ಮೈಸೂರು ಜಿಲ್ಲೆ ,ಹುಣಸೂರು ತಾಲ್ಲೂಕು, ಹನಗೂಡು ಹೋಬಳಿಯ, ಕರ್ಣಕುಪ್ಪೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆಮ್ಮಿಗೆ ಹಾಡಿ ‘ ಬಿ ‘ ಕಾಡಂಚಿನ ಗ್ರಾಮ. ಸರಿ ಸುಮಾರು 36 ಗಿರಿಜನ ಕುಟುಂಬಗಳು ವಾಸ ಮಾಡುತ್ತಿವೆ. ಕಿಮೀ ಗಟ್ಟಲೇ ಅಲ್ಲ ಕೇವಲ ಹತ್ತಿಪ್ಪತ್ತು ಮೀಟರ್ ಅಂತರದಲ್ಲಿ ಆರಂಭವಾಗುವ ಕಾಡಂಚು. ಭಯದ ಬದುಕಲ್ಲಿ ದಿನ ಕಳೆವ ಪರಿಸ್ಥಿತಿ.
ಪುನರ್ವಸತಿ ಹೆಸರಿನಲ್ಲಿ ಬಂದ ಇವರಿಗೆ ಸರ್ಕಾರ, ಅರಣ್ಯ ಇಲಾಖೆ, ಸ್ಥಳೀಯ ಆಡಳಿತ, ಗ್ರಾಮ ಪಂಚಾಯ್ತಿ ಯಾರೇ ಆಗಲಿ ಒಂದಲ್ಲ ಒಂದು ರೀತಿಯ ಅನ್ಯಾಯ ಮಾಡಿದರು ವಿನಃ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಿಲ್ಲ. ಕಾಡಿಂದ ಆಚೆ ಬಂದರು, ಕಾಡಂಚಲ್ಲಿ ಇರುವಂತೆ ಮಾಡಿದರು. ವ್ಯವಸ್ಥೆ ಮಾತ್ರ ಮಾಡಲಿಲ್ಲ. ಸಂಬಂಧವೇ ಇಲ್ಲ ಅನ್ನುವಂತೆ ಮುಗುಮ್ಮಾದರು.
ರಸ್ತೆ ಇಲ್ಲ, ವಿದ್ಯುತ್ ಇಲ್ಲ, ನೀರಿನ ವ್ಯವಸ್ಥೆ ಇಲ್ಲ, ಕಾಡು ಪ್ರಾಣಿಗಳ ಹಾವಳಿ. ಇತ್ತೀಚೆಗೆ ಸೆರೆ ಹಿಡಿದಿದ್ದ ಹುಲಿಯನ್ನ ತಂದು ಬಿಟ್ಟಿದ್ದಾರೆ. ಹೊರ ಹೋಗಬೇಕು, ಬರಬೇಕು ಅಂದರೆ ಉಸಿರು ಬಿಗಿ ಹಿಡಿದು ಸಾಗುವ ಸ್ಥಿತಿ. ರಾತ್ರಿಯಾದರೆ ಮನೆ ಬಾಗಿಲಲ್ಲಿ ಚಿರತೆ ,ಆನೆ ಕಾಟ. ಅಲ್ಲೊಂದು, ಇಲ್ಲೊಂದು ಅನ್ನುವಂತೆ ಮನೆಗಳು ಒತ್ತೋತ್ತಿಗೆ ಯಾರು ಇಲ್ಲ. ಕಷ್ಟ ಅಂದರೆ ಆಂತು ಕೊಳ್ಳಲು ಒಬ್ಬರು ಇಲ್ಲ. ಏನಾದ್ರು ತೊಂದರೆ ಆದರೆ ಯಾರಿಗೂ ತಿಳಿಯೋದೆ ಇಲ್ಲ.

