ಭಿನ್ನಾಭಿಪ್ರಾಯದಿಂದಾಗಿ ಬಳ್ಳಾರಿ ಜಿಲ್ಲಾಡಳಿತಕ್ಕೆ ತಪ್ಪು ಮಾಹಿತಿ ರವಾನೆಯಾಗಿದ್ದರಿಂದ ಸಂಡೂರಿನಲ್ಲಿ ನಡೆಯಬೇಕಿದ್ದ ಸಭೆಯನ್ನು ರದ್ದು ಮಾಡಲಾಗಿದೆ. ಸಂಡೂರಿನ ಸಭೆ ರದ್ದಾಗಲು ಕಸಾಪದ ಕೇಂದ್ರ ಸಮಿತಿಯಲ್ಲಿ ಐದು ವರ್ಷ ಕೆಲಸ ಮಾಡಿರುವ ವಸುಂದರ ಭೂಪತಿ ಜಿಲ್ಲಾಡಳಿತಕ್ಕೆ ತಪ್ಪು ಮಾಹಿತಿ ನೀಡಿರುವುದೇ ಕಾರಣ. ನಮ್ಮಲ್ಲಿ ಭಿನ್ನಾಭಿಪ್ರಾಯಗಳಿರಬಹುದು. ಆದರೆ, ವೈಯಕ್ತಿಕ ದ್ವೇಷ ಇಲ್ಲ ಎಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ ಮಹೇಶ ಜೋಶಿ ಹೇಳಿದ್ದಾರೆ.
ಜಮಖಂಡಿ ನಗರದ ರಮಾನ ನಿವಾಸ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಈ ಬಾರಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಲ್ಲಹಳ್ಳಿ ಗ್ರಾಮದ ಸತ್ಯಕಾಮರ ಸುಮ್ಮನೆ ಎಂಬ ಹೆಸರಿನ ಮನೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಾಮಾನ್ಯ ಸಭೆ ನಡೆಯಲು ಉದ್ದೇಶಿಸಲಾಗಿದೆ” ಎಂದರು.
“ಕಸಾಪದ ಘನತೆ ಗೌರವಕ್ಕೆ ಧಕ್ಕೆ ತರುವರ ವಿರುದ್ಧ ಮಾನನಷ್ಟ ಮೊಖದ್ದಮೆ ಹೂಡಲಾಗಿದೆ. ಎಸ್ ಟಿ ಸಿದ್ದರಾಮಯ್ಯ, ಜಯಪ್ರಕಾಶ ಗೌಡ, ನಾಗರಾಜ, ವೆಂಕಟರಮಣ, ನಿವೃತ್ತ ಅಧಿಕಾರಿ ಸಲೀಂ ಅವರ ವಿರುದ್ಧ ಮೊಖದ್ದಮೆ ದಾಖಲಿಸಿ ಕಾನೂನು ಹೋರಾಟ ನಡೆಸಲಾಗುತ್ತಿದೆ. ಯಾವುದೋ ವ್ಯಕ್ತಿಗಳ ಪ್ರಭಾವಕ್ಕೆ ಮಣಿದು ಅಧಿಕಾರ ದುರುಪಯೋಗಪಡಿಸಿಕೊಂಡು ಕಸಾಪಕ್ಕೆ ಕಪ್ಪು ಚುಕ್ಕೆ ತರುವಂಥ ಕೆಲಸ ಮಾಡಿದ್ದಾರೆ. ಕಾರ್ಯಕಾರಣಿ ಸಭೆಯ ನಿರ್ಣಯದಂತೆ ಮೊಖದ್ದಮೆ ದಾಖಲಿಸಲಾಗಿದೆ” ಎಂದು ಹೇಳಿದರು.
ಈ ಸಂದರ್ಭ ಮಂಡ್ಯ ಅಧಿವೇಶನದ ಲೆಕ್ಕಪತ್ರ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಸರ್ಕಾರದ ಅನುದಾನದ ಸಹಾಯದಿಂದ ಕಾರ್ಯಕ್ರಮ ಮಾಡುತ್ತೇವೆ. ಅನುದಾನ ಆಯಾ ಪ್ರದೇಶದ ಜಿಲ್ಲಾಡಳಿತಕ್ಕೆ ಜಮಾ ಆಗುತ್ತದೆ. ಅದರಲ್ಲಿ ಪತ್ರಿಕೆಗಳ ಪ್ರಕಟಣೆ, ಪುಸ್ತಕ ಪ್ರಕಟಣೆ ಮುಂತಾದವುಗಳ ಜವಾಬ್ದಾರಿ ಇರುತ್ತದೆ” ಎಂದು ಉತ್ತರಿಸಿದರು.
ಈ ಸುದ್ದಿ ಓದಿದ್ದೀರಾ? ರಾಜ್ಯಾದ್ಯಂತ ಬೀದಿನಾಯಿ ಪ್ರಕರಣ: ಕೇವಲ ಎಂಟು ತಿಂಗಳಲ್ಲಿ 26 ಮಂದಿ ಸಾವು, 2.86 ಲಕ್ಷ ಪ್ರಕರಣ ದಾಖಲು
ಈ ವೇಳೆ ಅವರು “ಮದುವೆ ಹೋಟೆಲುಗಳಲ್ಲಿ ರೈಸ್ ಬದಲು ಅನ್ನ ಎಂಬ ಪದ ಉಪಯೋಗಿಸುವಂತೆ ಆಗಬೇಕು. ಕನ್ನಡ ಭಾಷೆಯನ್ನು ಉಳಿಸುವ ಕೆಲಸ ಮಾಡುತಿದ್ದೇವೆ. ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿವೆ. ಪಾಲಕರು ಕನ್ನಡ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಮುಂದಾಗಬೇಕು” ಎಂದರು.
ಈ ಸಂದರ್ಭ ಪಾಟೀಲ ಪಾಂಡು, ವಿಜಯಪುರ ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಮ್ ಪೀರ ವಾಲೆಕಾರ, ಬಾಗಲಕೋಟೆ ಕಸಾಪ ಅಧ್ಯಕ್ಷ ಶಿವಾನಂದ ಸಲ್ಲಿಕೆರೆ ಇದ್ದರು.