ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾಹಿತಿ ಹಕ್ಕು ಅನುಷ್ಠಾನ ಕುರಿತಾಗಿ ನಡೆದ ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.
ಕರ್ನಾಟಕ ರಾಜ್ಯ ಮುಖ್ಯ ಮಾಹಿತಿ ಆಯುಕ್ತರಾದ ಎ.ಎಂ.ಪ್ರಸಾದ್ ಹಾಗೂ ಆಯುಕ್ತರಾದ ಡಾ.ಹರೀಶ್ ಕುಮಾರ್ ಸಭೆಯಲ್ಲಿ ಭಾಗವಹಿಸಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆ ಅನುಷ್ಠಾನ ಸಂಬಂಧ ಮಾಹಿತಿ, ನಿರ್ದೇಶನ ನೀಡಿದರು.
ಡಾ. ಹರೀಶ್ ಕುಮಾರ್ ಮಾತನಾಡಿ, “ಭಾರತದ ಸಂವಿಧಾನದ ಕಲಂ 19ರಲ್ಲಿ ಭಾರತದ ಎಲ್ಲಾ ಪ್ರಜೆಗಳಿಗೆ ವಾಕ್ ಮತ್ತು ಅಭಿಪ್ರಾಯ ವ್ಯಕ್ತಪಡಿಸಲು ಅಧಿಕಾರ ನೀಡಿದೆ. ಅದರ ತಾತ್ವಿಕ ತಳಹದಿಯ ಅನುಸಾರವೇ ಮಾಹಿತಿ ಹಕ್ಕು ಕಾಯ್ದೆ ಜಾರಿಗೊಂಡಿದೆ. ಈ ಕಾಯಿದೆಯ ಮುಖಾಂತರ ಜನತೆ ಸರ್ಕಾರದ ವ್ಯವಹಾರಗಳಲ್ಲಿ ಭಾಗವಹಿಸಲು ನೆರವಾಗಿದೆ” ಎಂದು ತಿಳಿಸಿದರು.
“ಮಾಹಿತಿ ಹಕ್ಕು ಕಾಯ್ದೆ ಅತ್ಯಂತ ಸರಳವಾದ ಕಾಯ್ದೆಯಾಗಿದ್ದು, ಅಷ್ಟೇ ಗಂಭೀರ ಸ್ವರೂಪದ ಕಾಯ್ದೆಯಾಗಿದೆ. ಕಾಯಿದೆ ಜಾರಿಗೆ ಬಂದು 20 ವರ್ಷಗಳು ಕಳೆದರೂ ಪರಿಣಾಮಕಾರಿ ಅನುಷ್ಠಾನಕ್ಕೆ ನೌಕರಶಾಹಿ ಕಾರ್ಯಪ್ರವೃತ್ತವಾಗಬೇಕು” ಎಂದು ಸಲಹೆ ನೀಡಿದರು.

ಪ್ರಸ್ತುತ ಆಯೋಗದಲ್ಲಿ 40 ಸಾವಿರ ಎರಡನೇ ಮೇಲ್ಮನವಿ ಮತ್ತು ದೂರು ಪ್ರಕರಣಗಳಿದ್ದು ಮೈಸೂರು ಜಿಲ್ಲೆಗೆ ಸಂಬಂಧಪಟ್ಟಂತೆ ಒಂದು ಸಾವಿರಕ್ಕೂ ಹೆಚ್ಚು ಪ್ರಕರಣಗಳ ವಿಲೇವಾರಿ ಬಾಕಿಯಿದೆ. ಸಂಬಂಧಪಟ್ಟ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳು ಪ್ರಕರಣಗಳ ಶೀಘ್ರ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳಲು” ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಜಾತಿ ಸಮೀಕ್ಷೆಗೆ ವಿರೋಧಿಸುವವರು ಹಿಂದುಳಿದ ಸಮುದಾಯಗಳ ವಿರೋಧಿಗಳು
ಸಭೆಯಲ್ಲಿ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ , ಅಪರ ಜಿಲ್ಲಾಧಿಕಾರಿ ಡಾ. ಶಿವರಾಜು, ಡಿಸಿಪಿ ಬಿಂದುಮಣಿ, ಜಿಲ್ಲಾ ಪಂಚಾಯತ್ ಸಿಇಓ ಯುಕೇಶ್ ಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ಇಲಾಖಾವಾರು ಅಧಿಕಾರಿಗಳು ಹಾಜರಿದ್ದರು.