ಮನೆಯಲ್ಲಿ ವಿದ್ಯುತ್ ಇಲ್ಲ ಬೆಳಕಿಲ್ಲ. ಹೇಗೆ ಬದುಕಬೇಕು? ಸರ್ಕಾರ , ಗ್ಯಾರೆಂಟಿ ಯೋಜನೆ ಕೊಟ್ಟಿದೆ. ನಮಗೆ ಯಾವಾಗ ತಲುಪುತ್ತೆ. ಇದು ಕೆಲವರಿಗೆ ಮಾತ್ರ ಮಾಡಿರುವ ಯೋಜನೆಯ. ನಾವು ಈ ಯೋಜನೆ ಪಡೆಯಲು ಅರ್ಹರಿಲ್ಲವ ಅನ್ನುವುದು ಸ್ಥಳೀಯರ ಅಳಲು. ಒಬ್ಬರಿಗೆ ಒಂದು ರೀತಿ ಇನ್ನೊಬ್ಬರಿಗೆ ಇನ್ನೊಂದು ರೀತಿ ಅಂದರೆ ಇದ್ಯಾವ ನ್ಯಾಯ. ಎಲ್ಲರಿಗೂ ಸಿಕ್ಕುವ ಸೌಲಭ್ಯ ನಮಗೂ ಸಿಗಬೇಕಿತ್ತು. ನಮಗೆ ಸಿಗದೇ ಇದ್ದ ಮೇಲೆ ಸರ್ಕಾರ ಏನು ಮಾಡಿ ಏನು ಪ್ರಯೋಜನ.
” ಚೆಸ್ಕಾಂ ಅಭಿಯಂತರು ಕಳೆದ ವರ್ಷ ಬಂದು ಸ್ಥಳ ಪರಿಶೀಲನೆ ಮಾಡಿ ಇನ್ನೇನು ಲೈನ್ ಎಳೆದು, ಕಂಬ ನೆಟ್ಟು, ವಿದ್ಯುತ್ ಸಂಪರ್ಕ ಕೊಟ್ಟೆ ಬಿಟ್ಟೇವು ಅನ್ನುವ ದಾಟಿಯಲ್ಲಿ ಮಾತಾಡಿ ಹೋದರು ಹೊರತು ಇವತ್ತಿನವರೆಗೂ ಇತ್ತ ಕಡೆ ಬಂದಿಲ್ಲ. ಕೆಲಸ ಮಾಡಲು ಆಗದೆ ಇದ್ದ ಮೇಲೆ ಯಾಕೆ ಬರಬೇಕು? ಯಾಕೆ ಆಶ್ವಾಸನೆ ಕೊಡಬೇಕು? ” ಅನ್ನೋದು ಗಿರಿಜನರ ಪ್ರಶ್ನೆ.

‘ ನಮ್ಮದು ಗುಡಿಸಲು, ಸರ್ಕಾರ ಕಟ್ಟಿಸಿಕೊಟ್ಟ ಚಿಕ್ಕಪುಟ್ಟ ಮನೆಗಳು ಯಾವ ಭದ್ರತೆಯು ಇಲ್ಲ. ಕನಿಷ್ಠ ಸೌಲಭ್ಯ ಅಂತೂ ಇಲ್ಲವೇ ಇಲ್ಲ. ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ನಮ್ಮ ಬದುಕು. ಮಳೆ ಬಂದರೆ ಓಡಾಟ ಅಸಾಧ್ಯ ಯಾಕಂದ್ರೆ ಇದು ಕಾಡು ದಾರಿ ಭಯ ಆಗುತ್ತೆ.
ಇಲ್ಲಿಗೆ ಯಾವ ವಾಹನ ಬರಲ್ಲ. ನಾವು ಏನಾದ್ರು ಮಾಡಿಕೊಂಡು ಬಂದ್ರೆ ಬಂದ ಹಾಗೆ. ಅದು ಬಿಟ್ರೆ ಅರಣ್ಯ ಇಲಾಖೆಯವರು ಓಡಾಡ್ತಾರೆ ಅಷ್ಟೇ.”
‘ ಮಕ್ಕಳು, ವಯಸ್ಸಾದವರು ಹೊರಗೆ ಹೋಗೋದು ತೀರಾ ಕಷ್ಟ. ಕಾಡು ಪಕ್ಕದಲ್ಲೇ ಇರುವುದರಿಂದ ಕಾಡು ಪ್ರಾಣಿಗಳ ಸಂಚಾರ ಇರುತ್ತೆ. ಮಣ್ಣು ರಸ್ತೆ , ಮಳೆಗಾಲದಲ್ಲಿ ಕೇಸರುಮಯ.ಇನ್ನ ನಾವುಗಳು ಸರಾಗವಾಗಿ ಓಡಾಡೋದು ಹೇಗೆ?. ಸಂಜೆ ಒಳಗೆ ಮನೆ ಸೇರಿಕೊಂಡರೆ ಸರಿ. ಇಲ್ಲಾಂದ್ರೆ ರಾತ್ರಿ ಹೊತ್ತು ಬರಲು ಆಗಲ್ಲ, ಆಚೆ ಹೋಗಲು ಆಗಲ್ಲ.’

