‘ಸಮ್ಮಿಲನ-2025’ ಉದ್ದೇಶಕ್ಕಾಗಿ ಪಾಲುದಾರಿಕೆಗಳು ಎಂಬ ಕಾರ್ಪೋರೆಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ (ಸಿಎಸ್‍ಆರ್) ಸಂವಾದವು ಮೈಸೂರಿನ ರಾಡಿಸನ್ ಬ್ಲೂ ಖಾಸಗಿ ಹೋಟೆಲ್ ನಲ್ಲಿ ನಡೆಯಿತು.
ರೋಟರಿ ಇಂಟರ್‍ನ್ಯಾಷನಲ್ ಜಿಲ್ಲಾ 3181 ವತಿಯಿಂದ, ಸಿಐಐ ಹಾಗೂ ಕ್ರೆಡೈ (CREDAI) ಮೈಸೂರು ಶಾಖೆಗಳ ಸಹಭಾಗಿತ್ವದಲ್ಲಿ ಹಾಗೂ ಚಾಮರಾಜನಗರ ಮತ್ತು ಮೈಸೂರು ಜಿಲ್ಲಾಡಳಿತಗಳ ಬೆಂಬಲದೊಂದಿಗೆ ಈ ಸಂವಾದ ಆಯೋಜಿಸಲಾಗಿತ್ತು. ಈ ಸಂವಾದವು ಸಿಎಸ್‍ಆರ್ ಹೂಡಿಕೆಗಳನ್ನು ಕಂಪನಿಗಳ ಕಾಯ್ದೆ 2013 ರ ಶೆಡ್ಯೂಲ್ 7ನೇ ಅಡಿಯಲ್ಲಿ ಜಿಲ್ಲೆಯ ಅಭಿವೃದ್ಧಿ ಆದ್ಯತೆಗಳೊಂದಿಗೆ ಹೊಂದಾಣಿಕೆಗೊಳಿಸುವುದು ಮುಖ್ಯ ಉದ್ದೇಶದೊಂದಿಗೆ ನಡೆಯಿತು.
ರಾಜ್ಯದ ಮುಖ್ಯ ಕಾರ್ಯದರ್ಶಿಯ ಡಾ. ಶಾಲಿನಿ ರಜನೀಶ್ ಮಾತನಾಡಿ ಸಂವಾದವನ್ನು ಕ್ರಿಯೆಯಲ್ಲಿ ಪಾಲುದಾರಿಕೆ ಸ್ಪೂರ್ತಿದಾಯಕ ಮಾದರಿ. ರೋಟರಿ, ಸಿಐಐ ಮತ್ತು ಕ್ರೆಡೈ ಮೈಸೂರಿನ ನೇತೃತ್ವವನ್ನು ಶ್ಲಾಘಿಸಿ, ದೀರ್ಘಕಾಲಿಕ ಪರಿಣಾಮ ಬೀರುವ ಸಿಎಸ್‍ಆರ್ ಯೋಜನೆಗಳನ್ನು ಕೈಗೊಳ್ಳಲು ಕಂಪನಿಗಳನ್ನು ಪ್ರೋತ್ಸಾಹಿಸಿದರು.
ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ ” ಪರಿಸರ ಕ್ಷೇತ್ರಗಳಲ್ಲಿ ಸಿಎಸ್‍ಆರ್ ಹೂಡಿಕೆಗಳ ಅಗತ್ಯತೆ ಬಹು ಮುಖ್ಯವಾಗಿದೆ. ಚಾಮರಾಜನಗರ ಬೌಗೋಳಿಕಾವಾಗಿ ವಿಸ್ತರವಾದ ಜಿಲ್ಲೆ. ಅನೇಕ ರೀತಿಯ ಸಮಸ್ಯೆಗಳಿವೆ. ತುರ್ತಾಗಿ ಜಿಲ್ಲೆಯ 275 ಕೆರೆಗಳ ಅಭಿವೃದ್ಧಿ ಆಗಬೇಕಿದೆ. ಅಂಗನವಾಡಿ, ಶಾಲಾ ಶೌಚಾಲಯ, ಕೌಶಲ್ಯ ಅಭಿವೃದ್ದಿ, ಅರಣ್ಯ ವ್ಯಾಪ್ತಿಯಲ್ಲಿ ಬಫರ್ ಜೋನ್ ಅಭಿವೃದ್ಧಿ ಆಗಬೇಕಿದೆ. ಇದೆಲ್ಲದಕ್ಕೂ ಖಾಸಗಿ ಸಂಸ್ಥೆಗಳ ನೆರವು ಅಗತ್ಯ” ಎಂದರು.

