ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಿಗಿ ಗ್ರಾಮದ ಪೆಟ್ರೋಲ್ ಬಂಕ್ ತಿರುವಿನಿಂದ ದುರ್ಗಾದೇವಿ ದೇವಸ್ಥಾನದ ಹೊರಗಿನ 90-100 ಮೀಟರ್‌ನಷ್ಟು ಬಾಕಿ ಉಳಿದಿರುವ ಕಚ್ಚಾ ರಸ್ತೆಯನ್ನು ರಾಜ್ಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ, ಯುವಜನ ಸೇನೆ ಸಂಘಟನೆ ನೇತೃತ್ವದಲ್ಲಿ ಗ್ರಾಮದಲ್ಲಿ ಧರಣಿ ನಡೆಸಲಾಯಿತು.
ಧರಣಿ ನೇತೃತ್ವ ವಹಿಸಿದ್ದ ಕ ರಾ ವೆ ಅಧ್ಯಕ್ಷ ಸಂಗಯ್ಯ ಸಾರಂಗಮಠ, ಯುವಜನ ಸೇನೆ ರಾಜ್ಯ ಅಧ್ಯಕ್ಷ ಶಿವಾನಂದ ವಾಲಿ ಮಾತನಾಡಿ, 4-5 ವರ್ಷಗಳ ಹಿಂದೆ ತಂಗಡಗಿ ಮಾರ್ಗವಾಗಿ ಹುನಗುಂದ- ಮುದ್ದೇಬಿಹಾಳ- ತಾಳಿಕೋಟೆ ರಟ್ಟಿಯನ್ನು ವಿಶ್ವ ಬ್ಯಾಂಕ್ ಆರ್ಥಿಕ ನೆರವಿನಡಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ( ಕೆ ಆರ್ ಡಿ ಸಿ ಎಲ್ ) ರಾಜ್ಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಿದೆ. ಆದರೆ ಪೆಟ್ರೋಲ್ ಬಂಕ್ ತಿರುವಿನಲ್ಲಿ ಮಾತ್ರ 90-100 ಮೀಟರ್ ನಷ್ಟು ರಸ್ತೆಯು ಮೇಲ್ದರ್ಜೆಗೇರದೆ, ಮೊದಲಿನಂತೆ ಕಚ್ಚಾ ರಸ್ತೆಯಾಗಿಯೇ ಉಳಿದುಕೊಂಡಿದೆ. ಇದರಿಂದಾಗಿ ಇಲ್ಲಿ ಸಂಚರಿಸುವ ವಾಹನಗಳು ಸವಾರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.
ಈ ಕಚ್ಚಾ ರಸ್ತೆಯಿಂದಾಗಿ ಅನೇಕ ಬಾರಿ ಅಪಘಾತಗಳು ಸಂಭವಿಸಿವೆ. ಕಬ್ಬು ತುಂಬಿದ ಟ್ರಾಕ್ಟರ್, ಟ್ರಕ್‌ಗಳು, ಜನರ ಸಂಚಾರ ದುಸ್ತರವಾಗಿದೆ. ಇದನ್ನು ಮೇಲ್ದರ್ಜೆಗೇರಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿ, ಹೋರಾಟ ನಡೆಸಿದರು ಸಂಬಂಧಿಸಿದವರು ಸ್ಪಂದಿಸದೆ ನಿರ್ಲಕ್ಷ ತೋರಿದ್ದಾರೆ ಎಂದು ದೂರಿದರು.