ನಾವೆಲ್ಲ ಬಡ ಜನ. ಕೂಲಿ ಕಂಬಳಕ್ಕೆ ಹೋಗಬೇಕು. ಕೆಲಸ ಇದ್ದಾಗ ಹೊಲ ಕೆಲಸಕ್ಕೆ ಹೋಗ್ತೀವಿ. ಇಲ್ಲಾಂದ್ರೆ ಅಕ್ಕಪಕ್ಕದ ಕೊಡಗು ಕಡೆಗೆ ಕೆಲ್ಸಕ್ಕೆ ಹೋಗಬೇಕು. ಏನಿಲ್ಲ ಅಂದ್ರು 70 ರಿಂದ 80 ಕಿಮೀ ಹೋಗಿ, ಬರಬೇಕು.ಇಂತಹ ಪರಿಸ್ಥಿತಿಯಲ್ಲಿ ಇರುವ ನಮಗೆ ಈ ಸರ್ಕಾರ ಆಗಲಿ, ಸ್ಥಳೀಯ ಆಡಳಿತ ಆಗಲಿ, ಅಧಿಕಾರಿಗಳೇ ಆಗಲಿ ಸ್ಪಂದಿಸೋದೆ ಇಲ್ಲ. ಇತ್ತ ಕಡೆ ಬರಲ್ಲ. ಅಧಿಕಾರಿಗಳು ಅದೇನು ಕೆಲಸ ಮಾಡ್ತಾರೆ, ಮಾಡ್ತಾ ಇದ್ದಾರೆ ಒಂದು ತಿಳಿಯೋದೆ ಇಲ್ಲ ಎನ್ನುವಂತಿದೆ ಜನರ ಬದುಕು.
ಸೌಲಭ್ಯ ವಂಚಿತರಾಗಿದ್ದು ಅಲ್ಲದೆ, ಭಯದಲ್ಲಿ ದಿನ ದೂಡಬೇಕು, ನೆಮ್ಮದಿ ಇಲ್ಲ. ಹೊರಗೆ ಹೋಗಿಲ್ಲ ದುಡಿಯಲಿಲ್ಲ ಅಂದ್ರೆ ಹೊತ್ತಿನ ಕೂಳಿಗು ಪರದಾಡಬೇಕು. ಇದನ್ನೆಲ್ಲ ಅರ್ಥ ಮಾಡಬೇಕಿದ್ದ ಜನ ಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತಂದು ಕೆಲಸ ಮಾಡಿಸಬೇಕಿದ್ದವರು ನಿರ್ಲಕ್ಷ್ಯ ವಹಿಸಿ ತೀರ ಕೆಟ್ಟ ಬದುಕು ಬಾಳುವಂತೆ ಮಾಡಿದ್ದಾರೆ. ಇಂತವರಿಗೆ ನಾವು ಮತ ಹಾಕಬೇಕು.