“ಆದಿವಾಸಿಗಳು ವಾಸಿಸುವ ಮನೆಗಳು ಅತ್ಯಂತ ಶೋಚನಿಯವಾಗಿದೆ. ಗುಡ್ಡಗಾಡು ಗ್ರಾಮಗಳಿಗೆ ಭೇಟಿ ನೀಡಿದರೆ ಕನಿಷ್ಠ ಮಳೆ-ಗಾಳಿ ಯಿಂದ ತಪ್ಪಿಸಿಕೊಳ್ಳಲು ಟಾರ್ಪಲ್ ಕೊಡಿಸಿ ಎಂದು ಜನ ಕೇಳುತ್ತಾರೆ. ಜಿಲ್ಲಾಡಳಿತ ಕೇವಲ 5 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಬಹುದಾದ ಮಾದರಿ ಮನೆ ನಿರ್ಮಿಸಿದ್ದು, 533 ಕುಟುಂಬಗಳಿಗೆ ಸೂರು ಕಲ್ಪಿಸಬೇಕಿದೆ. 18 ಏಕ ಶಿಕ್ಷಕ ಶಾಲೆಗಳಿದ್ದು, ಅವುಗಳಿಗೆ ವಾಹನ ಸೌಕರ್ಯ ಕಲ್ಪಿಸಬೇಕೆಂದು” ಕೋರಿದರು.
ಕ್ರೆಡಾಯ್ ಮೈಸೂರು ಚೇರ್ಮೇನ್ ಶ್ರೀಹರಿ ದ್ವಾರಕನಾಥ್ ಮಾತನಾಡಿ, ನಮ್ಮಲ್ಲಿ 500ಕ್ಕೂ ಹೆಚ್ಚು ರಿಯಲ್ ಎಸ್ಟೇಟ್ ಉದ್ಯಮಿಗಳಿದ್ದಾರೆ. ಕ್ರೆಡಾಯ್ ದೇಶಾದ್ಯಂತ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದ್ದು, ಸಿಎಸ್‌ಆರ್ ನಿಧಿಯ ಮೂಲಕ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ಮೈಸೂರಿನ ಮುಖ್ಯಸ್ಥೆ ಡಾ. ಪುಷ್ಪಲತಾ ಮಾತನಾಡಿ ನಮ್ಮ ಸಂಸ್ಥೆ ಯಲ್ಲಿ ನೂರಾರು ಮಂದಿ ಶ್ರವಣ ಸಮಸ್ಯೆ ಇರುವವರು ಮನವಿ ಮಾಡಿದ್ದಾರೆ.ದಾನಿಗಳು ಆರ್ಥಿಕ ನೆರವು ಕೋರಿದರು.

ಮೈಸೂರು ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ್ ರೆಡ್ಡಿ ಮಾತನಾಡಿ ಸಿಎಸ್‍ಆರ್ ಮೂಲಕ ಮೈಸೂರಿನಲ್ಲಿ ಕೈಗೊಳ್ಳಬಹುದಾದ ಯೋಜನೆಗಳ ಅವಕಾಶಗಳನ್ನು ಪ್ರಸ್ತಾಪಿಸಿ, ಕೈಗಾರಿಕೆ–ಸರ್ಕಾರದ ಸಹಭಾಗಿತ್ವಕ್ಕೆ ಆಹ್ವಾನ ನೀಡಿದರು. ಮೈಸೂರು ಸಿಐಐ ಅಧ್ಯಕ್ಷ ನಾಗರಾಜ ಗರ್ಗೇಶ್ವರಿ ಹಾಗೂ ಕ್ರೆಡೈ ಅಧ್ಯಕ್ಷರಾದ ಶ್ರೀಹರಿ ಚಾಮರಾಜನಗರ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿ ಸಿಎಸ್‍ಆರ್ ಯೋಜನೆಗಳನ್ನು ಕೈಗೊಳ್ಳುವ ಉದ್ದೇಶವನ್ನು ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಮಡಿಕೇರಿ | ಕೊಡಗು ಅಭಿವೃದ್ಧಿ ಸಮಿತಿಯಿಂದ ಅನಧಿಕೃತ ಅಂಗಡಿಗಳ ತೆರವುಗೊಳಿಸುವಂತೆ ಮನವಿ
ಕಾರ್ಯಕ್ರಮದಲ್ಲಿ ರೋಟರಿ ಗವರ್ನರ್ ಪಿ. ಕೆ. ರಾಮಕೃಷ್ಣ, ಜಿಲ್ಲಾ ಸಿಎಸ್‍ಆರ್ ಅಧ್ಯಕ್ಷ ಕಿರಣ್ ರಾಬರ್ಟ್, ಚಾಮರಾಜನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಮೈಸೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ಯುಕೇಶ್ ಕುಮಾರ್, ಮೈಸೂರು ನಗರ ಪಾಲಿಕೆ ಆಯುಕ್ತ ಶಹಿಕ್ ತನ್ವೀರ್ ಅಸಿಫ್, ಚಾಮರಾಜನಗರ ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ರೋಟರಿ ಫೌಂಡೇಷನ್ ಇಂಡಿಯಾದ ಸಿಎಸ್‌ಆರ್ ವಿಭಾಗದ ಮುಖ್ಯಸ್ಥೆ ಭಾವನಾ ವರ್ಮಾ, ರೋಟರಿ ಜಿಲ್ಲಾ ನಿಯೋಜಿತ ಗೌರ್ನರ್ ಸೋಮಶೇಖರ್ ಸೇರಿದಂತೆ ಹಲವು ಕಂಪನಿಗಳ ಮುಖ್ಯಸ್ಥರು ಇದ್ದರು.