ಕೆ ಆರ್ ಡಿ ಸಿ ಎಲ್ ನ ಹುಬ್ಬಳ್ಳಿ ಯೋಜನಾ ಕಚೇರಿಯ ಕಾರ್ಯಪಾಲಕ ಅಭಿಯಂತರರ ಪ್ರವೀಣ ಹುಲಾಜಿ ಅವರು ಎ ಇ ಇ ಸಿ. ಯು. ಹಾರ್ಲಪುರ, ಎ ಇ ಸುರ ಮೇತ್ರಿ, ತಹಶೀಲ್ದಾರರ ಪ್ರತಿನಿಧಿಯಾಗಿ ಕಂದಾಯ ನಿರೀಕ್ಷಿಕ ಪವನ್ ತಳವಾರ, ಗ್ರಾ ಪಂ ವತಿಯಿಂದ ಕಾರ್ಯದರ್ಶಿ ಪಿ. ವೈ. ಚಲವಾದಿ ಅವರೊಂದಿಗೆ ಧರಣಿ ಸ್ಥಳಕ್ಕೆ ಆಗಮಿಸಿ ಧರಣಿ ನಿರತರ ಮನವೊಲಿಸಲು ಮುಂದಾದರು. ಸ್ಥಳದಲ್ಲೇ ಲಿಖಿತ ಭರವಸೆ ನೀಡುವ ತನಕ ಧರಣಿ ಕೈ ಬಿಡುವುದಿಲ್ಲ ಎಂದು ಧರಣಿ ನಿರತರು ಪಟ್ಟು ಹಿಡಿದರು.

ಈ ಹೋರಾಟವು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿದ್ದಾಗಿದೆ. ರಸ್ತೆ ಅಕ್ಕಪಕ್ಕ ಇರುವ 31 ಮನೆಗಳಿಗೆ ಪರಿಹಾರವನ್ನು ನೀಡಿದ್ದರೂ ಸೂಕ್ತ ಜಾಗ ತೋರಿಸಿ ಮನೆ ಕಟ್ಟಿಕೊಟ್ಟಿಲ್ಲದ ಕಾರಣ ನಿವಾಸಿಗಳು ಮನೆ ತೆರಿಗೆ ನೀಡಲು ಮುಂದಾಗಿಲ್ಲ. ಇದರಿಂದಾಗಿ ರಸ್ತೆ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಲ್ಲ. ಅಭಿವೃದ್ಧಿಪರವಾಗಿರುವ ಗ್ರಾಮಸ್ಥರು ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದ್ದಾರೆ.
ಬಹಳ ಹೊತ್ತಿನ ಚರ್ಚೆ, ವಾದ, ವಿವಾದದ ನಂತರ ಇ ಇ ಪ್ರವೀಣ್ ಅವರು ಮೊಬೈಲ್ ಮೂಲಕ ತಹಶೀಲ್ದಾರ ಅವರೊಂದಿಗೆ ಮಾತನಾಡಿ ಸಮಸ್ಯೆಯನ್ನು ಅವರ ಗಮನಕ್ಕೆ ತಂದರು. ನಂತರ ಧರಣಿ ನಿರತ ಬೇಡಿಕೆ ಅಂತ ಲಿಖಿತ ಭರವಸೆ ಪತ್ರವನ್ನು ನೀಡಿದ್ದರಿಂದ ತಾತ್ಕಾಲಿಕ ಧರಣಿ ಕೈ ಬಿಡುವುದಾಗಿ ಧರಣಿ ನಿರತರು ಘೋಷಿಸಿದರು.
ಇದನ್ನು ಓದಿದ್ದೀರಾ? ಧರ್ಮಸ್ಥಳ | ಸಾಕ್ಷಿ ದೂರುದಾರ ಚಿನ್ನಯ್ಯ ಮತ್ತೆ ಎಸ್ಐಟಿ ಕಸ್ಟಡಿಗೆ
ಈ ವೇಳೆ ಗ್ರಾಮಸ್ಥರಾದ ಗಂಗು ದಡ್ಡಿ, ಮಹಾಂತೇಶ ಪಡಶೆಟ್ಟಿ, ಮಹಮ್ಮದ ರಫೀಕ್ ತಗ್ಗಿನಮನಿ, ಸಂಗಣ್ಣ ಪ್ಯಾಟಿ, ಚರಲಿಂಗಪ್ಪ ಕಮಲಾಪುರ, ನಾಗರಾಜ ಅಗಸಿಮುಂದಿನ, ಗುರುರಾಜ ಕುಲಕರ್ಣಿ, ಪ್ರಕಾಶ ಹಂದ್ರಾಳ, ಮಂಜು ಪೂಜಾರಿ ಉಪಸ್ಥಿತರಿದ್ದರು.