ಹಾಡಿಯ ಚಿಕ್ಕರಾಮಯ್ಯ ಈದಿನ.ಕಾಮ್ ಜೊತೆ ಮಾತನಾಡಿ ” ದಾರಿ ಸಮಸ್ಯೆ ತಲೆ ನೋವಾಗಿದೆ, ಕರೆಂಟ್ ಇಲ್ಲ, ನೀರಿನ ತೊಂದರೆ. 50 ಕುಟುಂಬ ಇದ್ದೀವಿ. ಚಿರತೆ , ಹುಲಿ ಕಾಟ . ಓಡಾಡೋದಕ್ಕೆ ಭಯ. ಚುನಾವಣೆ ಸಮಯ ಆದ್ರೆ ನಾವು ಯಾವ ಮೂಲೆಯಲ್ಲಿ ಇದ್ರು ಹುಡುಕಿಕೊಂಡು ಬರ್ತಾರೆ. ಆದೆ ನಮ್ಮ ಕಷ್ಟ ಏನು ಅಂತ ಕೇಳಲು ಒಬ್ಬರು ಬರಲ್ಲ. ಗಿರಿಜನರ ಕಷ್ಟ ಕೇಳೋರ್ ಇಲ್ಲ. ಯಾರಿಗೂ ನಿಯತ್ತಿಲ್ಲ. 60 ರಿಂದ 70 ವರ್ಷಗಳೇ ಕಳೆದಿವೆ ಇಲ್ಲಿಗೆ ಬಂದು. ಇನ್ನೂ ಕತ್ತಲಲಿ ಇದ್ದೀವಿ, ಬೆಳಕು ಕಂಡಿಲ್ಲ. ಇನ್ನ ರಸ್ತೆ ಇಲ್ಲವೇ ಇಲ್ಲ ಹೀಗಾದ್ರೆ ಮಕ್ಕಳು , ಮರಿ ಕಟ್ಕೊಂಡು ಜೀವನ ಮಾಡೋದು ಹೇಗೆ? ” ಎನ್ನುತ್ತಾರೆ.
ಹೆಮ್ಮಿಗೆ ಹಾಡಿ ನಾಗರಾಜು ಮಾತನಾಡಿ ” ರಸ್ತೆ ಸಮಸ್ಯೆ ಮೊದಲನೆಯದು, ಎರಡನೆಯದು ಕರೆಂಟು, ಆಮೇಲೆ ಕುಡಿಯೋ ನೀರು. ಪಂಚಾಯ್ತಿಯವ್ರಿಗೆ ಏನ್ ಹೇಳಿದ್ರು ತಲೆಗೆ ಹಚ್ಚಿಕೊಳ್ಳಲ್ಲ. ಹಾಡಿ ಸಮಸ್ಯೆ ಸರ್ಕಾರ ಅರ್ಥ ಮಾಡಿ ನಮ್ ಕಷ್ಟ ಪರಿಹಾರ ಮಾಡಬೇಕು. ಇಲ್ಲಾಂದ್ರೆ ನಾವು ಬಾಳ್ವೆ ಮಾಡೋದು ಹೇಗೆ?. ಇಲ್ಲಾಂದ್ರೆ ಇಲ್ಲೇ ಇದ್ದು ಇಲ್ಲೇ ಸಾಯಬೇಕು. ಸರ್ಕಾರ ಕೊಡೋ ಉಚಿತ ಯೋಜನೆ ನಮಗೆ ತಲುಪಲ್ಲ ಇದನ್ನೆಲ್ಲ ಮಾಡಿ ಏನು ಪ್ರಯೋಜನ ” ಎನ್ನುತ್ತಾರೆ.

ಶಿವಮ್ಮ ಮಾತನಾಡಿ ” ಊರಲ್ಲಿದ್ದ ನಿವೇಶನ ಮಕ್ಕಳಿಗೆ ಕೊಟ್ಟು ಕಾಡಂಚಲಿ ಹುಲ್ಲು ಗುಡಿಸಲಿನಲ್ಲಿ ಬದುಕುತ್ತಾ ಇದ್ದೀನಿ. ಕಾಡು ಪ್ರಾಣಿಗಳ ಕಾಟ. ಭಯ ಆಗುತ್ತೆ. ಕಾಡಲ್ಲೇ ಓಡಾಡಬೇಕು, ಕಾಡಲ್ಲೆ ಬರಬೇಕು. ನೀರು, ಕರೆಂಟು, ಏನ್ ಅಂದ್ರೆ ಏನು ಇಲ್ಲ. ಈ ವಯಸ್ಸಲ್ಲೂ ದೂರದಿಂದ ನೀರು ಹೊತ್ಕೊಂಡು ಹೋಗಬೇಕು. ಅದನ್ನ ಬಿಟ್ರೆ ನಮಗೆ ಯಾರು ಯಾವ ಸವಲತ್ತು ಮಾಡಿಕೊಟ್ಟಿಲ್ಲ. ಕೇಳಿದ್ರೆ ಮಾಡಿ ಕೊಡ್ತೀವಿ ಅಂತಾರೆ. ಏನು ಮಾಡಿಲ್ಲ, ಮಾಡೋದು ಇಲ್ಲ ” ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಪುಟ್ಟಯ್ಯನ ಮಗ ಮಟ್ಕಯ್ಯ ಮಾತನಾಡಿ ‘ ಓಡಾಡಕೆ ದಾರಿ ಇಲ್ಲ ,ಕರೆಂಟು ಇಲ್ಲ. ಕಾಡ್ ಒತ್ತಲ್ಲಿ ಇದ್ದೀವಿ. ನಮಗೆ ರಸ್ತೆ, ಕರೆಂಟು ಬೇಕು. ಯಾರು ಕೇಳ್ತಿಲ್ಲ . ನಮ್ಮ ತಾತನ ಕಾಲದಿಂದಲೂ ನಾವು ಹೀಗೆ ಇದ್ದೀವಿ. ಯಾರು ಏನು ಕೇಳಲ್ಲ , ಯಾವ ಕೆಲಸನು ಮಾಡ್ತಾ ಇಲ್ಲ. ಈಗಲಾದರೂ ನಮ್ಮ ಕಷ್ಟ ಅರಿತು ಕೆಲಸ ಮಾಡಲಿ ‘ ಎಂದರು.

