ಮೈಸೂರು ನಗರದ ಕಲಾ ಮಂದಿರದ ಆವರಣದಲ್ಲಿರುವ ಕಿರು ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಯಡಿ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ ಕಲಾ ತರಬೇತಿ-2025 ‘ ಕಾರ್ಯಕ್ರಮನ್ನು ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ. ಹೆಚ್. ಸಿ. ಮಹದೇವಪ್ಪ ಉದ್ಘಾಟಿಸಿದರು.
” ನೃತ್ಯ, ಕಲೆ, ಸಾಹಿತ್ಯ ಮತ್ತು ಸಂಗೀತವು ಅತ್ಯಂತ ಪ್ರಭಾವಶಾಲಿ ಮಾಧ್ಯಮಗಳಾಗಿವೆ. ಸಮಾಜದಲ್ಲಿ ಗಂಭೀರವಾದ ಪರಿಣಾಮ ಬೀರುವಂತಹ ಶಕ್ತಿಯುತವಾದ ಕ್ಷೇತ್ರವಾಗಿದೆ. ಈ ಕಲೆಯು ಸ್ವಾಭಾವಿಕವಾಗಿ ಶೋಷಿತ ಸಮುದಾಯಗಳಿಗೆ ಬಂದಿದ್ದು, ಅದನ್ನು ಪ್ರೋತ್ಸಾಹಿಸಿ ವೇದಿಕೆ ಕಲ್ಪಿಸಿಕೊಡುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದ ಮಕ್ಕಳಿಗೆ ಇದೇ ಮೊದಲ ಬಾರಿಗೆ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ ಹಾಗೂ ಜಾನಪದ ಸಂಗೀತ ಕಲಾ ಪ್ರಕಾರಗಳನ್ನು ಆರು ತಿಂಗಳುಗಳ ಕಾಲ ವಾರದಲ್ಲಿ ಮೂರು ದಿನ ಎರಡು ಗಂಟೆಗಳು ಕಲಿಸುವ ಕಾರ್ಯಕ್ರಮ ಇದಾಗಿದೆ ” ಎಂದು ಹೇಳಿದರು.

” ಮಕ್ಕಳನ್ನು ಸಾಂಸ್ಕೃತಿಕವಾಗಿ ಗಟ್ಟಿಗೊಳಿಸಿ ಸಮಾಜದಲ್ಲಿ ಪರಿಣಾಮ ಬೀರುವ ಸಾಂಸ್ಕೃತಿಕ ನಾಯಕತ್ವ ಬೆಳೆಯಲು ಈ ಕಾರ್ಯಕ್ರಮ ಪೂರಕವಾಗಿದೆ. ಎಲ್ಲಾ ರಂಗದಲ್ಲೂ ನಮ್ಮ ಮಕ್ಕಳು ಪರಿಣಿತಿಯನ್ನು ಹೊಂದಲು ಈ ಯೋಜನೆ ಸಹಕಾರಿಯಾಗಿದೆ. ಆದ್ದರಿಂದ, ಎಲ್ಲಾ ವಿದ್ಯಾರ್ಥಿಗಳು ಈ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಬೇಕು. ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರು ಬರೆದಿರುವ ʻ ಬುದ್ದ ಮತ್ತು ಆತನ ದಮ್ಮʼ ಪುಸ್ತಕವನ್ನು ಕನ್ನಡಕ್ಕೆ ತರ್ಜುಮೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಮುಂದಾಗಿರುವುದು ಮಹತ್ವದ ಕಾರ್ಯ ” ಎಂದು ಶ್ಲಾಘಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ. ಎಂ. ಗಾಯಿತ್ರಿ ಮಾತಾನಡಿ, ” ಕಲಾ ತರಬೇತಿ ಪರಿಕಲ್ಪನೆ ವಿವರಿಸಿದಾಗ ಸಚಿವರು ಕೂಡಲೇ ಅನುದಾನ ಒದಗಿಸಿಕೊಟ್ಟಿದ್ದಾರೆ. ಹಾಗಾಗಿ, ಸಚಿವರಿಗೆ ವಂದನೆ ಅರ್ಪಿಸುತ್ತೇನೆ. ಈ ಕಾರ್ಯಕ್ರಮವನ್ನು ವಿದ್ಯಾರ್ಥಿನಿಯಲದ ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಒಳಗಾಗಬಾರದು ಹಾಗೂ ಅವರಲ್ಲಿರುವ ಪ್ರತಿಭೆ ಪ್ರೋತ್ಸಾಹಿಸುವ ಸಲುವಾಗಿ ಹಮ್ಮಿಕೊಳ್ಳಲಾಗಿದೆ ” ಎಂದರು.
ಈ ಸುದ್ದಿ ಓದಿದ್ದೀರಾ?ಮೈಸೂರು | ಆಗಸ್ಟ್. 2 ರಂದು ಕೆ ಆರ್ ಎಸ್ ಪಕ್ಷದಿಂದ ‘ ಮಾದಕ ದ್ರವ್ಯ ಮುಕ್ತ ನಗರ ‘ ಜಾಥಾ

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ. ಎನ್. ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಎಂ. ಡಿ. ಸುದರ್ಶನ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಕೆ. ಎಂ. ಮಲ್ಲೇಶ್, ನಿಲಯಪಾಲಕರಾದ ವರುಪ್ರಸಾದ್, ಸರಸ್ವತಿ ಸೇರಿದಂತೆ ಇನ್ನಿತರರು ಇದ್ದರು.