ಗೆ ಆಹಾರ ಇಲಾಖೆಯ ಅಧಿಕಾರಿಗಳು ಪ್ರಕಟಣೆ ನೀಡಿ ಸ್ಪಷ್ಟನೆ ನೀಡಬಹುದಿತ್ತು. ಅದರೇ ಇದುವರೆಗೂ ಆ ಕೆಲಸ ಆಗಿಲ್ಲ. ಇದ್ದರಿಂದ ರಾಜ್ಯದ ಜನರಿಗೆ ನ್ಯಾಯಬೆಲೆ ಅಂಗಡಿಯ ತಪ್ಪು ಸಂದೇಶ ಹೋಗುತ್ತಿದೆ ಎಂದು ತಿಳಿಸಿದರು.

ಆಹಾರ ಇಲಾಖೆಯಲ್ಲಿ ಮೂಲ ಅಧಿಕಾರಿಗಳೇ ಇಲ್ಲ. ಬೇರೆ ಬೇರೆ ಇಲಾಖೆಯಿಂದ ಇಲ್ಲಿಗೆ ವರ್ಗಾವಣೆಯಾಗಿ ಬಂದಿರುವವರೇ ಹೆಚ್ಚು. ಅವರಿಗೆ ಪಡಿತರ ವಿತರಣೆ ಮಾಡುವವರ ಸಮಸ್ಯೆ ಏನು ಎಂದು ಗೊತ್ತಿರುವುದಿಲ್ಲ. ಅಧಿಕಾರಿಗಳ ಬಳಿ ನಮ್ಮ ಸಮಸ್ಯೆ ಹೇಳಿಕೊಂಡರೂ ಕೂಡ ಅವರು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಪಡಿತರ ವಿತರಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವೇ ಸಿಗುತ್ತಿಲ್ಲ ಎಂದು ಕೇಶವಮೂರ್ತಿ ತಿಳಿಸಿದರು.
ಕೊಂಡೆಮೂಲದ ಪಡಿತರ ಅಂಗಡಿಯಲ್ಲಿ ನಡೆದ ಘಟನೆಯನ್ನು ವಿವರಿಸಿದ ಸಂತ್ರಸ್ತ ಮಹಿಳೆ ದೀಪಾ ನಾಯಕ್ ಅವರು, ನಮ್ಮ ಮಾವನ ಹೆಸರಿನಲ್ಲಿರುವ ನ್ಯಾಯಬೆಲೆ ಅಂಗಡಿಗೆ ಸ್ಥಳೀಯರಾದ ಸತೀಶ್ ಮತ್ತು ವಿಜಯ ಎಂಬುವವರು ಪ್ರತಿ ತಿಂಗಳು ಉಚಿತವಾಗಿ ಗೋಣಿಚೀಲ ನೀಡುವಂತೆ ಒತ್ತಡ ಹಾಕುತ್ತಾರೆ. ಅದು ನಮಗೆ ಸೇರಿದ್ದು ಎಂದು ಹೇಳಿದರೂ ಕೂಡ ಕೇಳುವುದಿಲ್ಲ. ಗೋಣಿಚೀಲವನ್ನು ಅಕ್ರಮವಾಗಿ ಬಳಸಿಕೊಳ್ಳುತ್ತಿದ್ದೀರಾ ಎಂದು ಆರೋಪ ಮಾಡುತ್ತಾರೆ. ಜತೆಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಕೂಡ ನೀಡುತ್ತಾರೆ ಎಂದು ತಿಳಿಸಿದರು.
“ಈ ಹಿಂದೆ ಕೂಡ ಹಲವು ಬಾರಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿದ್ದಾರೆ. ಈ ಬಾರಿ ಅವರು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಲದಲ್ಲಿ ಹಾಕಿದ್ದಾರೆ. ಇದರ ಪೂರ್ವಾಪರ ಯೋಚಿಸಿದೆ ಕೆಲವು ಮಾಧ್ಯಮಗಳು ಸುದ್ದಿಯನ್ನು ಕೂಡ ಪ್ರಸಾರ ಮಾಡಿದೆ. ಇದರ ಬಗ್ಗೆ ಈಗಾಗಲೇ ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಇದರ ಜತೆಗೆ ಫುಡ್ ಇನ್ಸ್‌ಪೆಕ್ಟರ್, ತಹಶೀಲ್ದಾರ್, ಕಮಿಷನರ್ ಸೇರಿದಂತೆ ಹಲವರಿಗೆ ದೂರು ನೀಡಿದ್ದೇನೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಮಂಗಳೂರು | ನ್ಯಾಯಬೆಲೆ ಅಂಗಡಿಯಲ್ಲಿ ‘ಗೋಣಿಚೀಲ’ಕ್ಕಾಗಿ ಜಗಳ: ಮಹಿಳೆಯ ವಿಡಿಯೋ ಮಾಡಿ ತೇಜೋವಧೆಗೆ ಯತ್ನ!
“ಗೋಣಿಚೀಲಕ್ಕಾಗಿ ನಮ್ಮೊಂದಿಗೆ ಜಗಳ ಮಾಡಿ, ವಿಡಿಯೋ ಮಾಡಿಕೊಂಡಿರುವ ಸತೀಶ್ ಅವರಿಗೆ ಎರಡು ಕಾರು ಇದೆ. ಅವರಿಗೆ ಸರ್ಕಾರ ಬಿಪಿಎಲ್ ಕಾರ್ಡ್ ನೀಡಿದೆ. ಇದರ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ” ಎಂದು ದೀಪಾ ನಾಯಕ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪಡಿತರ ವಿತರಕರ ಸಂಘದ ಕೋಶಾಧಿಕಾರಿ ಫೈರೋಝ್, ಸಂಘದ ಕಾರ್ಯದರ್ಶಿ ಭಾಸ್ಕರ್ ಸಾಲ್ಯಾನ್, ಮಂಜುನಾಥ್ ನಾಯಕ್, ನಿತ್ಯಾನಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.