ನೀಲಮ್ಮ ಮಾತನಾಡಿ ” ಇದು ಕಾಡು ಪ್ರದೇಶ ಇಲ್ಲಿ ಕಾಡು ಪ್ರಾಣಿಗಳು ಓಡಾಡ್ತವೆ. ಈಗೇನೋ ಒಂದು ಟ್ಯಾಂಕ್ ಮಾಡಿ ನಲ್ಲಿ ಹಾಕವರೆ ಅದು ಮೂರು ದಿನಕ್ಕೆ ನೀರು ಬಿಡ್ತಾರೆ. ಇಲ್ಲಾಂದ್ರೆ ಅದು ಇಲ್ಲ. ಇನ್ನ ದಾರಿ ಏನು ಇಲ್ಲ. ಒಬ್ಬಂಟಿ ಹೆಂಗಸು ನಾನು .ಹೊರಗೆ ಹೋಗೋಕು ಭಯ ಏನ್ ಮಾಡಬೇಕು ಗೊತ್ತಾಗ್ತಾ ಇಲ್ಲ. ಗ್ರಾಮದಲ್ಲಿ ಎಲ್ಲ ಸೇರಿ ಕೇಳಿದ್ರು ಏನು ಆಗ್ತಾ ಇಲ್ಲ. ಗ್ರಾಮದವರು ಅಂತಹ ಆಸಕ್ತಿ ವಹಿಸಿ ಯಾವ ಕೆಲಸನೂ ಮಾಡ್ತಾ ಇಲ್ಲ. ಕೆಲವರು ಹೊಲದ ಕಡೆ ಮನೆ ಮಾಡಿದ್ದಾರೆ ಅವರಿಗೆ ರಸ್ತೆ ಇಲ್ಲ ಓಡಾಡಲು. ಇನ್ನ ಕರೆಂಟ್ ಕೊಟ್ಟಿಲ್ಲ. ಇದೇ ವಿಚಾರಕ್ಕೆ ದಿನನಿತ್ಯ ಗಲಾಟೆ ಆಗುತ್ತೆ. ಇದನ್ನೆಲ್ಲ ಗಮನಿಸಿ ಅಗತ್ಯ ಇರೋ ವ್ಯವಸ್ಥೆ ಕೈಗೊಳ್ಳಬೇಕು ” ಎಂದು ಮನವಿ ಮಾಡಿದರು.
