ಮೈಸೂರು ವಿಶ್ವವಿದ್ಯಾನಿಲಯ, ಗಾಂಧಿ ಅಧ್ಯಯನ ಕೇಂದ್ರದ ಗಾಂಧಿ ಭವನದಲ್ಲಿ ಸರಳವಾಗಿ ನಡೆದ ಗಾಂಧಿ ಜಯಂತಿಯಲ್ಲಿ ಹಿರಿಯ ಗಾಂಧೀವಾದಿ ಕೆ.ಟಿ.ವೀರಪ್ಪ ಮಾತನಾಡಿ ‘ಸತ್ಯ, ಸರಳತೆ, ಸೌಹಾರ್ದತೆ, ಸಹಿಷ್ಣುತೆ ವರ್ತಮಾನದ ಭಾರತಕ್ಕೆ’ ಅಗತ್ಯ ಎಂದರು.
“ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಯುದ್ಧ, ಭ್ರಷ್ಟಾಚಾರ, ಅನೈತಿಕ ರಾಜಕಾರಣ, ನಿರುದ್ಯೋಗ, ಅಣ್ವಸ್ತ್ರ ಪ್ರಯೋಗ, ಹೀಗೆ ಮಾನವಕುಲ ಸಂಕಷ್ಟಕ್ಕೆ ಸಿಲುಕಿದೆ. ಈಗ ಗಾಂಧಿಜೀ ಅವರ ಶಾಂತಿ, ಅಹಿಂಸೆ, ವಿಶ್ವಭಾತೃತ್ವ, ಪರಮತ ಸಹಿಷ್ಣುತೆ ವಿಚಾರಗಳು ಸಮಕಾಲೀನ ಜಗತ್ತಿಗೆ ಅತ್ಯಗತ್ಯ” ಎಂದು ತಿಳಿಸಿದರು.
ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ.ಎಸ್ ನರೇಂದ್ರ ಕುಮಾರ್ ಮಾತನಾಡಿ “ಗಾಂಧಿ ಕನಸಿನ ಭಾರತ ಮತ್ತು ಭಾರತ ಸಂವಿಧಾನದ ಪ್ರಸ್ತಾವನೆ ಎರಡೂ ಒಂದೇ ಆಗಿದೆ. ಭಾರತದ ಸಂವಿಧಾನದಲ್ಲಿ ಗಾಂಧಿಜೀಯ ಆಶಯ ಅಡಗಿದೆ. ಹಾಗಾಗಿ, ನಮ್ಮ ಸಂವಿಧಾನ ಗಾಂಧಿಜೀ ಅವರ ಧ್ಯೇಯೋದ್ದೇಶಗಳನ್ನು ಸಾಕಾರಗೊಳಿಸುವ ಮಾರ್ಗ ಆಗಿದೆ” ಎಂದರು.
ನಾಡಹಬ್ಬ ದಸರಾ ಕಾರಣದಿಂದಾಗಿ ನಡೆಯಬೇಕಿದ್ದ ಗಾಂಧಿ ಜಯಂತಿ ಕಾರ್ಯಕ್ರಮದ ವಿಶೇಷ ಉಪನ್ಯಾಸವನ್ನು ದಿನಾಂಕ-13-10-2025 ರಂದು ಮೈಸೂರು ವಿಶ್ವವಿದ್ಯಾನಿಲಯದ ಗಾಂಧಿ ಅಧ್ಯಯನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ತಪ್ಪದೇ ಭಾಗವಹಿಸಬೇಕಾಗಿ ಕೋರಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ; ಪೊಲೀಸರಿಂದ ‘ಬಿ’ ರಿಪೋರ್ಟ್ ಸಲ್ಲಿಕೆ
ಕಾಯ೯ಕ್ರಮದಲ್ಲಿ ಉಪನ್ಯಾಸಕರಾದ ಡಾ. ಟಿ.ಮಂಜು, ಡಾ.ಉಮೇಶ್, ಡಾ.ರಮೇಶ್ ಡಾ.ರಾಮರಾಜು, ಡಾ.ಪ್ರತಾಪ್, ಸಂಶೋಧನಾ ವಿದ್ಯಾರ್ಥಿಗಳಾದ ಸುಪ್ರೀತ್, ಪರಶುರಾಮ, ನಾಗರಾಜು, ಬೋಧಕೇತರ ಸಿಬ್ಬಂದಿ ಮತ್ತು ಇತರರು ಇದ್ದರು.