ಯೂಟ್ಯೂಬರ್ ಮುಕುಳೆಪ್ಪ (ಕ್ವಾಜಾ ಶಿರಹಟ್ಟಿ) ವಿರುದ್ಧ ಆತನ ಪತ್ನಿ ಗಾಯತ್ರಿ ಜಾಲಿಹಾಳ ಅವರ ತಾಯಿ ‘ಲವ್ ಜಿಹಾದ್’ ಆರೋಪ ಮಾಡಿದ್ದಾರೆ. ಕೆಲವು ಬಜರಂಗ ದಳದ ಕಾರ್ಯಕರ್ತರೊಂದಿಗೆ ಸೇರಿ, ಮುಕುಳೆಪ್ಪ ವಿರುದ್ಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ, ‘ಲವ್ ಜಿಹಾದ್’ ಆರೋಪವನ್ನು ಗಾಯತ್ರಿ ನಿರಾಕರಿಸಿದ್ದು, ‘ಅದೊಂದು ಸುಳ್ಳು ಆರೋಪ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಕ್ವಾಜಾ ಶಿರಹಟ್ಟಿ ವಿರುದ್ಧ ದೂರು ದಾಖಲಾದ ಬೆನ್ನಲ್ಲೇ, ಗಾಯತ್ರಿ ಅವರು ಸ್ಪಷ್ಟನೆ ನೀಡಿ ವಿಡಿಯೋ ಹಂಚಿಕೊಮಡಿದ್ದಾರೆ. “ನಾನು ನನ್ನ ಸ್ವ-ಇಚ್ಛೆ ಮತ್ತು ಸ್ವಂತ ಬುದ್ದಿಯಿಂದಲೇ ಮುಕಳೆಪ್ಪ ಅವರನ್ನು ಪ್ರೀತಿಸಿ ಮದುವೆಯಾಗಿದ್ದೇನೆ. ಕೆಲವು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ‘ಲವ್ ಜಿಹಾದ್’ ಎಂಬ ಆರೋಪಗಳು ಸಂಪೂರ್ಣ ಸುಳ್ಳು” ಎಂದು ಹೇಳಿದ್ದಾರೆ.
ಗಾಯತ್ರಿ ಅವರು ಹಿಂದು ಸಮುದಾಯಕ್ಕೆ ಸೇರಿದ್ದು, ಕ್ವಾಜಾ ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆ ಕಾರಣಕ್ಕಾಗಿಯೇ, ಅವರ ವಿವಾಹವನ್ನು ಬಳಸಿಕೊಂಡು ಕೆಲವು ಹಿಂದುತ್ವವಾದಿಗಳು ವಿವಾದ ಸೃಷ್ಟಿಸಿ, ಕೋಮುದ್ವೇಷ ಹರಡಲು ಯತ್ನಿಸಿದ್ದಾರೆ.
ಬಜರಂಗದಳದ ಕಾರ್ಯಕರ್ತರು ಗಾಯತ್ರಿ ಅವರ ತಾಯಿಯನ್ನು ಪುಸಲಾಯಿಸಿ, ಕ್ವಾಜಾ ವಿರುದ್ಧ ದೂರು ದಾಖಲಿಸಿದ್ದರು. “ಕ್ವಾಜಾ ಅವರು ಧಮ್ಕಿ ಹಾಕಿ, ಸುಳ್ಳು ದಾಖಲೆಗಳನ್ನು ನೀಡಿ, ಗಾಯತ್ರಿ ಅವರನ್ನು ವಿವಾಹವಾಗಿದ್ದಾರೆ” ಎಂದು ಆರೋಪಿಸಿದ್ದರು