ಗ್ರಾಮ ಪಂಚಾಯ್ತಿ ಸದಸ್ಯ ಬೀರಪ್ಪ ಮಾತನಾಡಿ ” ನಮಗೆ ಏನ್ ಬೇಕಿತ್ತು ಅದನ್ನ ಕೊಡ್ತಾ ಇಲ್ಲ. ಕೆಇಬಿ ಇಂದ ಹಿಡಿದು ಎಂಎಲ್ಎ, ತಹಶೀಲ್ದಾರ್ ಎಲ್ಲರಿಗೂ ಅರ್ಜಿ ಕೊಟ್ಟಿದ್ದೀವಿ. ಆದ್ರೆ ಯಾರು ಕೆಲಸ ಮಾಡ್ತಿಲ್ಲ. ಇಲ್ಲಿ ಸಾಕಷ್ಟು ತೊಂದರೆ ಇದೆ. ಪಂಚಾಯ್ತಿ ಕಡೆಯಿಂದ ಎಸ್ಟು ಅರ್ಜಿ ಕೊಟ್ಟರು ಮೂಲೆಗೆ ಹಾಕ್ತಾರೆ ಹೊರತು ಕೆಲಸ ಮಾಡಿಕೊಡ್ತಿಲ್ಲ. ಇಷ್ಟು ವರ್ಷ ಕಳೆದರೂ ನಮ್ಮವರಿಗೆ ಸರಿಯಾದ ಮನೆ, ನೀರು, ಕರೆಂಟು, ರಸ್ತೆ ಯಾವುದು ಸಿಕ್ಕಿಲ್ಲ ” ಎಂದು ಬೇಸರ ವ್ಯಕ್ತ ಪಡಿಸಿದರು.

ಡೀಡ್ ಸಂಸ್ಥೆಯ ನಿರ್ದೇಶಕ ಶ್ರೀಕಾಂತ್ ಮಾತನಾಡಿ ” ಸರ್ಕಾರಗಳು ಗಿರಿಜನ, ಹಾಡಿಜನರ ಏಳಿಗೆಗೆ ಸಾಕಷ್ಟು ಹಣ ಮೀಸಲು ಇಡುತ್ತೆ.ಅದೆಲ್ಲ ಎಲ್ಲಿಗೆ ಹೋಗ್ತಾ ಇದೆ. ಹಾಡಿ ಜನ ಇದ್ದ ಹಾಗೆ ಇದ್ದಾರೆ. ಸ್ವಲ್ಪವೂ ಬದಲಾವಣೆ ಕಂಡಿಲ್ಲ. ಸರ್ಕಾರಗಳು ಉಚಿತ ಯೋಜನೆ ನೀಡ್ತಾವೆ. ಆದರೆ, ಅದೆಲ್ಲವೂ ಹಾಡಿ ಜನಗಳಿಗೆ ಸಿಗಲ್ಲ. ಕರೆಂಟ್ ಇಲ್ಲ ಅಂದ ಮೇಲೆ ಗೃಹಜ್ಯೋತಿ ಎಲ್ಲಿಂದ ಸಿಗಬೇಕು. ಇದು ಸರ್ಕಾರಗಳ ವೈಫಲ್ಯ.
ಈ ಸುದ್ದಿ ಓದಿದ್ದೀರಾ? ಮೈಸೂರು | ಮುಸ್ಲೀಮ್ ನಿಯೋಗದಿಂದ ಜಿಲ್ಲಾಧಿಕಾರಿಯವರಿಗೆ ಮನವಿ ಪತ್ರ ಸಲ್ಲಿಕೆ

ಅಧಿಕಾರಿಗಳಿಗೆ ಏನು ಆಗಬೇಕು, ಅವರಿಗೇನು ಆಗಬೇಕಿಲ್ಲ. ಕಷ್ಟ ಇರೋದು ಸಾಮಾನ್ಯ ಜನರಿಗೆ ಅಧಿಕಾರಿಗಳಿಗೆ ಅಲ್ಲ. ಕರೆಂಟು ಇದ್ರೆ ಎಷ್ಟು! ರಸ್ತೆ ಇಲ್ಲಾಂದ್ರೆ ಏನು ? ಅವರಿಗೆ ಚಿಂತೆ ಇಲ್ಲ. ಕಾಡಂಚಲಿ ಪ್ರಾಣಿಗಳ ಹಾವಳಿ ಇರುವ ಕಡೆ ಜನ ಹೇಗೆ ವಾಸ ಮಾಡ್ತಾರೆ? ಅನ್ನೋ ಕನಿಷ್ಠ ಮಾನವೀಯತೆ ಕೂಡ ಇಲ್ಲ. ಈಗಲಾದರೂ ಸರ್ಕಾರ, ಸ್ಥಳೀಯ ಆಡಳಿತ, ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ರಸ್ತೆ, ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡುವಂತೆ ” ಮನವಿ ಮಾಡಿದರು.