ರಸ್ತೆ ಗುಂಡಿಗೆ ಬಿದ್ದು ದ್ವಿಚಕ್ರ ವಾಹನ ಸವಾರೆ ಮೃತಪಟ್ಟ ಘಟನೆ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಯನ್ನು ವಿರೋಧಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ, ಎನ್‌ಎಚ್‌ಎಐ ಕಚೇರಿಗೆ ಮುತ್ತಿಗೆ ಯತ್ನ ಜರುಗಿತು. ಈ ವೇಳೆ ಪ್ರತಿಭಟನೆಯಲ್ಲಿ ಅಣುಕು ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡಿ ಕೇಂದ್ರ ಸರ್ಕಾರ ವಿರುದ್ಧ ಕಾಂಗ್ರೆಸ್ ನಾಯಕರು, ಮುಖಂಡ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರು ನಂತೂರು ಬಳಿಯ ಎನ್‌ಎಚ್‌ಎಐ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ವೇಳೆ ಕಾಂಗ್ರೆಸ್ ಕಾರ್ಯಕರ್ತರ ಜತೆಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಎನ್‌ಎಸ್‌ಯುಐ ಅಧ್ಯಕ್ಷ ಸುಹಾನ್ ಆಳ್ವ ಸೇರಿದಂತೆ ಇತರ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.
ಇದನ್ನೂ ಓದಿ: ಸುರತ್ಕಲ್ | ರಸ್ತೆಗುಂಡಿಗೆ ಬಿದ್ದ ಮಹಿಳೆ ಸಾವು: ಎನ್‌ಎಚ್ ಪ್ರಾಧಿಕಾರ ಅಧಿಕಾರಿಗಳ ವಿರುದ್ಧ ಎಫ್‌ಐಆರ್
ಈ ಸಂದರ್ಭದಲ್ಲಿ ಶಾಸಕ ಐವನ್ ಡಿಸೋಜಾ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಗಳ ದುರಸ್ತಿಗಾಗಿ ಸಾಕಷ್ಟು ಅನುದಾನ ಬಿಡುಗಡೆ ಆಗುತ್ತಿದ್ದರೂ ಯಾವುದೇ ದುರಸ್ತಿ ಕಾರ್ಯ ನಡೆಯುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣೆ ಜವಾಬ್ದಾರಿ ಕೇಂದ್ರ ಸರ್ಕಾರದ್ದು ಆಗಿದೆ. ಇವರು ಸರಿಯಾಗಿ ನಿರ್ವಹಣೆ ಮಾಡದೇ ಇರುವುದರಿಂದ ಸಾರ್ವಜನಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರವೇ ನೇರ ಕಾರಣವಾಗಿದೆ ಎಂದರು. ಎನ್‌ಎಚ್‌ಎಐ ಅಧಿಕಾರಿಗಳು ರಸ್ತೆಯುದ್ದಕ್ಕೂ ಇರುವ ಹುಂಡ ಗುಂಡಿಗಳನ್ನು ಮುಚ್ಚಲು ಮುಂದಾಗುತ್ತಿಲ್ಲ. ಇವರ ಬೇಜವಾಬ್ದಾರಿಯಿಂದ ಜನರು ನೋವು ಅನುಭವಿಸುತ್ತಿದ್ದಾರೆ ಎಂದು ದೂರಿದರು.